ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ವಿಠಲನಗರದ ಮೊದಲ ತಿರುವಿನಲ್ಲಿ ಒಳ ನಡೆದರೆ, ಸ್ಪೂರ್ತಿ ಐಟಿಐ ಕಾಲೇಜ್ ಕಾಣುತ್ತದೆ. ಸ್ವಲ್ಪ ಹಿಂದಕ್ಕೆ ಚಲಿಸಿದರೆ, ಬೇವಿನ ಮರದಡಿ ಒಂದು ಪೆಟ್ಟಿಗೆ ಡಬ್ಬಿ, ಅದರೊಳಗಿಂದ ಹಾಡಿನ ಸದ್ದು ಕೇಳುತ್ತದೆ. ಪೆಟ್ಟಿಗೆ ಅಂಗಡಿಯಲ್ಲಿ ಕುಳಿತು ಹಾಡುವವರು ಯಾರಿರಬಹುದು ಎಂಬ ಕುತೂಹಲದಿಂದಲೇ ಹತ್ತಿರ ಹೋದರೆ, ತೆಳ್ಳಗೆ ಸಪೂರವಾಗಿರುವ ಕಪ್ಪಗಿನ ವ್ಯಕ್ತಿಯೊಬ್ಬ ಬೆವರ ಸ್ನಾನದೊಂದಿಗೆ ಇಸ್ತ್ರಿ ಮಾಡುತ್ತಿರುವುದು ಕಾಣುತ್ತದೆ. ಇನ್ನಷ್ಟು ಕಣ್ಣರಳಿಸಿ ಪೆಟ್ಟಿಗೆ ಅಂಗಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಲಾಗಿ ಒತ್ತರಿಸಿಟ್ಟ ಪುಸ್ತಕಗಳು ಎದುರಾಗುತ್ತವೆ. ಇದೇನು ಪುಟ್ಟ ಗ್ರಂಥಾಲಯವೋ, ಇಸ್ತ್ರಿ ಅಂಗಡಿಯೋ ಎನ್ನುವ ಪ್ರಶ್ನೆ ಜೊತೆಯಾಗುತ್ತದೆ. ಹಾಗೆಯೇ ಕುತೂಹಲಕ್ಕೆ ಆತನನ್ನು ಮಾತಿಗೆಳೆದರೆ ಹಾಡುಪಾಡಿನ ಮಾತುಕತೆ ಆರಂಭವಾಗುತ್ತದೆ.
ಈತ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ ಸ್ವರಚಿತ ಕತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಮಾಡುವ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ, ಸಣ್ಣಾಟ…ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು. ಕೊನೆಗೆ ಅವರನ್ನು ಕೈಹಿಡಿದದ್ದು ಸ್ವರಚಿತ ಕವಿತಾ ವಾಚನ ಮತ್ತು ಹಾಡಿಕೆ.
ನಾಗೇಂದ್ರಪ್ಪ ಇದೀಗ ಕವನ ಸಂಕಲನ ಪ್ರಕಟಿಸುವ ತಯಾರಿಯಲ್ಲಿದ್ದಾರೆ. ಹೀಗೆ ಪ್ರಕಟಿತ ಸಂಕಲನ ತರುವ ಮುಂಚೆಯೇ ಜನರ ಹಾಡಿಕೆಗಳಲ್ಲಿ ಇವರ ಕೆಲವು ಕತೆಗಳು ಬೆರೆತಿವೆ. ಈ ಅರ್ಥದಲ್ಲಿ ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕಗಳ ಜತೆ ಹೋಲಿಸಲಾಗದು. ಅವರ ಕತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ.
ಬದಲಾಗಿ ತನ್ನ ಸುತ್ತಮುತ್ತಣ ಯಕಃಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳಲ್ಲಿ ಜನಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವ ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈತನಕ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವಿತೆಗಳನ್ನು ಹಾಡಿದ್ದಾರೆ. ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
ಡಾ.ರಾಜ್, ವಿಷ್ಣುವರ್ಧನ್, ತೆಲುಗು ನಟ ಚಿರಂಜೀವಿ, ಕನ್ನಡ ನಾಡುನುಡಿ ಮುಂತಾದ ಜನಪ್ರಿಯ ಸಂಗತಿಗಳ ಬಗ್ಗೆಯೂ ಹಾಡು ಕಟ್ಟಿದ್ದಾರೆ. ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ.
ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸುತ್ತಲೇ ಕತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಈತನಕ ಐದುನೂರಕ್ಕೂ ಹೆಚ್ಚು ಹಾಡು ಕಟ್ಟಿರುವ ಇವರು ನಿಂತಲ್ಲಿಯೇ ಹತ್ತಾರು ಪದ್ಯ ಗಳನ್ನು ನೆನಪಿನಿಂದ ಹಾಡುತ್ತಾರೆ. ಸದ್ಯಕ್ಕೆ 63 ವರ್ಷದ ನಾಗೇಂದ್ರಪ್ಪ ಮಡದಿ ಜಯಮ್ಮ, ಮಕ್ಕಳಾದ ಶಿವಕುಮಾರ್ ಚಿರಂಜೀವಿ ಮತ್ತು ನಾಲ್ಕು ಮೊಮ್ಮಕ್ಕಳ ಜತೆ ಬದುಕಿನ ಬಂಡಿ “ಇಸ್ತ್ರಿ ಅಂಗಡಿ’ಯೊಂದಿಗೆ ಜೀವನ ನಡೆಸುತ್ತಿದ್ದಾರೆ.
ಅರುಣ್ ಜೋಳದ ಕೂಡ್ಲಿಗಿ