Advertisement

ಗ್ರಾಮೀಣ ಸಂಸ್ಕೃತಿ ಬಿಂಬಿಸಿದ ಜಾನಪದ ಹುಗ್ಗಿ-ಸುಗ್ಗಿ

10:25 AM Mar 30, 2018 | |

ಚನ್ನಗಿರಿ: ಆಧುನಿಕ ಯುಗದಲ್ಲಿ ಗ್ರಾಮೀಣ ಸೊಗಡಿನ ಜೀವನದ ಶೈಲಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಒಂದೆಡೆ ಕಣ್ಮುಂದೆ ತರುವ ವೇಷ ಭೂಷಣದೊಂದಿಗೆ ವಿದ್ಯಾರ್ಥಿಗಳು ಗಮನ ಸೆಳೆದರು.

Advertisement

ಪಟ್ಟಣದ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜ್‌ ಹಾಗೂ ಸ್ನಾತಕೋತ್ತರ ಕೇಂದ್ರ ವಿದ್ಯಾರ್ಥಿಗಳಿಂದ ಭಾರತೀಯ ಸಂಸ್ಕೃತಿಯ ಬಹುತ್ವದ ಹೆಜ್ಜೆ ಗುರುತು ಅನಾವರಣ ಮಾಡುವಂತಹ ವೈವಿಧ್ಯಮಯ ಉಡುಗೆ-ತೊಡುಗೆಗಳ ಜಾನಪದ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಗ್ರಾಮೀಣ ಬದುಕು, ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಝಲಕ್‌ ಒಂದೆಡೆ ಸೃಷ್ಟಿಸಿದ್ದು ನೊಡುಗರಿಗೆ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿತ್ತು. 

ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳಾದ ಪಂಚೆ, ಶರ್ಟ್‌, ಶಾಲು, ಹಾಗೂ ಯುವತಿಯರು ಬಣ್ಣ-ಬಣ್ಣದ ರೇಷ್ಮೆ ಸೀರೆ ತೊಟ್ಟಿದ್ದರು. ಇನ್ನೂ ಕೆಲವರು ಲಂಬಾಣಿ ಹಾಗೂ ಕೊಡವರ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ಮೆರುಗು ತಂದರು. 

ಜುಂಜುಂ ಮೇಳ, ಡೊಳ್ಳು ಕುಣಿತ ವಾದ್ಯಗಳೊಂದಿಗೆ ಕಾಲೇಜ್‌ ಆವರಣದಲ್ಲಿ ಯುವತಿಯರ ಕುಂಭಮೇಳದ ಬಳಿಕ ಜಾನಪದ ಸುಗ್ಗಿ-ಹುಗ್ಗಿ ಕಾರ್ಯಕ್ರಮಕ್ಕೆ ಜಾನಪದ ಕಲಾವಿದೆ ಪಾರ್ವತಮ್ಮ ಚಾಲನೆ ನೀಡಿದರು. 

ಟಗರಿನ ಕಾಳಗ: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ ಹಬ್ಬದ ದಿನಗಳಲ್ಲಿ, ಸುಗ್ಗಿ ಸಂದರ್ಭದಲ್ಲಿ ಟಗರಿನ ಕಾಳಗ ಆಯೋಜಿಸಲಾಗುತ್ತಿತ್ತು. ಪ್ರಸ್ತುತ ಅಂತಹ ಪದ್ಧತಿಗಳು ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಅದನ್ನು ಮತ್ತೆ ಆಯೋಜಿಸವ ಮೂಲಕ ಗಮನ ಸೆಳೆಯಲಾಯಿತು.

Advertisement

ಶೃಂಗರಿಸಿದ ಎತ್ತಿನಗಾಡಿಯಲ್ಲಿ ಕಾಲೇಜ್‌ ಅವರಣದಲ್ಲಿ ವಿದ್ಯಾರ್ಥಿಗಳು ಸಂಚರಿಸಿದರು. ಹಳ್ಳಿಗಳಲ್ಲಿ ಇರುವಂತಹ ಪಂಚಾಯಿತಿ ಕಟ್ಟೆ, ಬಾವಿಕಟ್ಟೆ, ಹಳ್ಳಿಮನೆ, ಗುಡಿಸಲು, ದನ ಕೊಟ್ಟಿಗೆ, ಕೆರೆ ಕಟ್ಟೆಗಳ ನಿರ್ಮಾಣ, ಭತ್ತ ನಾಟಿ ಮಾಡುವ ಗದ್ದೆ, ಅರೋಗ್ಯ ಕೇಂದ್ರ, ಮದುವೆ ಮನೆ, ದೇವಸ್ಥಾನ ನಿರ್ಮಿಸಲಾಗಿತ್ತು. ಇನ್ನು ಗ್ರಾಮೀಣ ಆಹಾರ ಪದಾರ್ಥಗಳಾದ ರಾಗಿ, ಜೋಳ, ಅಕ್ಕಿ ರಾಶಿ ಹಾಕಲಾಗಿತ್ತು, ಹಬ್ಬ ಹರಿದಿನಗಳಾದ ಚೌಡಮ್ಮನ ಜಾತ್ರೆ, ಲಂಬಾಣಿ ನೃತ್ಯ, ಕೊಡಗು ನೃತ್ಯ, ಕೆರೆಏರಿ ಚೌಡಮ್ಮ, ಈದ್‌ಮಿಲಾದ್‌,
ಕುಕ್ಕವಾಡೇಶ್ವರಿ ಜಾತ್ರೆ, ದಸರಾ ಹಬ್ಬ, ಗಣೇಶ್‌ ಚತುರ್ಥಿ, ಗ್ರಾಮೀಣ ಕ್ರೀಡೆಗಳಾದ ಲಗೋರಿ, ಕುಂಟೆಬಿಲ್ಲೆ, ಹಳ್ಳಿಹಕ್ಕಿ ಹಾಡು, ಸೇರಿದಂತೆ ವಿವಿಧ ಗ್ರಾಮೀಣ ಬದುಕಿನ ಕ್ಷಣಗಳನ್ನು ಒಂದೇ ಸ್ಥಳದಲ್ಲಿ ಆಚರಿಸಿ, ಆಡಿ ಸಂಭ್ರಮಪಟ್ಟರು.

ಈ ವೇಳೆ ಅಂಧ ಕಲಾವಿದರು ಜಾನಪದ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಕಾಲೇಜ್‌ನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದರು. ಕೊನೆಗೆ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಮೂಹಿಕವಾಗಿ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 

„ಸಿ.ಎಸ್‌. ಶಶೀಂದ್ರ ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next