Advertisement

ಎಸ್‌ಜೆಸಿಐಟಿ ಕಾಲೇಜಿನಲ್ಲಿ ಜಾನಪದ ದಸರಾ ವೈಭವ

09:10 PM Oct 05, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಒಂದೆಡೆ ಹಾಡು, ಕುಣಿತಕ್ಕೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು, ಮತ್ತೂಂದೆಡೆ ಭವ್ಯ ವೇದಿಕೆಯಲ್ಲಿ ಫ್ಯಾಷನ್‌ ಶೋ ಝಲಕ್‌..ಎತ್ತ ಕಣ್ಣಾಯಿಸಿದರೂ ಅಲ್ಲಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸಹಪಾಠಿಗಳು. ರಂಗು ರಂಗಿನ ವೇಷ ಭೂಷಣ ತೊಟ್ಟು ಕಾಲೇಜು ಆವರಣದಲ್ಲಿ ಕಂಗೊಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.

Advertisement

ಹೌದು, ಇದೆಲ್ಲಾ ಕಂಡು ಬಂದಿದ್ದು ನಗರದ ಹೊರ ವಲಯದ ಎಸ್‌ಜೆಸಿಐಟಿ ಕ್ಯಾಂಪಸ್‌ನಲ್ಲಿರುವ ಬಿಜಿಎಸ್‌ ಇನ್ಸ್‌ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಆಯೋಜಿಸಿದ್ದ ಜಾನಪದ ದಸರಾ ವೈಭವ-2019ರಲ್ಲಿ ರಾಜ, ರಾಣಿಯರ ವೇಷ ತೊಟ್ಟಿದ್ದ ವಿದ್ಯಾರ್ಥಿಗಳು ಕೆಲಕಾಲ ಕತ್ತಿ, ಗುರಾಣಿ ಹಿಡಿದು ಮಿಂಚಿದರು. ಇಡೀ ಕಾಲೇಜು ಆವರಣ ಮೈಸೂರು ದಸರಾ ನೆನೆಪಿಸುವಂತೆ ಮಾಡಿತು.

ಪ್ರತಿಭೆ ಅನಾವರಣ: ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ಕ್ರೀಡೆಗಳಾದ ಅಳಗುಳಿಮನೆ, ಚೌಕಾಬಾರ, ಲಗೋರಿ, ಮಡಕೆ ಹೊಡೆಯುವುದು ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಯಿತು.

ವಿವಿಧ ರಾಜ್ಯಗಳ ಸಂಸ್ಕೃತಿ ಅನಾವರಣ: ದೇಶ ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ ಜಾನಪದ ನೃತ್ಯಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರತಿ ವಿದ್ಯಾರ್ಥಿಯು ಒಂದೊಂದು ಕಲೆಯಲ್ಲಿ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಕಾಲೇಜಿನ ಬಿಬಿಎ, ಬಿ.ಕಾಂ ಹಾಗೂ ಎಂ.ಕಾಂನ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳ ಜೊತೆಗೆ ವಿವಿಧ ರಾಜ್ಯಗಳ ಸಂಸ್ಕೃತಿ ಅನಾವರಣಗೊಳಿಸಲು ವಿಶೇಷ ಅವಕಾಶ ಕಲ್ಪಿಸಲಾಗಿತ್ತು.

ವಿದ್ಯಾರ್ಥಿಗಳು ಓದಿನ ಜೊತೆಗೆ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕೆಂದು ಜಾನಪದ ದಸರಾ ವೈಭವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್‌ ಮೆಮೋರಿ ಕೌನ್ಸಿಲ್‌ನ ಅಧ್ಯಕ್ಷರು ಹಾಗೂ ಗಿನ್ನಿಸ್‌ ದಾಖಲೆ ವಿಜೇತರಾದ ಜಯಸಿಂಹ ತಿಳಿಸಿದರು.

Advertisement

ಆಯುಧ ಪೂಜೆ: ಕಾರ್ಯಕ್ರಮದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಲವು ವೇಷಭೂಷಣಗಳನ್ನು ತೊಟ್ಟು ವಿದ್ಯಾರ್ಥಿಗಳು ಗಮನ ಸೆಳೆದರೆ ನಮ್ಮ ನಾಡಿನ ಕೆಲವು ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ, ಸಂಸ್ಥೆಯ ಪ್ರಾಂಶುಪಾಲ ವೆಂಕಟೇಶ್‌ ಬಾಬು ಹಾಗೂ ಡೀನ್‌ ದೊಡ್ಡೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜೇತರಿಗೆ ಬಹುಮಾನ: ಜಾನಪದ ದಸರಾ ವೈಭವದಲ್ಲಿ ಗಾಯನ ,ರಂಗೋಲಿ, ಮೆಹಂದಿ ಮತ್ತಿತರ ಸುಮಾರು 20ಕ್ಕೂ ಹೆಚ್ಚಿನ ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ಪಾಮೀಜಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಅಂತಿಮ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಯುವ ಕವಿ ಉದಯ್‌ಕಿರಣ್‌ರನ್ನು ಸನ್ನಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next