Advertisement

ಪರ್ಯಾಯ ಮಾರ್ಗ ಚಿಂತನೆ ಇಲ್ಲದ ಫ್ಲೈಓವರ್‌

05:34 PM Nov 26, 2021 | Team Udayavani |

ಹುಬ್ಬಳ್ಳಿ: ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ಕಾಮಗಾರಿಗೆ ತೊಂದರೆ, ವಾಹನ ಸವಾರರ ಅನುಕೂಲಕ್ಕಾಗಿ ಇರುವ ಪರ್ಯಾಯ ಮಾರ್ಗಗಳ ಸಿದ್ಧತೆ ಬಗ್ಗೆ ಗಮನ ಹರಿಸಿಲ್ಲ. ಯೋಜನೆಗೆ ತೋರುವ ಕಾಳಜಿ ಪೂರ್ವ ತಯಾರಿ ಹಾಗೂ ನಂತರದಲ್ಲಿ ಕಾಣದಿರುವುದು ಹೊಸ ಯೋಜನೆಗಳೆಂದರೆ ನಗರದ ಜನರು ಬೆಚ್ಚಿ ಬೀಳುವಂತಾಗಿದೆ.

Advertisement

ಮೊದಲ ಹಾಗೂ ಉತ್ತಮ ಯೋಜನೆಯಾಗಿದ್ದ ಬಿಆರ್‌ಟಿಎಸ್‌ ಅನುಷ್ಠಾನದಲ್ಲಾದ ಎಡವಟ್ಟುಗಳಿಂದ 10 ವರ್ಷ ಸಮೀಪಿಸುತ್ತಿದ್ದರೂ ಪೂರ್ಣಗೊಂಡಿಲ್ಲ. ಇನ್ನು ನಗರದಲ್ಲಿ ನಡೆಯುತ್ತಿರುವ ಸಿಆರ್‌ಎಫ್‌ ಕಾಂಕ್ರೀಟ್‌ ರಸ್ತೆಗಳಿಗೆ ಅನುದಾನ ಕೊರತೆ, ಭೂ ಸ್ವಾಧೀನ ಕಾರಣಗಳಿಂದ ಅದ್ವಾನದ ಯೋಜನೆಯಾಗಿ ಜನರಿಗೆ ಶಾಪವಾಗಿವೆ. ಅಧಿಕಾರಿಗಳು ಹಾಗೂ ಇಲಾಖೆ ನಡುವಿನ ಸಮನ್ವಯ ಇಲ್ಲದಿರುವುದು, ಸಕಾಲದಲ್ಲಿ ಪೂರ್ಣಗೊಳಿಸಬೇಕು ಎನ್ನುವ ಇಚ್ಛಾಶಕ್ತಿ ಜನಪ್ರತಿನಿಧಿಗಳಲ್ಲಿ ಇಲ್ಲದಿರುವ ಕಾರಣ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇದೀಗ ನಗರದ ಹೃದಯ ಭಾಗದಲ್ಲಿ ಫ್ಲೈಓವರ್‌ ನಿರ್ಮಾಣ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪರ್ಯಾಯ ರಸ್ತೆ ಮೊದಲಾಗಲಿ: ಫ್ಲೈಓವರ್‌ ನಾಲ್ಕು ವರ್ಷದ ಯೋಜನೆಯಾಗಿದೆ. ಪ್ರಗತಿಯಲ್ಲಿರುವ ಯೋಜನೆಗಳ ಆಮೆಗತಿಯಿಂದ ನಿಗದಿಪಡಿಸಿದ ಅವಧಿಯೊಳಗೆ ಫ್ಲೆ$çಓವರ್‌ ಪೂರ್ಣಗೊಳ್ಳುವ ಎನ್ನುವ ವಿಶ್ವಾಸ ಜನರಲ್ಲಂತೂ ಇಲ್ಲ. ಕಿತ್ತೂರು ಚನ್ನಮ್ಮ ವೃತ್ತ ನಾಲ್ಕು ದಿಕ್ಕಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌. ಇಂತಹ ಸ್ಥಳದಲ್ಲಿ ಕಾಮಗಾರಿ ನಡೆಯುವಾಗ ಮಿತಿಮೀರಿದ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ ಕೂಡ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಕೆಲಸ ಪಾಲಿಕೆ ಅಥವಾ ಜಿಲ್ಲಾಡಳಿತದಿಂದ ನಡೆದಿಲ್ಲ. ಪರ್ಯಾಯ ರಸ್ತೆಗಳನ್ನು ತಯಾರಿ ಮಾಡಿಕೊಳ್ಳದ ಹೊರತು ಫ್ಲೈಓವರ್‌ ಕಾಮಗಾರಿ ಆರಂಭಿಸಬಾರದು. ಇಲ್ಲದಿದ್ದರೆ ಬಿಆರ್‌ಟಿಎಸ್‌ ಆಗಲಿದೆ ಎನ್ನುವುದು ಜನರ ಒತ್ತಾಯವಾಗಿದೆ.

ಅಧ್ವಾನದ ಯೋಜನೆ: ಇಂಡಿಪಂಪ್‌- ಹೆಗ್ಗೇರಿ- ಗೋಕುಲ ರಸ್ತೆ-ಶಿರೂರಪಾರ್ಕ್‌-ಉಣಕಲ್ಲ ಸಿಆರ್‌ಎಫ್‌ ರಸ್ತೆ ಪೂರ್ಣಗೊಂಡಿದ್ದರೆ ಕಾರವಾರ ರಸ್ತೆ ಮೂಲಕ ಬರುವ ವಾಹನಗಳು ಈ ರಸ್ತೆ ಮೂಲಕ ಓಡಾಡುತ್ತಿದ್ದವು. ಭೂಸ್ವಾಧೀನ, ಬಿಲ್‌ ಬಾಕಿಯಿಂದ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಅಂಚಟಗೇರಿ-ಗದಗ ರಸ್ತೆಯವರೆಗಿನ ಕಾಂಕ್ರೀಟ್‌ ರಸ್ತೆ ಆಮೆಗತಿಯಲ್ಲಿ ನಡೆಯುತ್ತಿದ್ದು, ಇದು ಪೂರ್ಣಗೊಂಡಿದ್ದರೆ ಹೊಸೂರು ಟರ್ಮಿನಲ್‌ ಗೆ ಬರುವ ಬಸ್‌ಗಳಿಗೆ, ಈ ಮಾರ್ಗದ ಮೂಲಕ ಹೋಗುವ ವಾಹನಗಳಿಗೆ ಅನುಕೂಲವಾಗುತ್ತಿತ್ತು. ಇನ್ನು ವಾಣಿ ವಿಲಾಸ ವೃತ್ತದಿಂದ ಸುಮಾರು 600 ಮೀ. ರಸ್ತೆ ಇಲ್ಲದಂತಾಗಿದ್ದು, ವಾಹನ ಸವಾರರು ನಿತ್ಯವೂ ಶಾಪ ಹಾಕುತ್ತಿದ್ದಾರೆ.

ಕಣ್ಣಿಗೆ ಕಾಣುತ್ತಿಲ್ಲವೋ: ಈಗಾಗಲೇ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಮುಂಭಾಗದಲ್ಲಿ ಫ್ಲೈಓವರ್‌ ಕಾಮಗಾರಿ ಆರಂಭವಾಗಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಸಂಚಾರ ದಟ್ಟಣೆ ಹೇಳ ತೀರದಾಗಿದೆ. ವಾಣಿ ವಿಲಾಸ್‌ ವೃತ್ತದ ಬಳಿಯ ವಿಕಾಸನಗರದ ರಾಜ ಕಾಲುವೆ ಮೇಲಿನ ಸೇತುವೆ ಅಗಲೀಕರಣ ಹಾಗೂ ಒಂದಿಷ್ಟು ರಸ್ತೆಯಾದರೆ ಗಿರಣಿಚಾಳ-ಕಮರೀಪೇಟೆ ಹಾಗೂ ಕಾರವಾರ ರಸ್ತೆ ಮೂಲಕ ವಾಹನಗಳ ಸಂಚಾರ ಸುಗಮವಾಗಲಿದೆ. ಆದರೆ ಕಾಂಕ್ರೀಟ್‌
ರಸ್ತೆಯಾಗಿ ಮೂರ್‍ನಾಲ್ಕು ವರ್ಷ ಕಳೆದರೂ ಸೇತುವೆ ಒಂದಿಷ್ಟು ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಪಕ್ಕದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದ್ದರೂ ಹೆಸ್ಕಾಂಗೆ ಸೇರಿದ ವಿದ್ಯುತ್‌ ಬಾಕ್ಸ್‌, ಟ್ರಾಫಿಕ್‌ ಸಿಗ್ನಲ್‌ ತೆರವುಗೊಳಿಸಿಲ್ಲ. ಹೀಗಾಗಿ ಹೊಸ ಕೋರ್ಟ್‌, ಹೊಸೂರು ಟರ್ಮಿನಲ್‌ ಗೆ ಬಸ್‌ಗಳು, ವಿಮಾನ ನಿಲ್ದಾಣ ಕಡೆಯಿಂದ ಶಿರೂರು ಪಾರ್ಕ್‌, ವಿದ್ಯಾನಗರ, ಧಾರವಾಡ ಕಡೆಗೆ ವಾಹನಗಳು ಸಂಚರಿಸಲಿವೆ.

Advertisement

ಇಂಡಿ ಪಂಪ್‌-ಉಣಕಲ್ಲ, ಕಮರೀಪೇಟೆ-ಉಣಕಲ್ಲ ರಸ್ತೆಗಳು ಪೂರ್ಣಗೊಂಡರೆ ಬೆಂಗಳೂರು, ಕಾರವಾರ ಮಾರ್ಗದ ವಾಹನಗಳು ಕಿತ್ತೂರು ಚನ್ನಮ್ಮ ವೃತ್ತಕ್ಕೆ ಬಾರದಂತೆ ತಡೆಯಬಹುದಾಗಿದೆ. ಇನ್ನು ಚನ್ನಮ್ಮ ವೃತ್ತದಲ್ಲಿ ಕಾಮಗಾರಿ ಆರಂಭವಾದರೆ ಗದಗ ಕಡೆಗೆ ಹೋಗುವ ವಾಹನಗಳಿಗೆ ದೇಸಾಯಿ ವೃತ್ತ-ಪಿಂಟೋ ವೃತ್ತದ ಮೂಲಕ ಕಳುಹಿಸಬಹುದಾಗಿತ್ತು. ಆದರೆ ಬಸ್‌, ಲಾರಿಗಳು ಹೋಗದಂತಹ ಅವೈಜ್ಞಾನಿಕ ಸೇತುವೆಯಿಂದ ಈ ಭಾಗದಲ್ಲಿ ಪರ್ಯಾಯ ಮಾರ್ಗ ಇಲ್ಲದಂತಾಗಿದೆ. ಇನ್ನು ಕೋರ್ಟ್‌ ವೃತ್ತದಲ್ಲಿನ ಮಲ್ಟಿ ಲೇವಲ್‌ ಪಾರ್ಕಿಂಗ್‌ ಬುಡ ಬಿಟ್ಟು ಮೇಲೇಳುತ್ತಿಲ್ಲ. ಹೀಗಾಗಿ ಸಾಯಿಬಾಬಾ ಮಂದಿರದ ಮುಂದಿನ ರಸ್ತೆ ಬಳಕೆಗೆ ಇಲ್ಲದಂತಾಗಿದೆ.

ಸಲಹಾ ಸಮಿತಿ ಕಾಳಜಿ ತೋರಬೇಕಿತ್ತು!
ಫ್ಲೈಓವರ್‌ ನಿರ್ಮಾಣ ಕುರಿತು ಅಪಸ್ವರಗಳು ಎದುರಾದ ಸಂದರ್ಭದಲ್ಲಿ ಪರಿಣಿತರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ಯೋಜನೆ ಕುರಿತ ಗೊಂದಲ, ಒಂದಿಷ್ಟು ತಾಂತ್ರಿಕ ನೂನ್ಯತೆಗಳ ಸರಿಪಡಿಸಿ ಫ್ಲೈಓವರ್‌ ನಿರ್ಮಾಣ ಅನಿವಾರ್ಯ ಎಂದು ವರದಿ ನೀಡಿತು. ಆದರೆ ಕಾಮಗಾರಿ ಆರಂಭವಾಗುವ ಮುನ್ನವೇ ಪರ್ಯಾಯ ಮಾರ್ಗಗಳ ತಯಾರಿ ಮಾಡಿಕೊಳ್ಳುವ ಗಮನ ಸೆಳೆಯಬೇಕಾಗಿತ್ತು. ಹೀಗಾಗಿ ಮೂರ್‍ನಾಲ್ಕು ವರ್ಷಗಳಿಂದ ತೆವಳುತ್ತ ಸಾಗಿರುವ ರಸ್ತೆ ಕಾಮಗಾರಿಗಳಾದರೂ ಪೂರ್ಣಗೊಳ್ಳುತ್ತಿದ್ದವು. ಆಗಲಾದರೂ ಯೋಜನೆ ತಂದವರಿಗೆ, ಗುತ್ತಿಗೆದಾರರಿಗೆ, ಇಲ್ಲಿನ ಅಧಿಕಾರಿಗಳಿಗೆ ಜನರಿಂದ ವಾಚಾಮಗೋಚರವಾಗಿ ತೆಗಳಿಸಿಕೊಳ್ಳುವುದು ತಪ್ಪುತ್ತಿತ್ತೇನೋ?

ಫ್ಲೈಓವರ್‌ ಕಾಮಗಾರಿ ಆರಂಭಿಸುವ ಮುನ್ನ ಪರ್ಯಾಯ ಮಾರ್ಗಗಳನ್ನು ಮೊದಲು ಸಿದ್ಧಪಡಿಸಿಕೊಳ್ಳಬೇಕು. ಈ ಮಾರ್ಗಗಳಲ್ಲಿನ ಒತ್ತುವರಿಯನ್ನು ಯಾವುದೇ ಮುಲಾಜಿಯಿಲ್ಲದೆ ಮೊದಲು ತೆರವುಗೊಳಿಸಬೇಕು. ಕಿತ್ತೂರು ಚನ್ನಮ್ಮ ವೃತ್ತಕ್ಕೆ ಬರುವ ವಾಹನಗಳಿಗೆ ಪರ್ಯಾಯ ರಸ್ತೆಗಳ ತಯಾರಿ ಮಾಡಿಕೊಳ್ಳದಿದ್ದರೆ ಜನರಿಗೆ ದೊಡ್ಡ ತೊಂದರೆಯಾಗಲಿದೆ. ಅಧಿಕಾರಿಗಳು ಇದಕ್ಕೆ ಮೊದಲ ಆದ್ಯತೆ ನೀಡಬೇಕು.
ವಿನಯ ಜವಳಿ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ

ನಗರದಲ್ಲಿ ಏಕಕಾಲದಲ್ಲಿ ಎಲ್ಲಾ ರಸ್ತೆಗಳನ್ನು ಕೈಗೊಂಡಿರುವುದು ಹಾಗೂ ಆರಂಭಕ್ಕಿದ್ದ ಕಾಳಜಿ ನಂತರದಲ್ಲಿ ಇಲ್ಲ. ಯೋಜನೆ ಅನುಷ್ಠಾನ ಪೂರ್ವ ಕರೆಯುವ ಸಾರ್ವಜನಿಕ ಸಭೆಗಳಲ್ಲಿನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದೆ ಕಾಟಾಚಾರಕ್ಕೆ ಸೀಮಿತಗೊಳಿಸುತ್ತಾರೆ. ಇದರ ಫಲವೇ ಇಂದಿನ ಬಿಆರ್‌ಟಿಎಸ್‌. ಈ ಯೋಜನೆಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಸಭೆಗೆ, ಸಮಿತಿಗೆ ತೆಗೆದುಕೊಳ್ಳದೆ ನೈಜ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಬೇಕು.
ವಿಕಾಸ ಸೊಪ್ಪಿನ, ಹೋರಾಟಗಾರರು.

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next