Advertisement

ಪೀಣ್ಯ ಫ್ಲೈಓವರ್‌ ಕಳಪೆ ಕಾಮಗಾರಿ : ಮೇಲ್ಸೇತುವೆ, ಬ್ರಿಡ್ಜ್ ಗಳ ಪರೀಕ್ಷೆಗೆ ನಾಗರಿಕರ ಆಗ್ರಹ

11:31 AM Feb 17, 2022 | Team Udayavani |

ಕಳಪೆ ಕಾಮಗಾರಿಯಿಂದಾಗಿ ಕೇವಲ 12 ವರ್ಷಗಳಲ್ಲೇ ಒಡೆಯಬೇಕಾದ ಸಂದಿಗ್ಧತೆಗೆ ತಂದಿರುವ ಪೀಣ್ಯ ಮೇಲ್ಸೇತುವೆ ನಾಗರಿಕರಲ್ಲೂ ಆತಂಕಕ್ಕೆ ಕಾರಣವಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲ ಎಂದು ಸ್ವತಃ ಸಿಎಂ ಬೊಮ್ಮಾಯಿ ಅವರೇ ಮಂಗಳವಾರ ಹೇಳಿದ್ದರು. ಈ ಮಧ್ಯೆ, ಬುಧವಾರದಿಂದ ಲಘುವಾಹನಗಳ ಸಂಚಾರಕ್ಕೆ ಆಸ್ಪದ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೇ 12 ವರ್ಷದಲ್ಲೇ ಹೀಗಾದರೆ, ಮಿಕ್ಕ ಬೃಹತ್‌ ಕಾಮಗಾರಿಗಳ ಕಥೆ ಏನು ಎಂಬ ಪ್ರಶ್ನೆ ಕಾಡಿದೆ. ಇದೇ ವೇಳೆ ತಜ್ಞರ ತಂಡ ಅನೇಕ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದು, ಏನೇ ಆದರೂ, ಎಲ್ಲ ಮುಗಿಯುವವರೆಗೆ ಸಂಚಾರ ಕಷ್ಟವಾಗಲಿದೆ.

Advertisement

ಬೆಂಗಳೂರು: ಪೀಣ್ಯ ಮೇಲ್ಸೇತುವೆ ಭಾರೀ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ತಜ್ಞರು ಹೇಳಿರುವ ಬೆನ್ನಲ್ಲೇ ಬೆಂಗಳೂರಿನ ಇತರೆ ಮೇಲ್ಸೇತುವೆಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಮೂಡಿದೆ. ಇದರ ನಡುವೆ, ಒಂದೊಮ್ಮೆ ಪೀಣ್ಯ ಮೇಲ್ಸೇತುವೆ ಅಧ್ಯಯನದ ನಂತರ ಕೆಡವಬೇಕಾದ ಪರಿಸ್ಥಿತಿ ಎದುರಾದರೆ ಆ ಮಾರ್ಗದ ಸಂಚಾರದ ಕಥೆ ಏನಾಗಬಹುದು ಎಂಬ ಆತಂಕವೂ ಜನರಲ್ಲಿ ಸೃಷ್ಟಿಯಾಗಿದೆ.

ಇದಕ್ಕೆ ಕಾರಣ, ಕಳಪೆ ಕಾಮಗಾರಿಯಿಂದಾಗಿ ಭಾರೀ ವಾಹನಗಳ ಸಂಚಾರ ಅಸಾಧ್ಯ ಎಂದು ಹೇಳಲಾಗಿರುವ 775.70 ಕೋಟಿ ರೂ.ವೆಚ್ಚದ ಪೀಣ್ಯ ಫ್ಲೈ ಓವರ್‌ ನಿರ್ಮಾಣಗೊಂಡು 12 ವರ್ಷ ಕೂಡ ಸಾರ್ವಜನಿಕರ ಬಾಳಿಕೆ ಬಂದಿಲ್ಲ.

ಸಿಲಿಕಾನ್‌ ಸಿಟಿಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಲುವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐಎ) ಪೀಣ್ಯದ ಗೊರಗುಂಟೆ ಪಾಳ್ಯ ಸರ್ಕಲ್‌ ಬಳಿ ಮೇಲ್ಸೆತುವೆ ನಿರ್ಮಾಣಕ್ಕೆ ನವಯುಗ ಎಂಜಿನಿಯರಿಂಗ್‌ ಕಂಪನಿಗೆ ವಹಿಸಿತ್ತು. ಇದರಿಂದಾಗಿ ತುಮಕೂರು ಮತ್ತು ಹಾಸನದ ಕಡೆಗೆ ಸಾಗುವ ಸಂಚಾರ ದಟ್ಟಣೆ ಕಡಿಮೆ ಆಗಿತ್ತು. 2007ರಲ್ಲಿ ನವಯುಗ ಎಂಜಿನಿಯರಿಂಗ್‌ ಕಂಪನಿ ಪೀಣ್ಯ ಫ್ಲೈಓವರ್‌ ಕಾಮಗಾರಿ ಆರಂಭಿಸಿ 2010ರಲ್ಲಿ  ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಸುಮಾರು 4.5 ಕಿ.ಮೀ. ಉದ್ದದ ಈ ಮೇಲ್ಸೇತುವೆ ಗೊರಗುಂಟೆ
ಪಾಳ್ಯ ಸರ್ಕಲ್‌ನಿಂದ ಆರಂಭವಾಗಿ ನಾಗಸಂದ್ರ ಬಳಿಯ ಪಾರ್ಲೆಜಿ ಬಿಸ್ಕೆಟ್‌ ಕಾರ್ಖಾನೆ ಬಳಿ ಕೊನೆಗೊಳ್ಳುತ್ತದೆ. ಆ ಹಿನ್ನೆಲೆಯಲ್ಲಿ ಗೊರುಗುಂಟೆ ಪಾಳ್ಯ ಸರ್ಕಲ್‌ನಲ್ಲಿ ಈ ಫ್ಲೈವರ್‌ ಹತ್ತಿದರೆ ಯಾವುದೇ ರೀತಿಯ ಸಂಚಾರ ಕಿರಿಕಿರಿಯಿಲ್ಲದೆ ನೆಲಮಂಗಲ, ತುಮಕೂರಿನತ್ತ ಸಾಗಬಹುದಾಗಿದೆ. ಆದರೆ ಈಗ ಕಳೆಪೆ ಕಾಮಗಾರಿ ಮತ್ತು ಅಸಮರ್ಪಕ ನಿರ್ಣಹಣೆಯಿಂದಾಗಿ ಮೇಲ್ಸೇತುವೆ ಶಿಥಿಲ ಸ್ಥಿತಿ ತಲುಪಿದೆ. ಹೀಗಾಗಿ ಬಸ್‌, ಲಾರಿ ಸೇರಿದಂತೆ ಇನ್ನಿತರ ವಾಹನಗಳು ಮೇಲ್ಸೇತುವೆ ಮೇಲೆ ಓಡಾಟ ನಡೆಸದ ಪರಿಸ್ಥಿತಿ ಉಂಟಾಗಿದೆ.

ಅಲ್ಲದೆ ಭಾರಿ ವಾಹನಗಳು ಕೆಳಗಡೆಯಿಂದ ಸಂಚರಿಸಲು ಮುಂದಾದರೆ ಇತರೆ ವಾಹನಗಳು ಸಂಚಾರ ನಡೆಸಲು ಕಷ್ಟವಾಗಿ ದಟ್ಟಣೆ ಹೆಚ್ಚುತ್ತದೆ. ನಗರದಲ್ಲಿ ಕಡೆ ಬರುವವರು ಮತ್ತು ನಗರದಿಂದ ಹೋಗುವವರಿಗೆ ನಿತ್ಯಯಾತನೆ ಆಗಲಿದೆ.

Advertisement

ಕಂಪನಿ ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯ
ಏತನ್ಮಧ್ಯೆ ಫ್ಲೈ ಓವರ್‌ ನಿರ್ಮಾಣದ ಕಳಪೆ ಕಾಮಗಾರಿಗೆ ಕಾರಣವಾದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಾಲಿಕೆ ಮಾಜಿ ಮೇಯರ್‌ಗಳು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.ಪರ್ಸೆಂಟೇಜ್‌ ಲೆಕ್ಕಾಚಾರ ಕಳಪೆ ಕಾಮಗಾರಿಗೆ ಕಾರಣವಾಗಿದೆ. ಕಳಪೆ ಕಾಮಗಾರಿಯ ಹಿಂದೆ ಸರ್ಕಾರಿ ಎಂಜನಿಯರ್‌ಗಳು ಕೂಡ ಸೇರಿದ್ದಾರೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಹಾಗೂ ತಪಿತಸ್ಥ ಕಂಪನಿಯ ಕಡೆಯಿಂದಲೇ ಹೊಸ ಫ್ಲೈ ಓವರ್‌ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಲಘು ವಾಹನಗಳ ಸಂಚಾರಕ್ಕೆ ಅವಕಾಶ
ರಾಜಧಾನಿ ಬೆಂಗಳೂರಿನಿಂದ ತುಮಕೂರು, ಮಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲು ಸೇತುವೆಯಲ್ಲಿ ಬುಧವಾರ ಸಂಜೆಯಿಂದ ಲಘು ವಾಹನಗಳ
ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮೇಲು ಸೇತುವೆಯ ಎರಡು ಪಿಲ್ಲರ್‌ಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 57 ದಿನಗಳ ಕಾಲ ದುರಸ್ಥಿ ಕಾರ್ಯ ಹಾಗೂ ಲೋಡ್‌ ಟೆಸ್ಟಿಂಗ್‌ ಕಾರ್ಯ ಪೂರ್ಣಗೊಳಿಸಿತ್ತು. ಇದೀಗ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆ ಮೇರೆಗೆ ಲಘು ವಾಹನಗಳಾದ ದ್ವಿಚಕ್ರ
ವಾಹನಗಳು, ಆಟೋ, ಕಾರುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮಂಗಳವಾರ ರಾತ್ರಿಯೇ ಗೊರಗುಂಟೆಪಾಳ್ಯ ಸಿಗ್ನಲ್‌ ಬಳಿಯ ಮೇಲು ಸೇತುವೆ ಮತ್ತು ಪಾರ್ಲಿಜಿ ಬಿಸ್ಕೆಟ್‌ ಕಾರ್ಖಾನೆ ಮುಂಭಾಗ ಟೋಲ್‌ಗೇಟ್‌ ಬಳಿಯ ಮೇಲು ಸೇತುವೆಗೆ ಭಾರೀ
ವಾಹನಗಳು ಸಂಚರಿಸದಂತೆ ಕಮಾನು ನಿರ್ಮಿಸಲಾಗುತ್ತಿದೆ. ಜತೆಗೆ ಎರಡು ಭಾಗದಲ್ಲೂ ಸಂಚಾರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಇದರೊಂದಿಗೆ ಸೂಚನಾ ಫ‌ಲಕಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ.

ಕಡಿಮೆಯಾಗದ ಸಂಚಾರ ದಟ್ಟಣೆ:
ಮೇಲು ಸೇತುವೆಯಲ್ಲಿ ಲಘು ವಾಹನಗಳಿಗೆ ಅವಕಾಶ ನೀಡಿದರೂ ಗೊರಗುಂಟೆಪಾಳ್ಯದಿಂದ ನಾಲ್ಕು ಕಿ.ಮೀಟರ್‌ ವರೆಗೆ ಸರ್ವೀಸ್‌ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ, ಕೆಲ ಸಗಟು ವಾಹನಗಳ ಸಂಚಾರದಿಂದ ಎಂದಿನಂತೆ ಸಂಚಾರ ದಟ್ಟಣೆ ಇದೆ. ಸಿಗ್ನಲ್‌ ದೀಪಗಳನ್ನು ನಿಷ್ಕ್ರೀಯಗೊಳಿಸಿ, ಸಂಚಾರ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next