Advertisement

ಫ್ಲೈ ಓವರ್‌ ಕೆಳಭಾಗ ಚೆಲುವಿಗೆ ಭೂಷಣವಾಗಲಿ!

12:29 PM Apr 05, 2022 | Team Udayavani |

ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫ್ಲೈ ಓವರ್‌ಗಳು ವಾಹನ ಸಂಚಾರ ಸುಲಲಿತಗೊಳಿಸಲು ಬಹು ಸಹಕಾರಿ; ಆದರೆ ಇದೇ ಫ್ಲೈ ಓವರ್‌ನ ಕೆಳಭಾಗದಲ್ಲಿ ನಿರ್ವಹಣೆಯೇ ಇಲ್ಲದೆ ಗಲೀಜು ಪರಿಸ್ಥಿತಿ! ನಗರ ಪ್ರವೇಶಕ್ಕೆ ಹೆಬ್ಟಾಗಿಲಾಗಿರುವ ಇಲ್ಲಿನ ಕೆಲವು ಫ್ಲೈ ಓವರ್‌ನ ಕೆಳಭಾಗ ಕಸ ಹಾಕುವ ಡಂಪಿಂಗ್‌ ಯಾರ್ಡ್‌ ಆಗಿದ್ದರೆ, ಇನ್ನೂ ಕೆಲವು ಪಾರ್ಕಿಂಗ್‌ ಪ್ರದೇಶವಾಗಿದೆ. ಮತ್ತೆ ಕೆಲವು ಇದ್ದೂ ಇಲ್ಲದಂತಿದೆ. ನಿರ್ವಹಣೆ, ಸುಂದರೀಕರಣ ಮಾಡಿದರೆ ನಗರ ಚೆಲುವಿಗೆ ಇದು ಭೂಷಣವಾಗಬಹುದು.

Advertisement

 

ತೊಕ್ಕೊಟ್ಟು ಫ್ಲೈ ಓವರ್‌

ತೊಕ್ಕೊಟ್ಟು ಫ್ಲೈ ಓವರ್‌ ಇಲ್ಲಿಯವರೆಗೆ ನಿರ್ವಹಣೆಯನ್ನೇ ಕಂಡಿಲ್ಲ. ನಿರಾಶ್ರಿತರಿಗೆ ಆಶ್ರಯತಾಣವಾಗಿ ಇದು ಬದಲಾಗಿದೆ. ಕೊಣಾಜೆ ಉಳ್ಳಾಲ ಕಡೆಯಿಂದ ಹಾಗೂ ಸ್ಥಳೀಯವಾಗಿ ಅತ್ತಿಂದಿತ್ತ ಓಡಾಟಕ್ಕೆ ಈ ಫ್ಲೈ ಓವರ್‌ನ ಕೆಳಭಾಗದಲ್ಲಿಯೇ ಅವಕಾಶವಿದೆ. ಟ್ರಾಫಿಕ್‌ ಚೌಕಿಯಿದೆ. ಬೇರೆ ಬೇರೆ ಕಡೆಗೆ ತೆರಳುವ ಕಾರ್ಮಿಕರು ಇದೇ ಜಾಗದಲ್ಲಿ ನಿಲ್ಲುತ್ತಾರೆ. ಇಲ್ಲಿನ ಫ್ಲೈ ಓವರ್‌ ಕೆಳಭಾಗವನ್ನು ಅಂದಗೊಳಿಸಲು ಅವಕಾಶವಿದೆ. ಫ್ಲೈ ಓವರ್‌ನ ಬದಿಯ ಗೋಡೆಯನ್ನೂ ಆಕರ್ಷಣೀಯ ಮಾಡಲು ಇಲ್ಲಿ ಅವಕಾಶವಿದೆ.

Advertisement

ಪಂಪ್‌ವೆಲ್‌ ಫ್ಲೈ ಓವರ್‌

ಕೇರಳ ಸಹಿತ ದೇಶದ ವಿವಿಧ ಭಾಗಗಳಿಂದ ಮಂಗಳೂರು ನಗರ ಪ್ರವೇಶಕ್ಕೆ ಬಹುಮುಖ್ಯ ಸ್ಥಳ ಪಂಪ್‌ ವೆಲ್‌ ಫ್ಲೈ ಓವರ್‌. ಇಲ್ಲಿನ ಗೋಡೆಯನ್ನು ಕರ್ಣಾಟಕ ಬ್ಯಾಂಕ್‌ ವತಿಯಿಂದ ಸುಂದರೀಕರಣಗೊಳಿಸಲಾಗಿದೆ. ಫ್ಲೈ ಓವರ್‌ ಕೆಳಭಾಗ ಮಾತ್ರ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ರಾತ್ರಿ ಇದು ನಿರಾಶ್ರಿತರ ತಾಣವಾಗುತ್ತಿದೆ. ಜತೆಗೆ ಫ್ಲೆಕ್ಸ್‌ಗಳೇ ತುಂಬಿಕೊಂಡಿದೆ. ಇಲ್ಲಿ ಸುಂದರೀಕರಣ ಮಾಡಲು ಫ್ಲೈ ಓವರ್‌ನ ಕೆಳಭಾಗದ ಮೂರು ಸ್ಥಳದಲ್ಲಿ ಅವಕಾಶವಿದೆ. ಹಿಂದೆ ಮಂಗಳೂರು ನಗರ ಪ್ರವೇಶಕ್ಕೆ ‘ಕಲಶ’ ಸ್ವಾಗತ ನೀಡಿದ ಪ್ರದೇಶವನ್ನು ಅದೇ ಸ್ವರೂಪದಲ್ಲಿ ಅಂದಗೊಳಿಸಲು ಅವಕಾಶವಿದೆ.

ಕುಲಶೇಖರ ಫ್ಲೈ ಓವರ್‌

ಪಡೀಲ್‌ ಹಾಗೂ ಮೂಡುಬಿದಿರೆ ಭಾಗದಿಂದ ಬರುವ ವಾಹನಗಳಿಗೆ ಮುಖ್ಯವಾಗಿ ಸಿಗುವ ಕುಲಶೇಖರ ಫ್ಲೈ ಓವರ್‌ ಕೂಡ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಫ್ಲೈ ಓವರ್‌ ಕೆಳಭಾಗ ತಳ್ಳುಗಾಡಿ, ವಾಹನ ಪಾರ್ಕಿಂಗ್‌ಗೆ ಮೀಸಲಾಗಿದೆ. ಸ್ವತ್ಛತೆ ಗೌಣವಾಗಿದೆ. ಇಲ್ಲಿನ ಸ್ಥಳ ಹಾಗೂ ಫ್ಲೈ ಓವರ್‌ ಗೋಡೆಗಳನ್ನು ಅಂದಗೊಳಿಸಲು ಸಾಧ್ಯತೆಗಳು ಬಹಳಷ್ಟಿವೆ.

ಕುಂಟಿಕಾನ ಫ್ಲೈ ಓವರ್‌

ಬಿಜೈ ಹಾಗೂ ಕಾವೂರು ಭಾಗದಿಂದ ಸಂಪರ್ಕ ಕಲ್ಪಿಸುವ ಕುಂಟಿಕಾನ ಫ್ಲೈ ಓವರ್‌ನ ಕೆಳಭಾಗದಲ್ಲಿಯೂ ನಿರ್ವಹಣೆ ಮರೀಚಿಕೆ ಯಾಗಿದೆ. ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ಇದೆ. ನಗರದ ಮುಖ್ಯ ಜಾಗವಾಗಿರುವ ಇಲ್ಲಿನ ಸ್ಥಳದಲ್ಲಿ ಹಾಗೂ ಫ್ಲೈ ಓವರ್‌ ಗೋಡೆಯನ್ನು ಅಂದಗೊಳಿಸಲು ಸಾಕಷ್ಟು ಅವಕಾಶವಿದೆ.

ಅವಕಾಶಗಳ ಬಳಕೆಯಾಗಲಿ

ಸುರತ್ಕಲ್‌, ಕೂಳೂರು ಹಾಗೂ ಕೊಟ್ಟಾರಚೌಕಿ ಫ್ಲೈ ಓವರ್‌ ಗಳು ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ಸಾಕ್ಷಿಯಾಗಿವೆ. ಇದೇ ಸ್ವರೂಪದಲ್ಲಿ ನಗರದ ಉಳಿದ ಫ್ಲೈ ಓವರ್‌ನ ಕೆಳಭಾಗವನ್ನು ಕೂಡ ಅಂದಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಪಾಲಿಕೆ, ಸಂಘ – ಸಂಸ್ಥೆಗಳು ಮಾತುಕತೆಯ ಮುಖೇನ ಅಭಿವೃದ್ಧಿಯತ್ತ ಹೆಜ್ಜೆ ಇರಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next