Advertisement

ನಾಳೆಯಿಂದ ಫ‌ಲಪುಷ್ಪ ಪ್ರದರ್ಶನ

09:48 AM Aug 09, 2019 | Lakshmi GovindaRaj |

ಬೆಂಗಳೂರು: ಸಾಮಾನ್ಯವಾಗಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆ ದರ್ಬಾರ್‌ ನಡೆಯುತ್ತಿತ್ತು. ಆದರೆ, ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲೂ ಅರಮನೆ ದರ್ಬಾರ್‌ ನಡೆಯಲಿದೆ. ಇದಕ್ಕೆ ಸಸ್ಯಕಾಶಿ ಲಾಲ್‌ಬಾಗ್‌ ವೇದಿಕೆಯಾಗಲಿದೆ.

Advertisement

ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಫ‌ಲಪುಷ್ಪ ಪ್ರದರ್ಶನದಲ್ಲಿ ಅವರ ಸಾಧನೆ ಹಾಗೂ ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಲಕ್ಷಾಂತರ ಹೂವುಗಳನ್ನು ಬಳಿಸಿ ಒಡೆಯರ್‌ ಪುತ್ಥಳಿಗಳು, ಮೈಸೂರು ಜಯಚಾಮರಾಜೇಂದ್ರ ವೃತ್ತ, ಸಿಂಹಾಸನ, ಆನೆಗಳು, ದರ್ಬಾರ್‌ ಹಾಲ್‌, ಸಂಗೀತ ವಾದ್ಯಗಳನ್ನು ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದ್ದು, ಆ.9ರಿಂದ 18ರವರೆಗೆ 210ನೇ “ಫ‌ಲಪುಷ್ಪ ಪ್ರದರ್ಶನ’ ನಡೆಯಲಿದೆ.

ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫ‌ಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್‌, ಮೈಸೂರು ಉದ್ಯಾನಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ 1922ರಿಂದ ಈವರೆಗೆ ಒಟ್ಟು 209 ಫ‌ಲಪುಷ್ಟ ಪ್ರದರ್ಶನಗಳು ಯಶಸ್ವಿಯಾಗಿ ನಡೆಸಿದೆ.

ಪ್ರತಿ ಬಾರಿ ಅಂದಿನ ವಿಶೇಷವನ್ನು ಕೇಂದ್ರಿತವಾಗಿಸಿಕೊಂಡು ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಬಾರಿ ಮೈಸೂರು ಮಹಾ ಸಂಸ್ಥಾನದವನ್ನಾಳಿದ ಕೊನೆಯ ಅರಸ ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಾಬ್ದಿ ಇದ್ದು, ಅವರ ಸಾಧನೆ ಹಾಗೂ ಕೊಡುಗೆಗಳನ್ನು ಪುಷ್ಪ ಪ್ರತಿಕೃತಿಗಳ ಮೂಲಕ ಇಂದಿನ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಆ.9ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್‌ ಗರುಡಾಚಾರ್‌, ಮೇಯರ್‌ ಗಂಗಾಬಿಕೆ ಅಥಿತಿಗಳಾಗಿ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

Advertisement

ಗಾಜಿನ ಮನೆಯ ಪ್ರವೇಶಿಸುತ್ತಿದ್ದಂತೆ ಇಂಡೋ-ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಪುಷ್ಪ ಜೋಡನೆ ಇರಲಿದೆ. ಜತೆಗೆ ಜಯಚಾಮರಾಜ ಒಡೆಯರ್‌ ಅವರ ಪುತ್ಥಳಿ ಸ್ಥಾಪಿಸಲಾಗುತ್ತಿದ್ದು, ಅತಿಥಿಗಳು ಪುಷ್ಪಾರ್ಚನೆ ಮಾಡಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಪುತ್ಥಳಿ ಜತೆಗೆ ಒಡೆಯರ್‌ ಇನ್ನು 5 ಪುತ್ಥಳಿಗಳು ಗಾಜಿನ ಮನೆ ಸುತ್ತಲು ಇರಲಿವೆ ಎಂದರು.

ಹೂಗಳಲ್ಲಿ ಜಯಚಾಮರಾಜ ವೃತ್ತ: ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಮೈಸೂರು ಅರಮನೆಯ ಎಡಬದಿಯಲ್ಲಿರುವ ಜಯಚಾಮರಾಜ ಒಡೆಯರ್‌ ವೃತ್ತದ ಮಾದರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ವೃತ್ತ ಮಾದರಿಯು 40*40 ಅಡಿ ಅಳತೆ ಇದ್ದು, 5 ಅಡಿ ಎತ್ತರದ ಮೆಟ್ಟಿಲುಗಳು, 10 ಅಡಿ ಎತ್ತರದ ಕಂಬಗಳು, 3 ಅಡಿ ಎತ್ತರದ ಮೇಲ್ಛಾವಣಿ 5 ಅಡಿ ಎತ್ತರದ ಸ್ವರ್ಣಮಯ ಗೋಪುರ ರಚಿಸಿ ಅದರ ಮೇಲೆ 2 ಅಡಿ ಎತ್ತರದ ಕಳಸವನ್ನು ಇಡಲಾಗುತ್ತಿದ್ದು, ಇದರ ಒಳಗೆ ಒಡೆಯರ್‌ ಅವರ ಶ್ವೇತವರ್ಣದ ಪ್ರತಿಮೆ ನಿಲ್ಲಿಸಲಾಗುತ್ತಿದೆ.

ಈ ಮಾದರಿಯನ್ನು 15 ಜನ ಕಲಾವಿದರ ತಂಡವು ಸಿದ್ಧಪಡಿಸುತ್ತಿದ್ದು, ಇದಕ್ಕಾಗಿ ಒಂದೂವರೆ ಲಕ್ಷ ಕೆಂಪುಗುಲಾಬಿ, 50 ಸಾವಿರ ಬಿಳಿ ಗುಲಾಬಿ, 50 ಸಾವಿರ ಕಿತ್ತಲೆ ಬಣ್ಣದ ಗುಲಾಬಿ, 3,000 ಆರ್ಕಿಡ್ಸ್‌ ಹೂವುಗಳು, 4,500 ಎಲೆಗಳನ್ನು ಬಳಸಲಾಗುತ್ತಿದೆ. ಒಟ್ಟಾರೆ ಪ್ರದರ್ಶನದಲ್ಲಿ ಎರಡು ಬಾರಿ ಹೂವು ಬದಲಿಸುವ ಕಾರ್ಯವಾಗಲಿದೆ.

ಮೈಸೂರು ದರ್ಬಾರ್‌ ದರ್ಶನ: ಗಾಜಿನ ಮನೆಯ ಹಿಂಬದಿಯಲ್ಲಿ ಮೈಸೂರು ಸಿಂಹಾಸನ, ಅಂಬಾರಿ ಹೊತ್ತ ಆನೆಗಳು, ಸೈನಿಕರು ಪ್ರತಿಕೃತಿ ಮೂಲಕ ದರ್ಬಾರ್‌ ಪರಿಕಲ್ಪನೆಯನ್ನು ಕಟ್ಟಿಕೊಡಲಾಗುತ್ತಿದೆ. 5 ಅಡಿ ಅಗಲ ಹಾಗೂ 9 ಅಡಿ ಎತ್ತರದ ಎರಡು ಆನೆಗಳು ಇರಲಿದ್ದು, ಸಿಂಹಾಸನವನ್ನು ಮರ, ಫ್ಯಾಬ್ರಿಕ್‌, ಕುಷನ್‌ ಹಾಗೂ ಹೂವುಗಳ ಮೂಲಕ ಸಿದ್ಧಪಡಿಸಲಾಗುತ್ತಿದೆ.

ಒಡೆಯರಿಗೆ ವಾದ್ಯ ನಮನ: ಜಯಚಾಮರಾಜ ಒಡೆಯರ್‌ ಸಂಗೀತ ಪ್ರಿಯರಾಗಿದ್ದು, ಗಾಯಕರು, ವಾದಕರೂ ಆಗಿದ್ದರು. ಜತೆಗೆ 90ಕ್ಕೂ ಅಧಿಕ ಕೃತಿಗಳನ್ನು ನಿರ್ಮಿಸಿದ್ದರು. ಹೀಗಾಗಿ ಗಾಜಿನ ಮನೆಯ ಒಂದು ಬದಿ ಹೂವಿನಲ್ಲಿ ಸಂಗೀತ ವಾದ್ಯಗಳ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ದೊಡ್ಡ ಗಾತ್ರದ ಪಿಯಾನೋ, ವೀಣೆ, ತಬಲ ಸೇರಿದಂತೆ ಇತರೆ ವಾದನಗಳನ್ನು ಕಲಾವಿದರು ಸಿದ್ಧಪಡೆಸುತ್ತಿದ್ದಾರೆ. ಪ್ರದರ್ಶನದ ವೇಳೆ ನಿತ್ಯ ಬ್ಯಾಂಡ್‌ ಸ್ಟಾಂಡ್‌ನ‌ಲ್ಲಿ ಬಿಎಸ್‌ಎಫ್ ಹಾಗೂ ಮದ್ರಾಸ್‌ ಎಂಜಿನಿಯರಿಂಗ್‌ ತಂಡವು ವಾದ್ಯಗೋಷ್ಠಿ ನಡೆಸಲಿದೆ.

ಒಡೆಯರ್‌ ಸಾಧನೆ ಅನಾವರಣ: ದರ್ಬಾರ್‌ ಮಾದರಿಯ ಮುಂಭಾಗ ಅಂದಿನ ಕಾಲದಲ್ಲಿ ಜಯಚಾಮರಾಜ ಒಡೆಯರ್‌ ನೀರಾವರಿ ಯೋಜನೆ, ವಿದ್ಯುತ್‌ ಕ್ಷೇತ್ರಕ್ಕೆ ಕೊಡುಗೆ, ಪಂಚವಾರ್ಷಿಕ ಯೋಜನೆ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಮಾಹಿತಿಯನ್ನು ಹೂವಿನ ಮಾದರಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರ ಜತೆಗೆ ಮೈಸೂರುನ ಪ್ರಾಣಿ ಸಂಗ್ರಹಾಲಯ ಮಾದರಿ ಸಿದ್ಧಗೊಳ್ಳುತ್ತಿದೆ. ಜಯಚಾಮರಾಜ ಒಡೆಯರ್‌ ಅವರ ಬಾಲ್ಯ, ವಿದ್ಯಾಭ್ಯಾಸ, ಮದುವೆ, ದಸರಾ ಮೆರವಣಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳು, ಆರು ಹೂವಿನ ಪಿರಮಿಡ್‌ ಮೇಲೆ ಒಡೆಯರ್‌ ಚಿತ್ರಣ ಪ್ರದರ್ಶಿಸಲಾಗುತ್ತಿದೆ.

ಇವುಗಳ ಜತೆಗೆ ವಿವಿಧ ವಿನ್ಯಾಸದ ಪರಿಸರ ಸ್ನೇಹಿ, ವರ್ಟಿಕಲ್‌ ಮಾದರಿ ಪ್ರದರ್ಶನ, ಎಚ್‌ಎಎಲ್‌, ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗಳು ಬೆಳೆಸಿರುವ ಆಕರ್ಷಕ ಹೂವುಗಳ ಪ್ರದರ್ಶನ ಇರಲಿದೆ. ಗಾಜಿನ ಮನೆಯಲ್ಲಿ ಧೂಳು ಬಾರದಂತೆ ಹಾಗೂ ಹೂವು ಬಾಡದಂತೆ ಮಂಜಿನ ವಾತಾವರಣ ಉಂಟು ಮಾಡಲಾಗುತ್ತಿದೆ. ಗಾಜಿನ ಮನೆ ಹೊರಾಂಗಣದಲ್ಲಿ ಹೂವಿನ ಜಲಪಾತ, ನವಿಲು, ಹೃದಯಾಕಾರದ ಕಮಾನುಗಳು, ವಿಶೇಷ ಹೂವು ಕುಂಡಗಳು, ಮನೆಯಂಗಳದಲ್ಲಿ ಉದ್ಯಾನ ಪರಿಕಲ್ಪನೆಗಳ ಪ್ರದರ್ಶವಿರಲಿದೆ.

ಕೀಟ ಭಕ್ಷಕ ಗಿಡಗಳ ಪ್ರದರ್ಶನ: ಕೋಲಾರದ ತೊಟಗಾರಿಕೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಚಂದನ್‌ ಎಂಬುವವರು ಥಾಯ್‌ಲ್ಯಾಂಡ್‌ ಹಾಗೂ ಭಾರತದ ಈಶಾನ್ಯ ಭಾಗಗಳಿಂದ ಸಂಗ್ರಹಿಸಿದ 20 ಬಗೆಯ ಕೀಟ ಭಕ್ಷಕ ಗಿಡಗಳನ್ನು ಪ್ರದರ್ಶಿಸಲಿದ್ದಾರೆ.

ವಾಹನ ನಿಲುಗಡೆ: ಫ‌ಲ ಪುಷ್ಪ ಪ್ರದರ್ಶನದ ವೇಳೆ ಲಾಲ್‌ಬಾಗ್‌ನಲ್ಲಿ ವಾಹನ ಪ್ರವೇಶ, ನಿಲುಗಡೆ ನಿಷೇಧಿಸಲಾಗಿದೆ. ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆ ಮಯೂರ ಹೋಟೆಲ್‌ ಬಳಿಯ ನಿಲುಗಡೆ ಮಾಡಬಹುದಾಗಿದೆ. ಜತೆಗೆ ಅಲ್‌-ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಶಾಲಾ ಮಕ್ಕಳಿಗೆ ಫ‌ಲ ಪುಷ್ಪ ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಲು ತೋಟಗಾರಿಕೆ ಇಲಾಖೆ ಅನುಕೂಲ ಕಲ್ಪಿಸಿ ಕೊಟ್ಟಿದೆ. ಆ.9,13,14,16 ಹಾಗೂ 17 ರಂದು ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಯಾ ಶಾಲೆಯ ಗುರುತಿನ ಚೀಟಿಯೊಂದಿಗೆ ಆಗಮಿಸಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೂ ಫ‌ಲ ಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಶಾಲಾ ಮಕ್ಕಳ ವಾಹನ ನಿಲುಗಡೆಗೆ ಲಾಲ್‌ಬಾಗ್‌ ವಾಹನ ನಿಲುಗಡೆ ತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಎರಡು ಕೋಟಿ ರೂ. ವೆಚ್ಚ: ಆ.9ರಿಂದ 18ರವೆರೆಗೆ 10 ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ತಾಜಾತನ ಹಾಗೂ ಆಕರ್ಷಣೆ ಕಾಯ್ದುಕೊಳ್ಳಲು ಮೂರು ಬಾರಿ ಹೂಗಳನ್ನು ಬದಲಿಸಬೇಕಾಗುತ್ತದೆ. ಪ್ರದರ್ಶನಕ್ಕೆ ಆರು ಲಕ್ಷ ಹೂವುಗಳನ್ನು ಬಳಸುತ್ತಿದ್ದು, ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರೊತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಲಾಲ್‌ಬಾಗ್‌ ಸಸ್ಯತೋಟ ಉಪ ನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌ ತಿಳಿಸಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಮಾತನಾಡಿ, ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜಾಗಿದೆ. ಆರು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಜೇನು ನೊಣ, ಬೀದಿ ನಾಯಿ ನಿಯಂತ್ರಣಕ್ಕೆ ಮುನ್ನೆಚ್ಚರಿಕಾಕ್ರಮ ಕೈಗೊಳ್ಳಲಾಗಿದೆ. ಒಂದು ಅಗ್ನಿ ಶಾಮಕ ದಳ, ಪ್ಯಾರಾ ಮೆಡಿಕಲ್‌ಫೋರ್ಸ್‌ ಒಳಗೊಂಡು 5 ಆಂಬುಲೆನ್ಸ್‌, 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕ್ಲಾಕ್ ರೂಂ ಸೌಲಭ್ಯವಿದೆ, ಲಾಲ್‌ಬಾಗ್‌ನಲ್ಲಿಯೇ ಪೊಲೀಸ್‌ ಔಟ್‌ಪೋಸ್ಟ್‌ ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ಟಿಕೆಟ್‌ ದರ ಎಷ್ಟು?: ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ಉದ್ಯಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಟಿಕೆಟ್‌ ಲಭ್ಯವಿರುತ್ತವೆ. ಆ.9ರಿಂದ 18ರವರೆಗೆ ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಣಜೆ 6.30ರವರೆಗೆ ಪ್ರದರ್ಶನ ನಡೆಯಲಿದೆ.

ಪ್ರದರ್ಶನದ ಇತರೆ ವಿಶೇಷತೆಗಳು
-ತೋಟಗಾರಿಕೆ ಬೆಳೆಗಳ ಮಾಹಿತಿಗೆ ಇಲಾಖೆ ಕುಟೀರ ನಿರ್ಮಾಣ.
-ವಾರ್ತಾ ಇಲಾಖೆಯಿಂದ ಒಡೆಯರ್‌ ಕುರಿತ ಐತಿಹಾಸಿಕ ಛಾಯಾಚಿತ್ರ ಪ್ರದರ್ಶನ ಹಾಗೂ ಬೋನ್ಸಾಯ್‌ ವೃತ್ತದಲ್ಲಿ ಸಾಕ್ಯಾಚಿತ್ರ ಪ್ರದರ್ಶನ.
-ಸಸ್ಯ ಪ್ರೇಮಿಗಳಿಗೆ ಸಸ್ಯ ಸಂತೆ.
-ಲಾಲ್‌ಬಾಗ್‌ನ ಹಳೆಯ ಮರಗಳ ಕೆತ್ತನೆ ಕಲಾಕೃತಿ ಪ್ರದರ್ಶನ.
-ಲಾಲ್‌ಬಾಗ್‌ ಕೆರೆಯಲ್ಲಿ ದಿನಕ್ಕೆ 10 ಬಾರಿ ಜಲಪಾತ ಪ್ರದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next