ಬಾಗಲಕೋಟೆ: ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕೆರಕಲಮಟ್ಟಿ, ಕಗಲಗೊಂಬ, ಹೂಲಗೇರಿ, ಗಂಗನಬೂದಿಹಾಳ ಭಾಗದ ರೈತರು ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ಕೃಷ್ಣಗೌಡ ನಾಡಗೌಡರ ಮಾತನಾಡಿ, ನೀರಿಲ್ಲದೆ ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಲಾಗಿದೆ. ಆದರೂ ನಿರಂತರವಾಗಿ ತಾರತಮ್ಯವಾಗುತ್ತಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ಕಾಲುವೆ ನಿರ್ಮಾಣಗೊಂಡರೂ ನೀರಾವರಿ ಸೌಲಭ್ಯ ಇಲ್ಲ. ಕಾಲುವೆ ನವೀಕರಣದಲ್ಲಿ ಅಕ್ರಮದ ಶಂಕೆ ಇದೆ. ಕಾಲುವೆಗಳು ದುಃಸ್ಥಿತಿಯಲ್ಲಿವೆ ಎಂದು ದೂರಿದರು.
ಕಳೆದ ಹತ್ತು ವರ್ಷದ ಹಿಂದೆ ಘಟಪ್ರಭಾ ನದಿಯ ಹಿಡಕಲ್ ಡ್ಯಾಂನಿಂದ ಕಾಲುವೆಗೆ ನಿರ್ಮಿಸಿದ್ದು, ಕೇವಲ 2ಬಾರಿ ಕಾಲುವೆ ನೀರು ಹರಿಸಲಾಗಿದೆ. ಈ ವರ್ಷವು ಡ್ಯಾಂ ಭರ್ತಿಯಾಗಿದೆ. ಮೇಲ್ಭಾಗದ ಕಾಲುವೆಗೆ ನೀರು ಬರುತ್ತದೆ. ಮೇಲ್ಭಾಗದ ರೈತರು ಕಾಲುವೆಗೆ ಅಡ್ಡಲಾಗಿ ಮಣ್ಣು ಕಲ್ಲುಗಳನ್ನು ತುಂಬಿದ್ದರ ಪರಿಣಾಮ ಕೆರಕಲಮಟ್ಟಿ, ಕಗಲಗೊಂಬ, ಹೂಲಗೇರಿ, ಕಟಗೇರಿ, ಜಲಗೇರಿ, ಗಂಗನಬೂದಿಹಾಳ ಗ್ರಾಮಗಳಿಗೆ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಬರುತ್ತಿಲ್ಲ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕನಿಷ್ಠ ರಾಬಂದಿ ಮಾಡಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳು ಸಿಬ್ಬಂದಿ ಕೊರತೆ ಇದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ರೈತರಿಗೆ ಗೌರವ ನೀಡದೇ ಮಾತಾಡುತ್ತಾರೆ ಎಂದು ಆರೋಪಿಸಿದರು.
ಈಗಾಗಲೇ ಮಳೆ ಇಲ್ಲದೇ ಬೆಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಜನ, ಜಾನುವಾರುಗಳಿಗೆ ಸಮರ್ಪಕವಾದ ಕುಡಿಯಲು ನೀರು ಇಲ್ಲದೇ ಹಾಹಾಕಾರ ಎದ್ದಿದೆ. ಈ ಸಮಸ್ಯೆ ಪರಿಹಾರಕ್ಕೆ ಕಲಾದಗಿ ಲಿಫ್ಟ್ ಇರಿಗೇಶನ್ ಪ್ರಮುಖ ಪೈಪ್‌ಲೈನ್ ಬಂದಕೇರಿ ಗ್ರಾಮದ ಹತ್ತಿರ ಹಾದುಹೋಗಿದೆ. ಆ ಪೈಪ್ ಲೈನ್‌ನಿಂದ ತಾತ್ಪುರ್ತಿಕವಾಗಿ ಜನ, ಜಾನುವಾರುಗಳಿಗೆ ಕಾಲುವೆ ಮೂಲಕ ನೀರು ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧುಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ರೈತರಾದ ಶಿವು ಕಬಾಡದ, ಸಿದ್ದಣ್ಣ ಅಂಗಡಿ, ಹನಮಂತ ಪಾಟೀಲ, ಕೃಷ್ಣಾ ನಾಡಗೌಡ, ಶಿವಾನಂದ ಮಾಗಡಿ, ಎಚ್,ಆರ್. ಉಳ್ಳಾಗಡ್ಡಿ, ಎಸ್.ಬಿ.ದೋಣಿ, ಶಿವಾನಂದ ಉದಗಟ್ಟಿ, ಹನಮಂತಗೌಡ ಪಾಟೀಲ, ಶರಚಂದ್ರ ನಾಡಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.