Advertisement

ಪ್ರಗತಿ ರಜತ ಸಂಭ್ರಮ: ಹೊನಲು ಬೆಳಕಿನ ಕ್ರೀಡೋತ್ಸವ 

11:35 AM Nov 26, 2018 | Team Udayavani |

ಕಾಣಿಯೂರು: ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿಹಬ್ಬ ವರ್ಷಾಚರಣ ಸಮಿತಿಯ ವತಿಯಿಂದ ಪ್ರಗತಿ ರಜತ ಸಂಭ್ರಮದ ಅಂಗವಾಗಿ ಶನಿವಾರ ರಾತ್ರಿ ಹೊನಲು ಬೆಳಕಿನ ವೈವಿಧ್ಯಮಯ ಕ್ರೀಡೋತ್ಸವ ನಡೆಯಿತು.

Advertisement

ಎಳೆಯ ಪುಟಾಣಿಗಳಿಂದ ಪ್ರಾರಂಭಿಸಿ ಪ್ರೌಢ ವಿದ್ಯಾರ್ಥಿ ತಂಡಗಳನ್ನು ಒಳಗೊಂಡು ಸಾಹಸ, ವೈವಿಧ್ಯಮಯ ಕ್ರೀಡೋತ್ಸವ ರೋಮಾಂಚನಗೊಳಿಸಿತು. ಕಂಸಾಳೆ, ಮಲ್ಲ ಕಂಬ, ವ್ಯಾಯಾಮ, ಯಕ್ಷಗಾನ, ತಾಲೀಮು ಇತ್ಯಾದಿ ಸಾಹಸಮಯ ಜನ ಪದ ಕಲೆಗಳ ಪ್ರದರ್ಶನವೂ ಮನಸೂರೆಗೊಂಡಿತು.

ಅಂತಾರಾಷ್ಟ್ರೀಯ ವೇಗದ ನಡಿಗೆಯ ಕ್ರೀಡಾಪಟು ಸುಬ್ರಹ್ಮಣ್ಯ ಕಲ್ಪಡ ಕ್ರೀಡಾಕೂಟ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಸವಾಲುಗಳನ್ನು ಛಲದಿಂದ ಸಮರ್ಥವಾಗಿ ಎದುರಿಸಿ ಜೀವನದಲ್ಲಿ ಯಶಸ್ವಿನ ಮೆಟ್ಟಿಲು ಏರುವ ಶಿಕ್ಷಣವನ್ನು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಿರಂತರ ನೀಡಲಾಗುತ್ತಿದೆ. ಜನಪದೀಯ ಕಲೆಗಳನ್ನು ಮುಂದಿನ ಜನಾಂಗಕ್ಕೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತರಬೇತಿ ನೀಡಿ ವಿದ್ಯಾರ್ಥಿಗಳಿಂದ ಪ್ರತಿಭೆ ಪ್ರದರ್ಶಿಸಲಾಗುತ್ತಿದೆ. ಮನರಂಜನೆಯ ಜತೆಗೆ ಕ್ರಿಯಾಶೀಲತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

ರೋಟರಿ ಪ್ರೌಢಶಾಲೆಯ ಶಿಕ್ಷಕಿ ನಳಿನಾಕ್ಷಿ ವಿ. ಆಚಾರ್ಯ ಕಲ್ಮಡ್ಕ, ಬೆಳ್ಳಾರೆ ಪೊಲೀಸ್‌ ಠಾಣೆ ಪಿಎಸ್‌ಐ ಡಿ.ಎನ್‌. ಈರಯ್ಯ, ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದ ಅಧ್ಯಕ್ಷ ದಿನೇಶ್‌ ಮುಗರಂಜ, ತಾ| ಯುವಜನ ಒಕ್ಕೂಟದ ಕಾರ್ಯದರ್ಶಿ ಗುರುಪ್ರಿಯಾ ನಾಯಕ್‌, ಪತ್ರಕರ್ತ ಲತೇಶ್‌ ಶೆಟ್ಟಿ ಚಾರ್ವಾಕ, ಉದ್ಯಮಿ ಪ್ರದೀಪ್‌ ಬೊಬ್ಬೆಕೇರಿ, ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯ ನಾಗೇಶ್‌ ರೈ ಮಾಳ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ರಮೇಶ್‌ ಬೆಟ್ಟ, ಪ್ರ. ಕಾರ್ಯದರ್ಶಿ ಸುಜಿತ್‌ ರೈ ಪಟ್ಟೆ ಎಣ್ಮೂರು, ವಿದ್ಯಾಸಂಸ್ಥೆಯ ಸಂಚಾಲಕರ ಮಾತೃಶ್ರೀ ಲಕ್ಷ್ಮೀ  ಕೆ. ರೈ ಮಾದೋಡಿ, ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಆಂಗ್ಲ ಮಾಧ್ಯಮದ ಮುಖ್ಯಗುರು ಗಿರಿ ಶಂಕರ ಸುಲಾಯ, ಕನ್ನಡ ಮಾಧ್ಯಮದ ಮುಖ್ಯ ಗುರು ಸರಸ್ವತಿ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಸಿ.ಕೆ. ಐವರ್ನಾಡು, ಅನಿತಾ ಜೆ. ರೈ ನಿರೂಪಿಸಿದರು. ವಿನಯಾ ವಿ. ಶೆಟ್ಟಿ ವಂದಿಸಿದರು.

ಗಮನ ಸೆಳೆದ ಕ್ರೀಡಾಕೂಟ
ವಿದ್ಯಾರ್ಥಿಗಳಿಂದ ಆಕರ್ಷಕ ವಿವಿಧ ಬಗೆಯ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಗೋಪುರ ವೃತ್ತ, ಲೈಟು, ಜಗಳಗಳೊಂದಿಗೆ ಕುಸ್ತಿ, ತಾಲೀಮು, ಹುಲಿವೇಷಧಾರಿಗಳಿಂದ ವಿಶೇಷ ನೃತ್ಯ, ಯಕ್ಷಗಾನದ ಮೈನವಿರೇಳಿಸುವ ಅಬ್ಬರದ ವೇಷಗಳು, ಸೈಕಲ್‌ ಸವಾರಿಯಲ್ಲಿ ವೈವಿಧ್ಯಮಯ ಕಸರತ್ತು, ಕವಾಯತು, ಕರಾಟೆ, ಯೋಗ, ನೃತ್ಯ, ಕೋಲಾಟ, ಚೆಂಡೆ ವಾದ್ಯ ಮೇಳ, ಬೆಂಕಿಯಲ್ಲಿ ಸರಸ, ರಿಂಗ್‌ ನಲ್ಲಿ ಕಸರತ್ತು, ಮರಗಾಲಿನ ನೃತ್ಯ ಹಾಗೂ ಸುಡುಮದ್ದು ಪ್ರದರ್ಶನ ಆಕರ್ಷಕವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next