Advertisement

“ಲೋಕಲ್‌ ಫೈಟ್‌’ಮೇಲೆ ಪ್ರವಾಹದ “ತೂಗುಗತ್ತಿ’?

11:33 PM Oct 23, 2019 | Lakshmi GovindaRaju |

ಬೆಂಗಳೂರು: ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಇದೀಗ ಪ್ರವಾಹದ “ತೂಗುಗತ್ತಿ’ ನೇತಾಡಲಾರಂಭಿಸಿದೆ. ಚುನಾವಣೆ ನಿಗದಿಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಹುತೇಕ ಕಡೆ ಕಳೆ ದೊಂದು ವಾರದಿಂದ ಭಾರಿ ಮಳೆ ಸುರಿದು ಪ್ರವಾಹದ ಸ್ಥಿತಿ ಉಂಟಾ ಗಿದ್ದು, ಇದು ಚುನಾವಣೆ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆಗಳನ್ನು ಸದ್ಯ ಅಲ್ಲಗಳೆಯುವಂತಿಲ್ಲ.

Advertisement

ಏಕೆಂದರೆ, ಹವಮಾನ ಇಲಾಖೆ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯಲಿದೆ. ಈ ಮಧ್ಯೆ, ಚುನಾವಣೆ ನಡೆಸಲು ನಾವಂತೂ ಸಿದ್ಧವಾಗಿದ್ದೇವೆ. ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಮಳೆಯಿಂದಾಗಿ ಸದ್ಯಕ್ಕೆ ಯಾವ ಸಮಸ್ಯೆ ಆಗಲಿಕ್ಕಿಲ್ಲ. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುತ್ತಿದೆ. ಅವರ ವರದಿಯೇ ಅಂತಿಮ. ಅಷ್ಟಕ್ಕೂ “ಪ್ರಕೃತಿ ವಿಕೋಪ’ ನಮ್ಮ ಕೈ ಮೀರಿದ್ದು ಎಂದು ರಾಜ್ಯ ಚುನಾವಣಾ ಆಯೋಗ ಹೇಳುತ್ತಿದೆ.

ಚುನಾವಣೆ ನಡೆಯುವ ಪ್ರದೇಶಗಳು ನಗರ ಪ್ರದೇ ಶಗಳಾಗಿರುವುದರಿಂದ ಮಳೆಯಿಂದಾಗಿ ಅಷ್ಟೊಂದು ಸಮಸ್ಯೆ ಎದುರಾಗಲಿಕ್ಕಿಲ್ಲ. ಈಗಾಗಲೇ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಯಾವುದೇ ಸಮಸ್ಯೆ ಇಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿ ಗಳು ವರದಿ ಕೊಟ್ಟಿದ್ದಾರೆ. ಅ.24ರಂದು ಅಧಿಸೂಚನೆ ಹೊರ ಬಿದ್ದು, ನಾಮಪತ್ರ ಸಲ್ಲಿಸಲು ಅ.31 ಕೊನೆ ದಿನ ಆಗಿದ್ದು, ಸಾಕಷ್ಟು ಸಮಯವಕಾಶವಿದೆ. ಅಲ್ಲಿ ತನಕ ಪರಿಸ್ಥಿತಿ ಹೇಗಾಗಿರುತ್ತದೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದಲ್ಲದೇ, 14 ನಗರ ಸ್ಥಳೀಯ ಸಂಸ್ಥೆಗಳ ಜೊತೆಗೆ ಹೊಳೆನರಸೀಪುರ ಪುರಸಭೆ, ಕೊಳ್ಳೆಗಾಲ ಪುರಸಭೆ, ಚಡಚಣ ಪಟ್ಟಣ ಪಂಚಾಯಿತಿ, ಮಹಾಲಿಂಗಪುರ ಪುರಸಭೆ, ಚಿತ್ತಾಪುರ ಪುರಸಭೆಯ ಒಂದೊಂದು ವಾರ್ಡ್‌ಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಹಾಗೆಯೇ ಒಂದು ಜಿಲ್ಲಾ ಪಂಚಾಯಿತಿ, ನಾಲ್ಕು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ 213 ಸದಸ್ಯ ಸ್ಥಾನಗಳಿಗೂ ಉಪಚುನಾವಣೆ ನಿಗದಿಯಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಚುನಾವಣೆಗೆ ಅಡ್ಡಿಯಾಗುವುದರಲ್ಲಿ ಅನುಮಾನವಿಲ್ಲ.

ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪೈಕಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಬಳ್ಳಾರಿ ಜಿಲ್ಲೆಗಳ ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಗದಿಯಾಗಿದೆ. ಇಡೀ ಜಿಲ್ಲೆಯಲ್ಲಿ ಒಂದೆರಡು ಕಡೆಗಳಲ್ಲಿ ಚುನಾವಣೆ ಇದ್ದರೂ, ಸದ್ಯ ಜಿಲ್ಲಾಧಿಕಾರಿಗಳು ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರತರಾಗಿರುವುದರಿಂದ ಚುನಾವಣಾ ಪ್ರಕ್ರಿಯೆಗಳಿಗೆ ಗಮನ ಕೊಡುವುದು ಕಷ್ಟವಾಗಲಿದೆ. ಜೊತೆಗೆ, ರಾಜಕೀಯ ಪಕ್ಷಗಳು ಸಹ ಸಿದ್ದಗೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ.

Advertisement

ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆಗಳು ಸೇರಿದಂತೆ ಡಿಸೆಂಬರ್‌ 2019ರಲ್ಲಿ ಅವಧಿ ಪೂರ್ಣಗೊಳ್ಳುವ ಶಿವಮೊಗ್ಗ ಜಿಲ್ಲೆಯ ಜೋಗ್‌-ಕಾರ್ಗಲ್‌ ಪಟ್ಟಣ ಪಂಚಾಯಿತಿ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಒಳಗೊಂಡಂತೆ 2 ಮಹಾನಗರ ಪಾಲಿಕೆಗಳು, 6 ನಗರಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಅ.20ರಂದು ವೇಳಾಪಟ್ಟಿ ಹೊರಡಿಸಿದೆ.

ಇಂದು ಜಿಲ್ಲಾಧಿಕಾರಿ ಅಧಿಸೂಚನೆ: 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗುರುವಾರ (ಅ.24) ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಈ ದಿನದಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ಅ.31 ಕೊನೆ ದಿನ ಆಗಿದೆ. ಉಳಿದಂತೆ ನ.2ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ನ.4 ಕೊನೆ ದಿನ. ನ.12ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದ್ದು, ನ.14ಕ್ಕೆ ಫ‌ಲಿತಾಂಶ ಹೊರಬೀಳಲಿದೆ.

ವೇಳಾಪಟ್ಟಿ ಪ್ರಕಟವಾಗಿರುವ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿ ಹಾಗೂ ಚುನಾವಣಾ ವೆಚ್ಚ ವೀಕ್ಷಕರಿಗೆ ತರಬೇತಿ ನೀಡಲಾಗಿದೆ. ಮಳೆ ಅಥವಾ ಪ್ರವಾಹ ಚುನಾವಣೆಗೆ ಅಡ್ಡಿಯಾಗಲಿ ಕ್ಕಿಲ್ಲ. ಆದರೆ, ಪ್ರಕೃತಿ ವಿಕೋಪ ನಮ್ಮ ಕೈ ಮಿರಿದ್ದು, ಜಿಲ್ಲಾಧಿ ಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ.
-ಡಾ.ಬಿ.ಬಸವರಾಜು, ರಾಜ್ಯ ಚುನಾವಣಾ ಆಯುಕ್ತ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next