Advertisement

ಹುರುಸಗುಂಡಗಿ ಗ್ರಾಮಸ್ಥರಿಗೆ ಪ್ರವಾಹ ಭೀತಿ

01:30 PM Jun 05, 2018 | |

ಶಹಾಪುರ: ಭೀಮಾನದಿ ತೀರದಲ್ಲಿರುವ ಹುರುಸಗುಂಡಗಿ ಗ್ರಾಮಸ್ಥರಲ್ಲಿ ಮಳೆಗಾಲ ಬಂದರೆ ಸನ್ನತಿ ಬ್ಯಾರೇಜ್‌ನ ಅಪಾರ ಪ್ರಮಾಣ ಹಿನ್ನೀರು ಬರುವ ಕಾರಣ, ಗ್ರಾಮ ಮುಳುಗುವ ಭೀತಿ ಎದುರಿಸುವಂತಾಗಿದೆ.

Advertisement

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮಳೆ ಭಾರೀ ಪ್ರಮಾಣದಲ್ಲಿ ಸುರಿದು ಭೀಮಾ ನದಿಗೆ ಹರಿದು ಬಂದ ಅಪಾರ ಪ್ರಮಾಣದ ನೀರಿನಿಂದ, ಇಲ್ಲಿನ ಸನ್ನತಿ ಬ್ಯಾರೇಜ್‌ ಹಿನ್ನೀರು ಗ್ರಾಮದೊಳಕ್ಕೆ ನುಗ್ಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿತ್ತು. 

ಆಗ ಅಂದಾಜು 60 ಮನೆಗಳು ನೀರಿನಲ್ಲಿ ಮುಳುಗಿದ್ದು, ಹಲವು ಕುಟುಂಬಗಳು ನಿರಾಶ್ರಿತಗೊಂಡಿದ್ದವು. ಮಳೆಗಾಲದಲ್ಲಿ ಅತೀವ ಮಳೆ ಬಂದಾಗ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾದರೆ, ಭೀಮಾನದಿಗೆ ನೀರು ಹರಿದು ಬಂದು ಪ್ರವಾಹ ಉಂಟಾಗುವ ಸಾಧ್ಯತೆ ಈಗಲೂ ಇದೆ. ಈ ಕುರಿತು ತಾಲೂಕು ಆಡಳಿತ ಮುಂಜಾಗೃತವಾಗಿ ಹಿನ್ನೀರಿನ ಪ್ರವಾಹ ತಡೆಗೆ ಸಜ್ಜಾಗಿರಬೇಕಿದೆ.

ಬ್ಯಾರೇಜ್‌ ಹಿನ್ನೀರಿನಿಂದ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಈ ಮೊದಲೇ ಸರ್ಕಾರದ ಆದೇಶದಂತೆ ಹುರುಸುಗುಂಡಗಿ ಗ್ರಾಮ ಸ್ಥಳಾಂತರಿಸಿ, ವಸತಿ ಪುನರ ನಿರ್ಮಾಣ ನವನಗರ ನಿರ್ಮಾಣ ವ್ಯವಸ್ಥೆ ಮಾಡಿತ್ತು. ಆದರೆ ಆ ಪ್ರದೇಶದಲ್ಲಿ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರು ದೂರಿದ್ದಾರೆ. 20×20 ಜಾಗ ಹಂಚಿಕೆ ಮಾಡಿದ್ದು, ಮನೆ ಕಟ್ಟಲು 1 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಪುನರವಸತಿ ಕಲ್ಪಿಸಿದ ಪ್ರದೇಶದಲ್ಲಿ ಮೂಲ ಸೌಲಭ್ಯ ಕೊರತೆ ನೀಗಿಸಬೇಕಿದೆ. ಶುದ್ಧ ಕುಡಿಯುವ ನೀರು ಸೇರಿದಂತೆ ಶೌಚಾಲಯ, ಚರಂಡಿ ವ್ಯವಸ್ಥೆ ಮಾಡಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಆ ಪ್ರದೇಶದಲ್ಲಿ ಯಾವುದೇ ಸಮರ್ಪಕ ಸೌಲಭ್ಯ ದೊರೆಯದ ಕಾರಣ, ಗ್ರಾಮದ ಮನೆಗಳಲ್ಲಿ ವಾಸಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ನಾನು ಈಗ ಬಂದಿದ್ದು, ಈ ಭಾಗದಲ್ಲಿ ಎಲ್ಲೆಲ್ಲಿ ಪ್ರವಾಹ ಭೀತಿ, ಮುಳಗಡೆ ಪ್ರದೇಶದ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಸಮಗ್ರ ಮಾಹಿತಿ ಪಡೆದು ಆಯ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಸಿಬ್ಬಂದಿ ನಿಯೋಜನೆಗೊಳಿಸುತ್ತೇನೆ. ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ತಿಳಿಸುತ್ತೇನೆ.
 ಸುಬ್ಬಣ್ಣ ಜಮಖಂಡಿ. ತಹಶೀಲ್ದಾರ್‌, ಶಹಾಪುರ

ಸನ್ನತಿ ಬ್ಯಾರೇಜ್‌ ನಿರ್ಮಾಣ ವೇಳೆ ಹುರುಸಗುಂಡಗಿ ಗ್ರಾಮ ಸ್ಥಳಾಂತರಿಸುವ ಕುರಿತು ಯೋಜನೆ ರೂಪಿಸಲಾಗಿತ್ತು. ಗ್ರಾಮದಿಂದ ಮೂರು ಕಿ.ಮೀ ಅಂತರದಲ್ಲಿ ನವಗ್ರಾಮ ಪುನರವಸತಿ ಕೇಂದ್ರ ನಿರ್ಮಾಣಕ್ಕಾಗಿ, ಹಲವು ನಿವೇಶನಗಳನ್ನು ಹಂಚಲಾಗಿತ್ತು. ಅಲ್ಲದೆ ನಿರಾಶ್ರಿತರಿಗೆ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ 1 ಲಕ್ಷ ಪರಿಹಾರ ಕಲ್ಪಿಸಲಾಗಿತ್ತು. ಗ್ರಾಮಸ್ಥರಿಗೆ ನವಗ್ರಾಮದಲ್ಲಿ ವಾಸಿಸುವಂತೆ ಸಲಹೆ ನೀಡಲಾಗಿತ್ತು. ಆದರೆ ಗ್ರಾಮಸ್ಥರು ಗ್ರಾಮದಲ್ಲಿರುವ ತಮ್ಮ ಮನೆ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಮನೆ ಬಿಟ್ಟು ತೆರಳಲು ಆಗದೇ ಕಳೆದ ಹತ್ತಾರು ವರ್ಷದಿಂದ ಪ್ರವಾಹ ಉಂಟಾದಾಗ ಸಾಕಷ್ಟು ನಷ್ಟ ನೋವು ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ 5 ಸಾವಿರ ಜನ ಸಂಖ್ಯೆ ಹೊಂದಿದ್ದು, 1 ಸಾವಿರಕ್ಕೂ ಅಧಿಕ ಮನೆಗಳಿವೆ.

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next