ನವದೆಹಲಿ: ದೇಶಕ್ಕೆ ದೇಶವೇ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಟಕ್ಕಿಳಿದಿದೆ. ಈ ನಡುವೆ ಪ್ರಾಕೃತಿಕ ವಿಕೋಪಗಳ ಹೊಡೆತಗಳು ಕೋವಿಡ್ ಹೋರಾಟಕ್ಕೆ ಅಡ್ಡಿಯಾಗುವಂತಿದೆ.
ಮೊನ್ನೆ ತಾನೆ ಒಡಿಸ್ಸಾ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಕೋಲಾಹಲ ಸೃಷ್ಟಿಸಿದ ಅಂಫಾನ್ ಸೂಪರ್ ಚಂಡಮಾರುತದ ಬೆನ್ನಲ್ಲೇ ಇದೀಗ ದೇಶದ ಕೆಲವೊಂದು ರಾಜ್ಯಗಳಲ್ಲಿ ಪ್ರವಾಹ ಬೀತಿ ಎದುರಾಗಿದೆ.
ಅಂಫಾನ್ ಚಂಡಮಾರುತ ತನ್ನ ಪ್ರಭಾವವನ್ನು ಕ್ಷೀಣಿಸಿಕೊಂಡ ಬೆನ್ನಲ್ಲೇ ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಳೆದ ಮೇ 20 ರಿಂದ ನಿರಂತರ ಮಳೆ ಸುರಿಯುತ್ತಿದೆ.
ಈ ಕಾರಣದಿಂದ ಬ್ರಹ್ಮಪುತ್ರಾ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿರುವುದರಿಂದ ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳಿಗೆ ಪ್ರವಾಹ ಸ್ಥಿತಿಯ ಕುರಿತಾಗಿ ಕೇಂದ್ರೀಯ ಜಲ ಆಯೋಗ (CWC) ಈ ರಾಜ್ಯಗಳಿಗೆ ಎಚ್ಚರಿಕೆಯನ್ನು ರವಾನಿಸಿದೆ.
ಜೋರ್ಹಾಟ್ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿಯ ಅಪಾಯದ ಹರಿಯುವಿಕೆ ಮಟ್ಟ 87.37 ಮೀಟರ್ ಗಳಾಗಿದ್ದು ಇಲ್ಲಿ ಈಗಾಗಲೇ ಈ ನದಿಯು 85.78 ಮೀಟರ್ ಗಳ ಮಟ್ಟದಲ್ಲಿ ಹರಿಯುತ್ತಿದೆ. ಇನ್ನು ಜೈಭರಾಲಿ ಪ್ರದೇಶದಲ್ಲಿ ನದಿಯ ಅಪಾಯದ ಮಟ್ಟ 78.5 ಮೀಟರ್ ಗಲಾಗಿದ್ದು ಇಲ್ಲಿ ಬ್ರಹ್ಮಪುತ್ರಾ ನದಿಯು 77.36 ಮೀಟರ್ ಗಳ ಮಟ್ಟದಲ್ಲಿ ಹರಿಯುತ್ತಿದೆ.