ದಾವಣಗೆರೆ: ಗರಿಷ್ಠ ಮುಖಬೆಲೆಯ ನೋಟು ಅಪನಗದೀಕರಣ, ಸತತ ಎರಡು ವರ್ಷದ ಬರ ಹಾಗೂ ಕೇಂದ್ರ ಸರ್ಕಾರದ ಬಿಗಿ ನೀತಿ ದಾವಣಗೆರೆಯ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ. ನಗರದ ವಾಣಿಜ್ಯ ಪ್ರದೇಶವೆಂದೇ ಕರೆಯಿಸಿಕೊಳ್ಳುವ ಮಂಡಿಪೇಟೆ ಈಗ ಭಾಗಶಃ ಬಂದ್‌ನ ವಾತಾವರಣ ಕಂಡು ಬರುತ್ತಿದೆ.
ಬೆಳಗ್ಗೆಯಿಂದ ರಾತ್ರಿ 10 ಗಂಟೆ ವರೆಗೂ ಅಂಗಡಿಯಲ್ಲಿದ್ದವರೆಲ್ಲಾ ನಿಲ್ಲಲು ಸಾಧ್ಯವಾಗದಂತೆ ಕೆಲಸ ಮಾಡುತ್ತಿದ್ದ ಕಾಲ ಇದೀಗ ಕಾಣಿಸದಾಗಿದೆ. ಅಂಗಡಿ ಮಾಲೀಕರು, ಕೆಲಸಗಾರರು ವ್ಯಾಪಾರಿ ಭಾಷೆಯಲ್ಲಿ ಹೇಳುವಂತೆ ಅಕ್ಷರಶಃ ನೊಣ ಹೊಡ್ಕೊಂಡು ಕೂರುವ ಕಾಲ ಬಂದಿದೆ. ಕಳೆದ ವರ್ಷ ಬರ ಪರಿಸ್ಥಿತಿ ಇದ್ದರೂ ನೋಟು ಅಮಾನ್ಯಕ್ಕೂ ಮುನ್ನ ಒಂದಿಷ್ಟು ವ್ಯಾಪಾರ-ವಹಿವಾಟು ಇತ್ತು.
ಆದರೆ, ನೋಟು ಅಮಾನ್ಯದ ನಂತರ ಆದ ಕುಸಿತ ಇದುವರೆಗೂ ಚೇತರಿಕೆ ಕಂಡಿಲ್ಲ. ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ಇತ್ತ ಸುಳಿಯುತ್ತಿಲ್ಲ. ಅತ್ತ ಅಶೋಕ ಚಿತ್ರಮಂದಿರದಿಂದ ಇತ್ತ ಮಹಾನಗರ ಪಾಲಿಕೆ ಮುಂಭಾಗದ ರೈಲ್ವೆ ಬ್ರಿಡ್ಜ್ನ ಉತ್ತರ ಭಾಗದಿಂದ ಆರಂಭವಾಗುವ ಸುಮಾರು ಅರ್ಧ ಕಿಮೀ ರಸ್ತೆಯ ಅಕ್ಕಪಕ್ಕದಲ್ಲಿ ಬರುವ ಬಹುತೇ ಅಂಗಡಿಗಳ ಕತೆ ಇದಾಗಿದೆ.
ಈ ಭಾಗದಲ್ಲಿ ಹಿಂದೆ ತಿಂಗಳಿಗೆ ಕನಿಷ್ಠ ಸಣ್ಣ ಮಳಿಗೆ ಅಂದರೂ 5-6 ಸಾವಿರ ರೂ. ಬಾಡಿಗೆ, 1500 ರೂ.ನಷ್ಟು ಕರೆಂಟ್ ಬಿಲ್, ಇಬ್ಬರು ಕೆಲಸಗಾರರಿಗೆ ಕನಿಷ್ಠ 16 ಸಾವಿರ ಸಂಬಳ, ಉಳಿದ ವೆಚ್ಚಗಳನ್ನು ನಿಭಾಯಿಸಿಕೊಂಡು ಕೂಡ ಅಂಗಡಿ ಮಾಲೀಕ ಲಕ್ಷಗಟ್ಟಲೇ ಆದಾಯ ಕಾಣುತ್ತಿದ್ದುದುಂಟು. ಆದರೆ, ಇಂದು ಅಂಗಡಿ ಬಾಡಿಗೆ ಕಟ್ಟಲು ಬೇಕಾಗುವಷ್ಟು ಆದಾಯ ಸಹ ಸಿಗದ ಸ್ಥಿತಿ ನಿರ್ಮಾಣ ಆಗಿದೆ.
ಕಳೆದ 2 ವರ್ಷಗಳಿಂದ ವ್ಯಾಪಾರ ವಹಿವಾಟು ಕುಸಿಯುತ್ತಾ ಬಂದಿದೆ. ಆದರೆ, ಈ ವರ್ಷವಂತೂ ಸಂಪೂರ್ಣ ನೆಲಕಚ್ಚಿ ಹೋಗಿದೆ. ಇದೇ ಸ್ಥಿತಿ ಇನ್ನೆರಡು 3 ತಿಂಗಳು ಮುಂದುವರಿದಿದ್ದೇ ಇಲ್ಲಿನ ಅದೆಷ್ಟೋ ಅಂಗಡಿಗಳು ಮುಚ್ಚಿಹೋಗುವುದು ಖಚಿತ. ದಿನನಿತ್ಯ ಗಿರಾಕಿಗಳ ಗೋಜಲಿನಿಂದ ರೋಸಿಹೋಗುತ್ತಿದ್ದ ಅಂಗಡಿ ಕೆಲಸಗಾರರು ಇಂದು ಸುಮ್ಮನೆ ಕುಳಿತು ಬೇಸರಗೊಂಡು ಸ್ವತಃ ತಾವೇ ಕೆಲಸ ಬಿಟ್ಟು ಹೋಗುತ್ತಿದ್ದಾರೆ.
ದೊಡ್ಡ ದೊಡ್ಡ ವಸ್ತ್ರ ವ್ಯಾಪಾರಿಗಳು, ಗೃಹಪಯೋಗಿ, ವಿದ್ಯುತ್ ಪರಿಕರ, ಪುಸ್ತಕ, ಕಿರಾಣಿ, ಪ್ಲಾಸ್ಟಿಕ್ ಹೀಗೆ ಬಹುತೇಕ ಎಲ್ಲಾ ರೀತಿಯ ವಸ್ತುಗಳ ಮಾರಾಟ ಸ್ಥಳವಾಗಿರುವ ಮಂಡಿಪೇಟೆ, ಎಚ್.ಎಂ. ರಸ್ತೆ, ನರಸರಾಜ ಪೇಟೆ, ಬೆಳ್ಳುಡಿ ಗಲ್ಲಿ, ಬಿ.ಟಿ. ಗಲ್ಲಿ, ಕೆ.ಆರ್. ಮಾರುಕಟ್ಟೆ ಪ್ರದೇಶ ಇಂದು ತನ್ನ ನೈಜ ರೂಪ ಕಳೆದುಕೊಂಡಿವೆ. ಈ ಹಿಂದೆ ಅಲ್ಲಿ ವಾಹನ ಸವಾರಿ ದೊಡ್ಡ ಸವಾಲು ಎಂಬಂತಿತ್ತು.
ಅಂಥಹ ಜನಜಂಗುಳಿ ಸದಾ ಇರುತ್ತಿತ್ತು. ಆದರೆ, ಇಂದು ಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ರಸ್ತೆಗಳು ಬಿಕೋ ಎನ್ನುತ್ತವೆ. ಅಂಗಡಿಗಳು ಬಾಗಿಲು ತೆರೆದಿದ್ದರೂ ಗ್ರಾಹಕರಿಲ್ಲದೆ ಬಣಗುಟ್ಟುತ್ತಿವೆ. ಇಡೀ ಪ್ರದೇಶದ ವಾತಾವರಣವೇ ಬದಲಾಗಿದೆ. ಅನೇಕರು ಬ್ಯಾಂಕ್‌ನಲ್ಲಿ ಸಾಲ ಪಡೆದು ವ್ಯಾಪಾರ ವಹಿವಾಟ ನಡೆಸುತ್ತಿದ್ದರು. ಕಂತು ಬಡ್ಡಿ ಕಟ್ಟಲು ಹೆಣಗಾಡುವಂತಹ ಸ್ಥಿತಿ ಇಂದು ನಿರ್ಮಾಣ ಆಗಿದೆ.
* ಪಾಟೀಲ ವೀರನಗೌಡ