ದುಬೈ : ವಿಶ್ವದ ಅತ್ಯಂತ ಎತ್ತರದ 86 ಮಹಡಿಗಳ ಗಗನಚುಂಬಿ ವಸತಿ ಕಟ್ಟಡಕ್ಕೆ ನಿನ್ನೆ ಗುರುವಾರ ಮಧ್ಯರಾತ್ರಿಯ ಬಳಿಕ ಬೆಂಕಿ ತಗುಲಿದ್ದು ಬೆಂಕಿಯ ಭಾರೀ ಕೆನ್ನಾಲಗೆ ಕಟ್ಟಡವನ್ನು ಆವರಿಸಿಕೊಂಡು ಜನರಲ್ಲಿ ತೀವ್ರವಾದ ಪ್ರಾಣ ಭೀತಿ ಹುಟ್ಟಿಸಿದ ಘಟನೆ ನಡೆದಿದೆ.
86 ಅಂತಸ್ತುಗಳ ಈ ಕಟ್ಟಡದ 40 ಮಹಡಿಗಳ ಒಂದು ಭಾಗಕ್ಕೆ ಬೆಂಕಿ ತಗುಲಿತ್ತು. ಕಟ್ಟಡದ ಹೊರ ಭಾಗದಲ್ಲಿ ಜನರು ಜಮಾಯಿಸಿ ಭಯದಿಂದ ಚೀರುತ್ತಿದ್ದರು. ಮಧ್ಯರಾತ್ರಿ ಕಳೆದು ನಸುಕಿನ 1 ಗಂಟೆಯ ವೇಳೆಗೆ ಕಟ್ಟಡದ ಒಂದು ಭಾಗಕ್ಕೆ ಬೆಂಕಿ ತಗುಲಿತೆಂದು ಸ್ಥಳದಲ್ಲಿದ್ದ ಜನರು ಹೇಳಿರುವುದನ್ನು ಅಸೋಸಿಯೇಟೆಡ್ ಪ್ರಸ್ ವರದಿ ಮಾಡಿದೆ.
ಸುದ್ದಿ ತಿಳಿದು ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಭಾರೀ ಸಾಹಸ ನಡೆಸಿ ಬೆಳಗ್ಗಿನ 3.30ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ವಿಶೇಷವೆಂದರೆ ಈ ಬೆಂಕಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಮತ್ತು ಯಾರಿಗೂ ಗಾಯಗಳಾದ ವರದಿ ಇಲ್ಲ.
ಬೆಂಕಿ ತಗುಲಿನ ಕಟ್ಟಡದ ಭಾಗವನ್ನು ತಣಿಸುವ ಕಾರ್ಯ ಇದೀಗ ಚುರುಕಿನಿಂದ ಸಾಗಿದೆ ಎಂದು ದುಬೈನ ಅಧಿಕೃತ ಮಾಧ್ಯಮ ಕಚೇರಿ ಟ್ವಿಟರ್‌ನಲ್ಲಿ ಹೇಳಿದೆ.
ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಈ ಕಟ್ಟಡ ಬೆಂಕಿ ಅನಾಹುತಕ್ಕೆ ಗುರಿಯಾಗಿರುವುದು ಇದು ಎರಡನೇ ಬಾರಿ. ದುಬೈನ ಮರೀನಾ ಜಿಲ್ಲೆಯ ಪ್ರಸಿದ್ಧ ವಾಟರ್ ಫ್ರಂಟ್ ಪ್ರದೇಶದಲ್ಲಿರುವ 1,100 ಅಡಿ ಎತ್ತರದ (ಸುಮಾರು 335 ಮೀಟರ್) ಈ ಕಟ್ಟಡಕ್ಕೆ 2015ರ ಫೆಬ್ರವರಿಯಲ್ಲಿ ಒಮ್ಮೆ ಬೆಂಕಿ ತಗುಲಿತ್ತು. ಆಗಲೂ ಯಾವುದೇ ಜೀವ ಹಾನಿ ಆಗಿರಲಿಲ್ಲ.