Advertisement

Fixing; ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಜೋಶಿ: ದಿಂಗಾಲೇಶ್ವರ ಶ್ರೀ

09:43 PM Apr 09, 2024 | Team Udayavani |

ದಾವಣಗೆರೆ: ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಈವರೆಗೆ ಯಾವುದೇ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಿಲ್ಲ ಎಂದು ಶಿರಹಟ್ಟಿ ಜಗದ್ಗುರು ಶ್ರೀ ಫಕಿರೇಶ್ವರ ಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

Advertisement

ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ, ವಚನಾನಂದ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಾವುದೇ ಪಕ್ಷಗಳಿಂದ ಆಹ್ವಾನ ಬಂದರೂ ಮೊದಲು ಭಕ್ತರು ಹಾಗೂ ಸಾರ್ವಜನಿಕರ ಮುಂದೆ ವಿಚಾರ ಇಡುತ್ತೇನೆ. ಆ ಬಳಿಕ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿಯೇ ಅಂತಿಮ ನಿರ್ಧಾರ ಘೋಷಣೆ ಮಾಡಲಾಗುವುದು. ನಾನೊಬ್ಬನೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗದು ಎಂದ ಅವರು, ನಾನು ಬಿಜೆಪಿ ಬಂಡಾಯನೂ ಅಲ್ಲ. ಕಾಂಗ್ರೆಸ್ ಬಂಡಾಯನೂ ಅಲ್ಲ ಎಂದರು.

ಯಾರೇ ಮನವೊಲಿಸಲು ಬಂದರೂ ನನ್ನ ನಿರ್ಣಯ ಬದಲಾಯಿಸುವುದಿಲ್ಲ
ಕೆಲ ಮಠಾಧೀಶರನ್ನು ಜೋಷಿ ಹೆದರಿಸಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ನಮ್ಮ ವಿರುದ್ದ ಹೇಳಿಕೆ ಕೊಡುವ ಸ್ವಾಮೀಜಿ ಗಳ ವಿರುದ್ದವೇ ಆ ಮಠದ ಭಕ್ತರೇ ಸಿಟ್ಟು ಹೊರ ಹಾಕುತ್ತಿದ್ದಾರೆ. ಅಲ್ಲಿ ಕೂಡ ಒಡೆದಾಳುವ ಕೆಲಸ ಜೋಶಿಯವರು ಮಾಡುತ್ತಿದ್ದಾರೆ. ಗುರುಗಳ ಆಶೀರ್ವಾದ ಪಡೆದೇ ನಾನು ಮಠದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ಲಿಂಗಾಯತರನ್ನು ಕೇವಲ ಮತಗಳಿಗಷ್ಟೇ ಉಪಯೋಗ ಮಾಡಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ಲಿಂಗಾಯತ ಸಮುದಾಯಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ದಿಂಗಾಲೇಶ್ವರ ಶ್ರೀ ಪ್ರಶ್ನಿಸಿದರು.

Advertisement

ಲಿಂಗಾಯತ ‌ನಾಯಕರನ್ನು ತುಳಿಯುವುದರಲ್ಲಿ ಪ್ರಮುಖ ಪಾತ್ರ ಜೋಷಿಯವರದ್ದು‌. ಲಿಂಗಾಯತ ‌ನಾಯಕರು ಅಷ್ಟೇ ಅಲ್ಲ ಅ ಭಾಗದ ಎಲ್ಲಾ ಸಮಾಜದ ಜನರು ಕೂಡ ನನ್ನ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡಿದ್ದಾರೆ. ಅದರಲ್ಲಿ ಬ್ರಾಹ್ಮಣ ಸಮಾಜದವರು ಕೂಡ ಅತ್ಯಂತ ಪ್ರಮುಖವಾಗಿ ಸ್ವಾಗತ ಮಾಡಿದ್ದಾರೆ ಎಂದರು.

ಫಿಕ್ಸಿಂಗ್ ಆಗಿದೆ
ಧಾರವಾಡದಲ್ಲಿ ಎಲೆಕ್ಷನ್ ಫಿಕ್ಸಿಂಗ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಜೋಶಿಯವರೇ ಆಯ್ಕೆ ಮಾಡಿದ್ದಾರೆ. ಅವರೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಸಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಈ ಎರಡು ಪಕ್ಷದ ಜನರು ನನ್ನನ್ನು ಬಯಸಿ ಬೆಂಬಲಿಸಿದ್ದಾರೆ ಎಂದರು.

ಲಿಂಗಾಯತರು, ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಹಿಂದಿನಿಂದಲೂ ಜೋಶಿಯವರು ಬಂದಿದ್ದಾರೆ. ನಮ್ಮ ಮೇಲಿನ ಅಪಪ್ರಚಾರಗಳು ಜೋಶಿಯವರ ಕುತಂತ್ರದಿಂದಲೇ ನಡೆಯುತ್ತಿವೆ. ಎಷ್ಟೇ ವಿರೋಧ ಮಾಡಿದರೂ ಹಿಗ್ಗುವ ಕುಗ್ಗುವ ಕೆಲಸ ಮಾಡಿಲ್ಲ ಎಂದರು.
ನಾನು 40% ಅರೋಪವನ್ನು ಸಾಬೀತು ಮಾಡುತ್ತೇನೆಂದು ಹೇಳಿದ್ದೆ. ಆಗಲೂ ಸಮಸ್ಯೆಗಳು ಬಂದಿದ್ದವು. ಈಗಲೂ ಕೂಡ ಸಮಸ್ಯೆಗಳು ಬಂದಿವೆ. ಸತ್ಯ ಇರುವಾಗ ಸಮಸ್ಯೆಗಳು ಬಂದೇ ಬರುತ್ತವೆ ಎಂದರು.

ನನ್ನ ಮಠ ಇರುವ ಊರಿನಲ್ಲೇ ನಮ್ಮ ವಿರುದ್ದ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿರುದ್ದ ನಮ್ಮವರನ್ನೇ ವಿರುದ್ದ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಬಹುಸಂಖ್ಯಾತರಾದ ಲಿಂಗಾಯತರು ಹಾಗೂ ಉಳಿದ ಸಮಾಜದವರು ಕೂಡ ಈ ಬಾರಿ ಜೋಷಿಯವರಿಗೆ ಉತ್ತರ ಕೊಡುತ್ತಾರೆ ಎಂದರು.

ನಾನು ಹಾಗೂ ವಚನಾನಂದ ಸ್ವಾಮೀಜಿ ಆತ್ಮೀಯರು.ಈಗ ನಾನು ಪೀಠಕ್ಕೆ ಬಂದಿದ್ದಕ್ಕೆ ವಿಶೇಷ ಆರ್ಥ ಬಂದಿದೆ . ಎಲ್ಲ ಮಠಗಳನ್ನು, ಲಿಂಗಾಯತೇತರ ಮಠಗಳನ್ನು ಕೂಡ ಭೇಟಿಯಾಗಿದ್ದೇನೆ. ಎಲ್ಲರೂ ನನಗೆ ಬೆಂಬಲ ಕೊಟ್ಟು ಸ್ವಾಗತ ಮಾಡಿದ್ದಾರೆ ಎಂದರು.

ಸ್ಪರ್ಧೆ ಸ್ವಾಗತಾರ್ಹ: ವಚನಾನಂದ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಸ್ಪರ್ಧೆ ಸ್ವಾಗತಾರ್ಹ ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಿಸಿದರು. ಮಠಕ್ಕೆ ಭೇಟಿ ನೀಡಿದ ದಿಂಗಾಲೇಶ್ವರ ಶ್ರೀ ಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮದ ರೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀ ಗಳು ರಾಜಕೀಯ ಶುದ್ದೀಕರಣಕ್ಕಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಉತ್ತರ ಭಾರತದಂತೆ ಕರ್ನಾಟಕದಲ್ಲಿಯೂ ಮಠಾಧೀಶರು ರಾಜಕಾರಣಕ್ಕೆ ಬರಬೇಕು ಎಂದರು.

ರಾಜಕಾರಣದಲ್ಲಿ ಅಶುದ್ಧಿಯನ್ನು ಶುದ್ಧಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಎಂದೆನಿಸುತ್ತದೆ ಎಂದರು.ಪ್ರಹ್ಲಾದ್ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನ ತುಳಿಯುವಂಥ ಕೆಲಸ ಮಾಡಿದ್ದಾರೆ. ಈ ವಿಚಾರವೂ ನಮ್ಮ ಗಮನಕ್ಕೂ ಬಂದಿದೆ. ಈ ವಿಚಾರವಾಗಿ ನಾವು ಸದ್ಯದಲ್ಲೆ ಭಕ್ತರ ಸಭೆ ನಡೆಸಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ದಿಂಗಾಲೇಶ್ವರ ಪೂಜ್ಯರು ಬಹಳ ವರ್ಷದಿಂದ ಪರಿಚಯ. ಅವರು ಭಕ್ತರೆಲ್ಲರ ಅಭಿಪ್ರಾಯ ಕೇಳಿಕೊಂಡು ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಇದು ಅವರ ವೈಯಕ್ತಿಕ ನಿರ್ಧಾರವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next