ಬೆಂಗಳೂರು: ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ನಗರದಲ್ಲಿನ ಗುಂಡಿ ಸಮಸ್ಯೆ ಪರಿಹಾರ ಕಂಡುಕೊಳ್ಳುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಯರ್ ಸಂಪತ್‌ರಾಜ್‌ರಿಗೆ ಸಲಹೆ ನೀಡಿದ್ದಾರೆ.
ತಮ್ಮ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂಪತ್‌ರಾಜ್‌ರೊಂದಿಗೆ ಮಾತುಕತೆ ನಡೆಸಿದ ಅವರು, ಮಳೆಯಿಂದಾಗಿ ನಗರದ ರಸ್ತೆಗಳು ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಂಡ ಪ್ರಕರಣಗಳು ವರದಿಯಾಗಿದ್ದು, ಕೂಡಲೇ ಗುಂಡಿಗಳನ್ನು ಮುಚ್ಚುವಂತೆ ತಿಳಿಸಿದ್ದಾರೆ.
ಇದರೊಂದಿಗೆ ಪಾಲಿಕೆಯಲ್ಲಿ ಯಾವುದೇ ಯೋಜನೆ ರೂಪಿಸುವ ವೇಳೆ ಮೈತ್ರಿ ಪಕ್ಷ ಜೆಡಿಎಸ್‌ನ್ನು ನಿರ್ಲಕ್ಷಿಸಬಾರದು. ಕಳೆದ 2 ಅವಧಿಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದ್ದು, ಮತ್ತೆ ಮುಂದುವರಿಸುವುದು ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅದಕ್ಕೂ ಮೊದಲು ಮೇಯರ್ ಸಂಪತ್‌ರಾಜ್ “ಮುಖ್ಯಮಂತ್ರಿ ಚಂದ್ರು’ ನಿವಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಇನ್ನಿತರ ಚಿಂತಕರು ಈ ವಿಚಾರ ಕುರಿತು ಚರ್ಚೆ ನಡೆಸಿದರು. ನಂತರ ಮಾತನಾಡಿದರು.
ಮಳೆಯಿಂದ ನಗರದಲ್ಲಿ ಅಪಾರ ಹಾನಿಯಾಗಿದ್ದು, ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಶೀಘ್ರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ ಕೃಷ್ಣಪ್ಪ ಗಾರ್ಡನ್‌ಗೆ ಭೇಟಿ ನೀಡಿದ ಅವರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ನರಸಮ್ಮ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ಪರಿಹಾರ ವಿತರಿಸಿದರು.