Advertisement

Congress; ಮಲ್ಲಿಕಾರ್ಜುನ ಖರ್ಗೆ ಬುದ್ಧಿಮಾತು ಕೇಳುತ್ತೇವೆ: ಡಿ.ಕೆ. ಶಿವಕುಮಾರ್‌

01:16 AM Nov 02, 2024 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಅವರು ಬುದ್ಧಿಮಾತು ಹೇಳಿದರೆ ನಾವು ಕೇಳ ಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಖರ್ಗೆ ಅವರು ತೀಕ್ಷ್ಣವಾಗಿ ಒಗ್ಗಟ್ಟಿನ ಪಾಠ ಮಾಡಿದ ಬೆನ್ನಲ್ಲೇ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಹಿರಿಯರಾದ ಖರ್ಗೆಯವರು ಬುದ್ಧಿ ಮಾತು ಹೇಳುವುದರಲ್ಲಿ ತಪ್ಪೇನಿದೆ? ಅವರು ವಿವಿಧ ಸಂದರ್ಭಗಳಲ್ಲಿ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ನಾನು ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಆದ ಅನಂತರ ಪಕ್ಷ ಹಾಗೂ ಸರಕಾರದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಿವೆಯೇ? ನಾವು ಅಚ್ಚುಕಟ್ಟಾಗಿ ಸರಕಾರ ಹಾಗೂ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ಖರ್ಗೆಯವರು ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಇದುವರೆಗೆ ಇಂತಹ ಘಟನೆ ನಡೆದಿಲ್ಲ. ಅವರು ಹಿರಿಯರಾಗಿ ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದ ವಿಚಾರವನ್ನು ಗಮನದಲ್ಲಿ ಇರಿಸಿಕೊಂಡು ಮಾತನಾಡಿದ್ದಾರೆ. ಮೀಸಲಾತಿ ವಿಷಯವಾಗಿ ಒಂದೊಂದು ರಾಜ್ಯ ಒಂದೊಂದು ನೀತಿಯನ್ನು ಅಳವಡಿಸಿಕೊಂಡಿವೆ. ಸ್ಥಳೀಯ ವಾಗಿ ನಿಮ್ಮ ನೀತಿಯನ್ನು ನೀವು ನಿರೂಪಿಸಿ ಕೊಳ್ಳಿ, ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಎಂದರು.

ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ವಿಪಕ್ಷದವರಿಂದ ಮಾಡಲು ಆಗಲಿಲ್ಲ. ಅಕ್ಕ-ತಂಗಿ, ತಂದೆ- ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಜತೆಗೆ ಆಟವಾಡು ವುದೇ ಅವರ ಕೆಲಸ. ಹೀಗೆ ಮಾಡಿ ಎಷ್ಟೋ ಮನೆಗಳನ್ನು ಒಡೆದು ಹಾಕಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next