ಕಾಬೂಲ್: ಅಫ್ಘಾನಿಸ್ತಾನದಿಂದ ಪಲಾಯನಗೈಯಲು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಈ ಸಂದರ್ಭದಲ್ಲಿ ಗುಂಡಿನ ದಾಳಿಗೆ ಐವರು ಸಾವನ್ನಪ್ಪಿರುವ ಘಟನೆ ಸೋಮವಾರ (ಆಗಸ್ಟ್ 16) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೊಟ್ಟ ಮಾತಿನಂತೆ ಪಿವಿ ಸಿಂಧು ಜೊತೆ ಐಸ್ ಕ್ರಿಮ್ ಸವಿದ ಪ್ರಧಾನಿ ಮೋದಿ
ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ನೂಕುನುಗ್ಗಲನ್ನು ನಿಯಂತ್ರಿಸಲು ಅಮೆರಿಕ ಪಡೆ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಈ ಮೊದಲು ವರದಿಯಾಗಿತ್ತು. ಜನರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೋ ಅಥವಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣದತ್ತ ದೌಡಾಯಿಸಿದ್ದರು. ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಕೆಲವು ವಿಮಾನಗಳಲ್ಲಿ ಜನರು ನೂಕುನುಗ್ಗಲಿನಿಂದ ಮೇಲೇರಲು ಯತ್ನಿಸುತ್ತಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೇನೆ ಬಿಡುಗಡೆಗೊಳಿಸಿರುವ ಆದೇಶದ ಪ್ರಕಾರ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಅಲ್ಲದೇ ವೈಮಾನಿಕ ಮಾರ್ಗವನ್ನೂ ಕೂಡಾ ನಿರ್ಬಂಧಿಸಿರುವುದಾಗಿ ತಿಳಿಸಿದೆ.