ಮೈಸೂರು: ಕಾವೇರಿ ಕಣಿವೆಯ ಮೈಸೂರು, ಚಾಮರಾಜ ನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣವಿದ್ದು, ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಗುಡುಗು-ಮಿಂಚು ಸಹಿತ ಜೂ.28 ರಿಂದ ಜು.2ರ ವರೆಗೆ ನಿತ್ಯ 60 ಮಿ.ಮೀ ಭಾರೀ ಮಳೆಯಾಗಲಿದೆ. ಗರಿಷ್ಠ 25 ರಿಂದ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ರಿಂದ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
ಮೈಸೂರು, ಚಾಮರಾಜ ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಜೂ.28, 29 ಹಾಗೂ ಜು.2 ರಂದು ತಲಾ 15 ಮಿ.ಮೀ, ಜೂ.30, 31 ರಂದು ತಲಾ 10 ಮಿ.ಮೀ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ರೈತರಿಗೆ ಮುನ್ಸೂಚನೆ: ರಾಗಿ ಬಿತ್ತನೆ ಬೀಜಗಳನ್ನು ಸಾಫ್ 4 ಗ್ರಾಂ ಪ್ರತಿ ಒಂದು ಕೆ.ಜಿ ಬೀಜದ ಜೊತೆ ಬೀಜೋಪಚಾರ ಮಾಡುವುದು ಸೂಕ್ತ, ಸ್ಥಳೀಯ ಬಿತ್ತನೆ ಬೀಜವಾದಲ್ಲಿಉಪ್ಪು ನೀರಿನ ದ್ರಾವಣ 1; 4 ಪ್ರಮಾಣ ಬೀಜೋಪಾಚರ ಮಾಡುವುದು. ಜೂನ್‌ತಿಂಗಳಲ್ಲಿ ಇಂಡಫ್-8, ಎಂ ಆರ್-1 ಮತ್ತು ಎಂ ಆರ್-2 ರಾಗಿ ತಳಿ ಬಿತ್ತನೆ ಮಾಡಬಹುದು. ಅಲಸಂದೆ, ಅವರೆ,
-ಉದ್ದು, ಹೆಸರು ಬೆಳೆಗಳಲ್ಲಿ ವಾತಾವರಣದ ವ್ಯತ್ಯಾಸದಿಂದಾಗಿ ಗಿಡದಲ್ಲಿ ಹೇನು, ಹಳದಿ ರೋಗ ಕಂಡುಬರುತ್ತಿದ್ದು ಪ್ರತಿ ಒಂದು ಲೀಟರ್ ನೀರಿಗೆ ಕೀಟನಾಶಕಗಳಾದ ರೋಗರ್ 1.7 ಮಿ.ಲೀ ಮತು ಇಮಿಡಾಕೊ ಪ್ರಿಡ್ 0.5 ಮಿ.ಲೀ ಬೆರಸಿ ಸಿಂಪಡಿಸುವುದು. ಮಳೆ ಇದ್ದಲ್ಲಿ ಸಿಂಪಡಿಸುವ ದ್ರಾವಣದೊಂದಿಗೆ ಸೋಫೀಡ್ ಅಂಟು ದ್ರಾವಣವನ್ನು ಬೆರಸಿ ಸಿಂಪಡಿಸುವುದು ಸೂಕ್ತ.
ಬದನೆಬೆಳೆಯಲ್ಲಿ ಸೊರಗು ರೋಗ ಕಂಡು ಬಂದಲ್ಲಿ ಇದರ ಹತೋಟಿಗೆ 3 ಗ್ರಾಂ ಕಾರ್ಬ್ಆಕ್ಸಿಕೊರೈಡ್ ಮತ್ತು 500 ಗ್ರಾಂ ಸ್ಟ್ರೆಪೋಟೊಮೈಸಿನ್ ಸಲ್ಪೆಟ್ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ, ಅಥವಾ 20 ಗ್ರಾಂ ಬ್ಲೀಚಿಂಗ್ ಪೌಡರನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ರೋಗ ಕಂಡು ಬಂದ ಜಾಗವನ್ನು ಚೆನ್ನಾಗಿ ನೆನಸಬೇಕು.
ಶುಂಠಿ ಮತ್ತು ಅರಿಶಿಣ ಬೆಳೆಗಳಲ್ಲಿ ಗೆಡ್ಡೆ ಕೊಳೆರೋಗ ಕಂಡುಬಂದಿದ್ದು ಇದರ ಹತೋಟಿಗೆ ಜೈವಿಕ ಜೀವಾಣುವಾದ ಟ್ರೆ„ಕೊಡರ್ಮಾ ವಿರಿಡೆ ಮತ್ತು ಅರ್ಜಿನೆ 10 ಗ್ರಾಂ ನಂತೆ 30 ನಿಮಿಷ ಉಪಚರಿಸಿ ಬಿತ್ತುವುದು ಸೂಕ್ತ. ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಇಳಿತವಿರುವುದರಿಂದ ಜಾನುವಾರು,
-ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ಗೋವಿಂದರಾಜು ತಿಳಿಸಿದ್ದಾರೆ.