ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ 17 ಪಂಚಾಯಿತಿಗಳಿಗೆ ತಲಾ ಐದು ಕೋಟಿ ರೂ.ಗಳಂತೆ ಅನುದಾನ ಬಿಡುಗಡೆ ಮಾಡಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು.
ಕೆಂಗೇರಿಯ ನಾಡಕಚೇರಿಯಲ್ಲಿ ಆಯೋಜಿಸಿದ್ದ ಪಿಂಚಣಿ ಮತ್ತು ಕಂದಾಯ ಅದಾಲತ್ ಅನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಶಾಲಾ ಕೊಠಡಿ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಸಂಪರ್ಕ ಸೇತುವೆ ನಿರ್ಮಾಣ ಸೇರಿದಂತೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಸರ್ಕಾರದ ಉದ್ದೇಶವಾಗಿದೆ ಎಂದರು.
ಪ್ರಸ್ತುತ 438 ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಈ ಪೈಕಿ, 205 ಮಂದಿಗೆ ಸಂಧ್ಯಾ ಸುರಕ್ಷಾ ವೇತನ, 61 ಜನರಿಗೆ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, 128 ಮಹಿಳೆಯರಿಗೆ ವಿಧವಾ ವೇತನ, 44 ಫಲಾನುಭವಿಗಳಿಗೆ ಅಂಗವಿಕಲ ಪೋಷಣಾ ವೇತನ ವಿತರಿಸಿದ್ದು, ಮತ್ತೆ ಅರ್ಜಿ ಸಲ್ಲಿಸುವವರಿಗೆ ಮುಂದಿನ ಪಿಂಚಣಿ ಅದಾಲತ್‌ನಲ್ಲಿ ಸೌಲಭ್ಯ ವಿತರಿಸಲಾಗುವುದು ಎಂದರು.
ಕಂದಾಯ ನಿರೀಕ್ಷಕರು ಕ್ಷೇತ್ರದ ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ನಡಸಿ, ಯಾರಿಗೆ ಪಿಂಚಣಿ ಬರುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅರ್ಹರಿಂದ ಅರ್ಜಿ ಪಡೆದು ತಲುಪಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು. ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಸಿ.ಮಂಜಪ್ಪ ಮಾತನಾಡಿ, ಸರ್ಕಾರದಿಂದ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ ಅದಕ್ಕೆ ಅಗತ್ಯವಿರುವ ದಾಖಲೆಗಳ ಬಗ್ಗೆ ತಿಳಿಸಿಕೊಟ್ಟರು.
ಕುಂಬಳಗೋಡು ಪಂಚಾಯತಿ ಅಧ್ಯಕ್ಷ ಚಿಕ್ಕರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಸುಮಾ ಶಿವಮಾದಯ್ಯ, ರಶ್ಮಿ ಹನುಮಂತೇಗೌಡ, ಪಂಚಾಯಿತಿ ಉಪಾಧ್ಯಕ್ಷರಾದ ಯಶೋಧಮ್ಮ, ಮಹೇಶ್, ಮಾಜಿ ಉಪಾಧ್ಯಕ್ಷ ಪ್ರಭು, ರಾಮೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್, ಮುಖಂಡರಾದ ಲಕ್ಷ್ಮಯ್ಯ, ಬಿ.ಕೃಷ್ಣಪ್ಪ, ಉಪತಹಸೀಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಬಾಗವಹಿಸಿದ್ದರು.