ಬೆಳ್ಮಣ್: ಗ್ರಾಮೀಣ ಭಾಗದ ವಿವಿಧ ಆಚರಣೆ, ಸಂಪ್ರದಾಯ ಗಳನ್ನು ಮೀರಿ ನಿಲ್ಲಬಹುದಾದ ಪ್ರಕ್ರಿಯೆ ಗ್ರಾಮೀಣ ಜನರ ಮತ್ಸ್ಯ ಬೇಟೆ “ಉಬಾರ್ ಗುದ್ದುನಿ’ ಕರಾವಳಿ ಭಾಗದಲ್ಲಿ ಬಿರುಸಾಗಿದ್ದು ಕಳೆದೆರಡು ದಿನಗಳ ಭಾರೀ ಮುಂಗಾರು ಮಳೆಗೆ ಯುವಕರು ಹಗಲು ರಾತ್ರಿ ಉಬಾರ್ ಗುದ್ದುನಿ ಪ್ರಕ್ರಿಯೆಯ ಮೂಲಕ ಮತ್ಸ್ಯ ಬೇಟೆಯಲ್ಲಿ ತೊಡಗಿದ್ದಾರೆ.
ಸಂಕಲಕರಿಯ, ಏಳಿಂಜೆ, ಸೂರಿಂಜೆ, ಕಾಂತಾವರ, ಮುಂಡ್ಕೂರು, ಸಾಣೂರು, ಭಾಗದ ಹೊಲ ಗದ್ದೆಗಳಲ್ಲಿ ಯುವಕರು ಕಳೆದೆರಡು ದಿನಗಳಿಂದ ಮೀನು ಬೇಟೆ ನಡೆಸಿದ್ದಾರೆ. ಈ ಪ್ರಕ್ರಿಯೆ ಇನ್ನೂ ಒಂದು ವಾರ ನಡೆಯುವ ಸಾಧ್ಯತೆ ಇದೆೆ.
ಮಳೆಯ ನೀರು ನದಿಗೆ ಸೇರುವ ಗದ್ದೆಗಳಲ್ಲಿ, ಕೊನೆಯವರೆಗೂ ನೀರು ಬತ್ತದ ಹಳ್ಳಿಗಾಡಿನ ಹೊಲಗಳ ಕೆರೆಗಳ ಪಕ್ಕದಲ್ಲಿ ಈ ಮೀನುಗಳು ಸಿಹಿ ನೀರು ಕುಡಿಯಲು ಧಾವಿಸುವ ಸಂದರ್ಭ ಮೀನು ಬೇಟೆ ನಡೆಯುತ್ತಿದೆ. ರಾತ್ರಿ ಹೊತ್ತು ಚಾರ್ಜರ್, ಟಾರ್ಚ್ ಅಥವಾ ದೊಂದಿ ಬಳಸಿ ಕುತ್ತರಿ, ಮಕ್ಕೆರಿ, ಕತ್ತಿ, ದೊಣ್ಣೆ ಬಳಸಿ ಈ ಉಬಾರ್ ಗುದ್ದುನಿ ಪ್ರಕ್ರಿಯೆಯ ಮೂಲಕ ಮೀನುಗಳನ್ನು ಹೊಡೆಯಲಾಗುತ್ತದೆ. ಹಗಲಲ್ಲಿ ಬಲೆಗಳನ್ನು ಬಳಸಿ ಮೀನು ಹಿಡಿಯಲಾಗುತ್ತದೆ. ಹೀಗೆ ಹಿಡಿದ ಮೀನುಗಳು ಭಾರೀ ರುಚಿಕರ ಎಂದು ಸವಿದವರ ಅಂಬೋಣ.
ಕಿಜನ್, ಮುಗುಡು, ಮೊಡೆಂಜಿ, ಜೆಂಜಿ, ಪುರಿಯೋಲು, ಅಬ್ರೋಣಿ, ಅಲಂಕ್, ಕೊಂತಿ ಎಂಬಿತ್ಯಾದಿ ಮೀನುಗಳು ಈ ಬಲೆಗೆ ಸಿಗುತ್ತವೆ.
-ಶರತ್ ಶೆಟ್ಟಿ ಮುಂಡ್ಕೂರು