ಈ ಕೆಲಸವನ್ನು ಮಾಡಲು ಎಂಟೆದೆ ಬೇಕು.. ಸೂರ್ಯೋದಯದ ಬಳಿಕ ಶುರುವಾಗುವ ಕೆಲಸ, ದಿನ ನಿತ್ಯವೂ ಒಡಲ ತುತ್ತು ತುಂಬುತ್ತದೆ ಎಂಬುದಕ್ಕೆ ಯಾವ ಪುರಾವೆಯು ಇಲ್ಲ. ಆದರೂ ಧೃತಿಗೆಡದೆ ತಮ್ಮ ಕಾಯಕವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಾ, ತಮ್ಮ ಕುಟುಂಬವನ್ನು ಸಾಗಿಸುವ ಶ್ರಮಜೀವಿಗಳು ಅಂದರೆ ಮೀನುಗಾರರು.
ಮೀನುಗಾರಿಕೆ ಎಂದರೆ ನಿಮ್ಮ ಪ್ರಕಾರ ಬರೀ ಗಾಳ ಹಾಕಿ ಮೀನು ಹಿಡಿಯುವುದಲ್ಲವೆ? ಕೃಷಿಕ್ಕಿಂತ ಮೀನು ಹಿಡಿಯುವುದು ತುಂಬ ಸುಲಭ ಎನ್ನುವ ಜನರಿದ್ದಾರೆ. ಆದರೆ ನಿಜವಾಗಿಯೂ ಅದೊಂದು ತ್ರಾಸದಾಯಕ ವೃತ್ತಿ. ಮೀನು ಮಾನವ ಹಾಕುವ ಗಾಳಕ್ಕೆ ಸಿಲುಕಿಕೊಳ್ಳಬಾರದು ಎಂದು ಸಂಚರಿಸುತ್ತವೆ. ಮಾನವ ಅದನ್ನು ಹಿಡಿದೆ ತನ್ನ ಜೀವನವನ್ನು ಸಾಗಿಸುವ ಅನಿವಾರ್ಯತೆ ಎದುರಿರುತ್ತದೆ.
ತನ್ನ ಕುಟುಂಬದ ನಿರ್ವಹಣೆಗಾಗಿ ಧೈರ್ಯದಿಂದ ಮತ್ತು ಛಲದಿಂದ ಮುನ್ನುಗ್ಗಿ ಏನನ್ನು ಲೆಕ್ಕಿಸದೆ, ಗಾಳಿ, ಮಳೆ, ಬಿಸಿಲು ಮತ್ತು ಎಷ್ಟೇ ಎತ್ತರದ ಉಬ್ಬರ ಇಳಿತಗಳು ,ತನ್ನವರಿಗಾಗಿ ಹಗಲು- ರಾತ್ರಿ ಸೆಣಸಾಡಿ ಯಶಸ್ಸಿಗಾಗಿ ದುಡಿಯುವ ಕಾಯಕಜೀವಿ.
ಕೆಲವೊಮ್ಮೆ ಹಿಡಿದ ತಂದ ಮೀನಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ, ಅದನ್ನು ನೀರಿಗೆ ಚೆಲ್ಲುವ ಪ್ರಸಂಗಗಳು ನಡೆಯುತ್ತವೆ. ಅದೆಷ್ಟೋ ಏಳು-ಬೀಳುಗಳನ್ನು ದಾಟಿ ಮುಂದಕ್ಕೆ ಜೀವನ ಸಾಗಿಸುತ್ತಾನೆ.
ಹೀಗೆ ಜೀವನ ದೋಣಿಯನ್ನು ಏರಿ ಸಾಗುವ ಮೀನುಗಾರ ತನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಭಾವಿಸುವುದಿಲ್ಲ. ದೇಶದ ಆರ್ಥಿಕತೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಮೀನುಗಾರ ತನಗೆ ಎಲ್ಲ ಬೇಕು ಅನ್ನುವುದಕ್ಕಿಂತ ಇಂದಿನ ದಿನ ಕಳೆದರೆ ಸಾಕು ಎಂದು ಹೋರಾಡುವುದೇ ಹೆಚ್ಚು. ಮೀನು ಬಲೆಯಲ್ಲಿ ಸಿಗುತ್ತದೆ ಎಂಬುದಕ್ಕೆ ಯಾವ ಖಾತ್ರಿಯಿಲ್ಲ, ಒಂದು ವೇಳೆ ನಸೀಬು ಚೆನ್ನಾಗಿದ್ದು ಮೀನು ಸಿಕ್ಕರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬುದಕ್ಕೂ ಖಚಿತತೆ ಇಲ್ಲ. ಇಂತಹ ಸಂಧಿಗ್ಧದಲ್ಲಿ ಮೀನುಗಾರನ ಬದುಕು ಸಾಗುತ್ತದೆ.
ತನ್ನ ಪರಿಸ್ಥಿತಿ ಇಂದು ಸರಿಯಾಗಬಹುದು, ನಾಳೆ ಸರಿಯಾಗಬಹುದು ಎಂದು ಯೋಚಿಸುತ್ತಲೇ ಒಂದು ದಿನ ಸಮುದ್ರದÇÉೋ, ಮನೆಯÇÉೋ? ತನ್ನ ಉಸಿರನ್ನು ನಿಲ್ಲಿಸಿ ಬೀಡುತ್ತಾನೆ. ಮೀನುಗಾರಿಕೆ ಅನ್ನೋದು ಹಿಡಿದು ತಂದ ಮೀನನ್ನು ತಿಂದಷ್ಟು ಸುಲಭವಲ್ಲ.
- ಸಂಚಿತಾ ತಾಂಡೇಲ್
ಎಸ್.ಡಿ.ಎಂ., ಹೊನ್ನಾವರ