Advertisement

ಉಪ್ಪುಂದ ಮೀನುಗಾರಿಕಾ ದೋಣಿ ಅವಘಡ ; ವ್ಯವಸ್ಥೆಯ ಬಗ್ಗೆ ಆಕ್ರೋಶ

10:28 PM Jul 31, 2023 | Team Udayavani |

ಉಪ್ಪುಂದ:ಉಪ್ಪುಂದ ಕರ್ಕಿಕಳಿ ಸಮುದ್ರ ತೀರದಲ್ಲಿ ಮೀನುಗಾರಿಕಾ ಬೋಟ್‌ ಮುಳುಗಡೆಯಾಗಿ ಓರ್ವ ಮೃತ್ತಪಟ್ಟಿದ್ದು, ಇನ್ನೊರ್ವ ಸಮುದ್ರ ಪಾಲಾದ ಘಟನೆ ಜು.31ರಂದು ಮಧ್ಯಾಹ್ನ ಸಂಭವಿಸಿದೆ.

Advertisement

ದೊಡ್ಡಕೊಂಬಿನಮನೆ ನಾಗೇಶ (27) ಮೃತಪಟ್ಟ ದುರ್ದೈವಿ ಮತ್ತು ಗಂರ್ಗೆರಿ ಮನೆ ಸತೀಶ (29) ನೀರು ಪಾಲಾದ ನತದೃಷ್ಟ. ಶೋಧ ಕಾರ್ಯಚಾರಣೆ ಮುಂದುವರಿದೆ.ಉಳಿದ 6 ಮಂದಿ ಈಜಿ ದಡ ಸೇರಿದ್ದರು. ಇಬ್ಬರು ನಿಂತ್ರಾಣಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಾರು 8ಜನ ಮೀನುಗಾರರು ಸೋಮವಾರ ಬೆಳಗ್ಗೆ ಸಚಿನ್ ಅವರ ಮಾಲಕತ್ವದ ಪಟ್ಟಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ದಡಕ್ಕೆ ಬರುವಾಗ ಬೃಹತ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿ ಹೊಡದು ಮುಳುಗಿದೆ.

ಕಾರಿನಲ್ಲಿ ಆಸ್ಪತ್ರೆಗೆ
ಈಜಿ ದಡ ಸೇರುತ್ತಿದ್ದವರಲ್ಲಿ ನಾಗೇಶ ಅವರ ಸ್ಥಿತಿ ಗಂಭೀರಗೊಂಡಿದ್ದು ಹಾಗೂ ಇಬ್ಬರು ಆಯಾಸಗೊಂಡಿರುವುದರಿಂದ ಅಂಬುಲೆನ್ಸ್‌ ತಕ್ಷಣಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ ಇರುವುದರಿಂದ ಶೇಖರ ಪೂಜಾರಿ ಅವರ ಕಾರಿನಲ್ಲಿ ಬೈಂದೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ದೂರವಾಣಿಯಲ್ಲಿ ಕುಂದಾಪುರಕ್ಕೆ ಹೋಗಿ ಎಂದ ಡಾಕ್ಟರ್ ಗಂಭೀರಗೊಂಡ ನಾಗೇಶ ಅವರನ್ನು ಹಾಗೂ ಮತ್ತೆ ಇಬ್ಬರನ್ನು ಬೈಂದೂರು ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಡ್ಯೂಟಿ ವೈದ್ಯರು ಇಲ್ಲದೆ ಇರುವುದು, ಪ್ರಾಥಮಿಕ ಚಿಕಿತ್ಸೆಯು ನೀಡದೆ, ಡಾಕ್ಟರ್ ರಾಜೇಶ ಅವರು ದೂರವಾಣಿಯಲ್ಲೇ ಕುಂದಾಪುರಕ್ಕೆ ಕಳುಹಿಸಿ ಎಂದು ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶೇಖರ ಪೂಜಾರಿ ಅವರು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕುಂದಾಪುರಕ್ಕೆ ಸಾಗಿಸುವ ಮಧ್ಯೆ 108 ಅಂಬುಲೆನ್ಸ್‌ಗೆ ಶಿಪ್ಟ್ ಮಾಡುವಾಗ ನಾಗೇಶ ಅವರು ಮೃತಪಟ್ಟಿರುವುದನ್ನು ಸಿಬಂದಿ ಗಮನಿಸಿ, ಬೈಂದೂರಿಗೆ ಸಾಗಿಸಲು ಸೂಚಿಸಿದರು. ಇಬ್ಬರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆ ವಿವರ
8ಜನ ಮೀನುಗಾರರು ಸೋಮವಾರ ಬೆಳಗ್ಗೆ ಪಟ್ಟಿ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿರುವಾಗ ಮಡಿಕಲ್‌ ಕರ್ಕಿಕಳಿ ಸಮೀಪದಲ್ಲಿ ದಡ ಸೇರಲು ಬರುತ್ತಿದ್ದಾಗ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿತು. ದೋಣಿ ಅಪಾಯದಲ್ಲಿ ಇರುವುದನ್ನು ಅರಿತ ಮೀನುಗಾರರು ಆ ತಕ್ಷಣ ಅಲೆಗಳ ಹೊಡೆತದಿಂದ ಅಪಾಯದಿಂದ ತಪ್ಪಿಸುವ ಪ್ರಯತ್ನ ಕೈಗೊಂಡರು ಕೂಡಾ ರಭಸವಾಗಿ ಬೀಸಿದ ಅಲೆಗಳ ಹೊಡೆತಕ್ಕೆ ದೋಣಿ ಮುಳುಗಿ ಪಲ್ಟಿಹೊಡೆಯಿತು. ಮೀನುಗಾರರು ಸಮುದಕ್ಕೆ ಹಾರಿ ಈಜಿ ದಡ ಸೇರುವ ಪ್ರಯತ್ತನದಲ್ಲಿ ಇರುವಾಗಲ್ಲೆ ಸತೀಸ್‌ ಅವರು ನೋಡು ನೋಡುತ್ತಿರುವಾಗಲ್ಲೇ ತೆರೆಗಳೊಂದಿಗೆ ಕೊಚ್ಚಿಕೊಂಡು ಹೋದರು. ನೀರಿನಲ್ಲಿ ಹೋರಾಟ ನಡೆಸಿ ತೀವ್ರ ಗಂಭೀರಗೊಂಡಿದ್ದ ನಾಗೇಶ ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದರು.

Advertisement

ಸ್ಥಳ ಬದಲಾವಣೆ ಮಾಡಿದ್ದೇ ತಪ್ಪಾಯಿತೇ?
ಉಪ್ಪುಂದ, ಕರ್ಕಿಕಳಿ, ಮಡಿಕಲ್‌ ಭಾಗದ ಮೀನುಗಾರರು ಅಪೂರ್ಣಗೊಂಡ ಕೊಡೇರಿ ಬಂದರು ಪ್ರದೇಶದ ಮೂಲಕ ದಡ ಸೇರುವುದು ವಾಡಿಕೆ. ಒಂದು ವೇಳೆ ಅಲ್ಲಿ ಒಳ ಪ್ರವೇಶಿಸಲು ಸಾಧ್ಯವಾಗದ ಸಂದರ್ಭವನ್ನು ಅರಿತು ಮತ್ತೂಂದು ಪ್ರದೇಶದ ತೀರಕ್ಕೆ ದೋಣಿಯನ್ನು ತರಲು ಮುಂದಾಗುತ್ತಾರೆ. ಮರ್ಲಿ ಚಿಕ್ಕು ದೋಣಿ ಅವರು ಮೊದಲು ಕೊಡೇರಿ ಬಂದರು ತೀರದ ಮೂಲಕ ಒಳ ಪ್ರವೇಶ ಮಾಡಲು ತಿರ್ಮಾನಿಸಿ ಅಲ್ಲಿಗೆ ಹೋದಾಗ ಸಮುದ್ರದ ಆರ್ಭಟ ಹೆಚ್ಚಾಗಿರುವುದನ್ನು ಗಮನಿಸಿ, ನೀರಿನ ಸೆಳೆತ ವಿಪರೀತ ಇರುವುದನ್ನು ಅರಿತು ದೋಣಿಯ ಮಾರ್ಗವನ್ನು ಬದಲಾಯಿಸುತ್ತಾರೆ. ಆಗ ದೋಣಿಯಲ್ಲಿದ್ದವರು ಮಡಿಕಲ್‌ -ಕರ್ಕಿಕಳಿ ಪ್ರದೇಶದಲ್ಲಿ ದೋಣಿಯನ್ನು ದಡ ಸೇರಿಸಲು ಮುಂದಾಗುತ್ತಾರೆ. ದಡದಿಂದ 300-400 ಮೀ.ದೂರದಲ್ಲಿ ಸುಮಾರು 20ನಿಮಿಷಗಳ ಕಾಲ ದಡ ಸೇರಿಸುವ ಪ್ರಯತ್ನದಲ್ಲಿ ಇದ್ದಾಗ ಅಲೆಗಳ ಅಬ್ಬರ ಹೆಚ್ಚಾಗಿ ದೋಣಿ ಮಗುಚಿ ಅವಘಡ ಸಂಭವಿಸಿತು.

ಕೊಡೇರಿ ಬಂದರು ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಕಾರಕ್ಕೆ ಸಾಕಷ್ಟು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮೀನುಗಾರರು.

ಶಾಸಕರು ವಾಪಾಸ್ಸು
ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಬೆಂಗಳೂರಿನ ಸಭೆಯನ್ನು ತಕ್ಷಣ ರದ್ದುಗೊಳಿಸಿ ಮಂಗಳವಾರ ಬೈಂದೂರಿಗೆ ಆಗಮಿಸುವ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠಕ ಬಿ.ಎಸ್‌.ಸುರೇಶ ಶೆಟ್ಟಿ, ಬೈಂದೂರು ವಲಯ ನಾಡದೋಣಿ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ, ಉಪ್ಪುಂದ ರಾಣಿಬಲೆ ಮೀನುಗಾರರ ಅಧ್ಯಕ್ಷ ವೆಂಕಟರಮಣ ಖಾರ್ವಿ ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next