ಉಡುಪಿ : ಸಮುದ್ರ ಮೀನುಗಾರಿಕೆಗೆ ಅನುಕೂಲ ಆಗುವಂತೆ ನಾಡದೋಣಿ ಮೀನುಗಾರರಿಗೆ ಕ್ಲಪ್ತ ಸಮಯದಲ್ಲಿ ಸೀಮೆಎಣ್ಣೆ ಪೂರೈಕೆಗೆ ಆಗ್ರಹಿಸಿ ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದಿಂದ ಡಿ. 3ರ ಬೆಳಗ್ಗೆ 10 ಗಂಟೆಗೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಕ್ಕೊತ್ತಾಯ ಆಂದೋಲನ ನಡೆಸಲಿದ್ದಾರೆ.
ಬೆಳಗ್ಗೆ ಎಂಜಿಎಂ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಸಲಿದ್ದೇವೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರಕಾರದ ಆದೇಶದಂತೆ ನಾಡದೋಣಿ ಮೀನುಗಾರರಿಗೆ ಆಗಸ್ಟ್‌ನಿಂದ ಸೀಮೆಎಣ್ಣೆ ಬಿಡುಗಡೆಯಾಗಬೇಕಿತ್ತು. ನ. 2ರಂದು ಕೇಂದ್ರ ಸರಕಾರದಿಂದ 3 ಸಾವಿರ ಕಿಲೋ ಲೀಟರ್ ಸೀಮೆಎಣ್ಣೆ ಬಿಡುಗಡೆಯಾಗಿದ್ದು, ಇಂದಿನವರೆಗೂ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಗದೆ ಮೀನುಗಾರಿಕೆಗೆ ಹೋಗದೆ ತಮ್ಮ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಒಂದು ದೋಣಿಗೆ ತಿಂಗಳಿಗೆ 300 ಕಿ.ಲೀ. ಸೀಮೆಎಣ್ಣೆ ಬೇಕಾಗುತ್ತದೆ. ರಾಜ್ಯದಲ್ಲಿ ಸುಮಾರು 8,030 ದೋಣಿಗಳಿವೆ. ಇದಕ್ಕೆ ಒಟ್ಟು 2,409 ಕಿ.ಲೀನಷ್ಟು ಸೀಮೆಎಣ್ಣೆ ಆವಶ್ಯಕತೆ ಇದೆ. ಮುಖ್ಯಮಂತ್ರಿಗಳು ಮೀನುಗಾರರ ಸೀಮೆಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.
ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ, ಮಾಜಿ ಅಧ್ಯಕ್ಷ ರಾಮಚಂದ್ರ ಖಾರ್ವಿ, ಉಪಾಧ್ಯಕ್ಷರಾದ ರಾಮ ಖಾರ್ವಿ, ಭಾಸ್ಕರ ಖಾರ್ವಿ, ಮುರಳೀಧರ ಖಾರ್ವಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಖಾರ್ವಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿ: ಸಿಎಂ ಬೊಮ್ಮಾಯಿ