Advertisement
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು ಇದು ವಾಯವ್ಯ ಕಡೆಗೆ ಚಲಿಸುವ ಸಾಧ್ಯತೆಗಳಿವೆ. ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಯೆಮನ್ ಆಗ್ನೇಯ ಕರಾವಳಿಯತ್ತ ಸಾಗಲಿದೆ. ವಾಯುಭಾರ ಕುಸಿತ ಸಂಭವಿಸಿದರೆ ಈ ಭಾಗದ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಲಿದ್ದು ಗಂಟೆಗೆ 35 ರಿಂದ 45 ಕಿ.ಮೀ. ವೇಗದಲ್ಲಿ ಬೀಸಲಿದೆ. ಈ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.
ಕರಾವಳಿಯ ಮೀನುಗಾರರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಮೀನುಗಾರಿಕಾ ಉಪನಿರ್ದೇಶಕ ಮಹೇಶ್ ಕುಮಾರ್ ಯು. ಉದಯವಾಣಿಯ ಜತೆ ಮಾತನಾಡಿ, ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಈಗಾಗಲೇ ಮೀನುಗಾರರಿಗೆ ಮುಂದಿನ 48 ಗಂಟೆಗಳ ಕಾಲ ಕಡಲಿಗಿಳಿಯದಂತೆ ಎಚ್ಚರಿಕೆಯ ಸಂದೇಶ ರವಾ ನಿಸಲಾಗಿದೆ. ಇದೇ ಮುಂದಿನ ಜೂನ್ 1ರಿಂದ ಮುಂದಿನ 60 ದಿನಗಳವರೆಗೆ ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ಮೀನುಗಾರರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದಾರೆ. ಅವರು ಮೇ 28ರ ಮೊದಲು ಮೀನುಗಾರಿಕೆ ಸ್ಥಗಿತಗೊಳಿಸಿ ಬರುವುದು ಅನುಮಾನ. ಹಾಗಿದ್ದರೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದರು.