Advertisement

ಮೀನುಗಾರಿಕಾ ಕಾಲೇಜು ವಿ.ವಿ. ಕನಸಿಗೆ ಎನ್‌ಇಪಿ ಅಡ್ಡಿ ?

12:45 AM Oct 10, 2022 | Team Udayavani |

ಮಂಗಳೂರು: ಪ್ರತ್ಯೇಕ ಮೀನುಗಾರಿಕೆ ವಿಶ್ವವಿದ್ಯಾ ನಿಲಯ ಆಗುವ ಮಂಗಳೂರು ಮೀನುಗಾರಿಕಾ
ಮಹಾವಿದ್ಯಾ ನಿಲಯದ ಕನಸಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಡ್ಡಿಯಾಗುವ ಸಾಧ್ಯತೆ ಗೋಚರಿಸಿದೆ.

Advertisement

ಮಂಗಳೂರು ಮೀನುಗಾರಿಕಾ ಮಹಾವಿದ್ಯಾನಿಲಯ ದೇಶದಲ್ಲೇ ಮೊದಲ ಮೀನುಗಾರಿಕಾ ಕಾಲೇಜು ಎಂಬ ಹಿರಿಮೆ ಹೊಂದಿದೆ. ಇದರ ಬಳಿಕ ಪ್ರಾರಂಭಗೊಂಡ ಎರಡು ಮೀನುಗಾರಿಕಾ ಕಾಲೇಜುಗಳು ವಿಶ್ವವಿದ್ಯಾನಿಲಯಗಳಾಗಿವೆ. ಆದರೆ ಸತತ ಪ್ರಯತ್ನದ ಬಳಿಕವೂ ಮಂಗಳೂರು ಮೀನುಗಾರಿಕಾ ಕಾಲೇಜಿಗೆ ಅಂತಹ ಅವಕಾಶ ಒದಗಿ ಬಂದಿಲ್ಲ ಎಂಬ ಕೊರಗೂ ಇದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರತ್ಯೇಕ ವಿಷಯಗಳಿಗೆ ವಿಶ್ವವಿದ್ಯಾನಿಲಯ ಮಾನ್ಯತೆ ಕೊಡುವುದಕ್ಕಿಂತಲೂ ಹಲವು ವಿಷಯಗಳನ್ನೊಳಗೊಂಡ ಮಲ್ಟಿ ಡಿಸಿಪ್ಲಿನರಿ ಯುನಿವರ್ಸಿಟಿ ಮಾಡಬೇಕು ಎನ್ನುವ ಮಾರ್ಗಸೂಚಿ ಇದೆ.
ಅದರನ್ವಯ ನೋಡಿದರೆ ಪ್ರತ್ಯೇಕ ಮೀನುಗಾರಿಕಾ ವಿಷಯಕ್ಕೆ ಯುನಿವರ್ಸಿಟಿ ರೂಪಿಸುವ ಸಾಧ್ಯತೆ ಕಡಿಮೆ, ಈಗಿರುವ ಐಐಎಸ್ಸಿಗಳಲ್ಲೇ ಮೆಡಿಕಲ್‌ ಸೆಂಟರ್‌ ಸೇರ್ಪಡೆ ಮಾಡುವ ಪ್ರಸ್ತಾಪವಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಕೃಷಿ, ತೋಟಗಾರಿಕೆ, ಮೀನು ಗಾರಿಕೆ ಈ ಮೂರು ವಿಚಾರಗಳನ್ನು ಸೇರಿಸಿಕೊಂಡು ವಿಶ್ವವಿದ್ಯಾನಿಲಯ ರಚನೆಗೆ ಒತ್ತಾಯಿಸುವ ಪರಿಸ್ಥಿತಿ ಸದ್ಯ ಎದುರಾಗಿದೆ. ಮೀನುಗಾರಿಕೆ ಹೆಸರೊಂದರಲ್ಲೇ ಪ್ರಸ್ತಾವ ಈಗಿನ ಹೊಸ ಸನ್ನಿವೇಶದಲ್ಲಿ ಸರಿಯಾಗುವುದಿಲ್ಲ ಎನ್ನುವ ಅಭಿಪ್ರಾಯ ಅವರದ್ದು.

ಬಹಳ ಬೇಡಿಕೆ
1969ರಲ್ಲಿ ಸ್ಥಾಪನೆಯಾದ ಮೀನುಗಾರಿಕಾ ಕಾಲೇಜು ದೇಶದಲ್ಲೇ ಹಳೆಯದ್ದು. ಇದರ ಬಳಿಕ ತಮಿಳುನಾಡು ಹಾಗೂ ಕೇರಳದಲ್ಲಿ ಮೀನುಗಾರಿಕಾ ಕಾಲೇಜುಗಳು ಸ್ಥಾಪನೆಯಾಗಿದ್ದು ಎರಡೂ ವಿ.ವಿ.ಗಳಾಗಿ ಮೇಲ್ದರ್ಜೆಗೇರಿವೆ. ಮಂಗಳೂರು ಮೀನುಗಾರಿಕಾ ಕಾಲೇಜು ಅಂದು ಭಾರತೀಯ ಕೃಷಿ ಸಂಶೋಧನ ಕೇಂದ್ರದ ಅಧೀನದಲ್ಲಿ ಬೆಂಗಳೂರು ಕೃಷಿ ವಿ.ವಿ. ಮಾನ್ಯತೆಯೊಂದಿಗೆ ಕೆಲಸ ಮಾಡುತ್ತಿತ್ತು. ಪ್ರಸ್ತುತ ಬೀದರ್‌ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿ.ವಿ. ಅಧೀನದಲ್ಲಿ ಕಾರ್ಯವೆಸಗುತ್ತಿದೆ. ಈ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಕೆಲವು ವರ್ಷಗಳಿಂದ ತೀವ್ರಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆಯಿಂದ ಕೂಡ 2021ರ ಆಗಸ್ಟ್‌ನಲ್ಲಿ ಈ ಕುರಿತು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಇದರ ಮಧ್ಯೆಯೇ ಕೆಲವು ತಿಂಗಳ ಹಿಂದೆ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕಾ ಸಂಸ್ಥೆಯಾಗಿ ಪರಿವರ್ತಿಸಿ ಆದೇಶ ಹೊರಡಿಸಲಾಗಿತ್ತು, ಇದಕ್ಕೆ ವಿದ್ಯಾರ್ಥಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿ, ಸಂಸ್ಥೆಯಿಂದ ಉಪಯೋಗವಿಲ್ಲ, ವಿಶ್ವವಿದ್ಯಾ ನಿಲಯ ಆಗಲೇಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಆ ಬಳಿಕ “ಸಂಸ್ಥೆ’ ಮಾನ್ಯತೆಯನ್ನು ರದ್ದುಗೊಳಿಸಿದ ಸರಕಾರ ಮೀನು ಗಾರಿಕಾ ವಿಶ್ವವಿದ್ಯಾ ನಿಲಯವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಯೊಂದನ್ನು ರಚಿಸಿತು.

Advertisement

ಇನ್ನೂ ಸಲ್ಲಿಕೆಯಾಗದ ವರದಿ
2021ರ ಡಿಸೆಂಬರ್‌ನಲ್ಲಿ ಪಶು ಸಂಗೋಪನ ಇಲಾಖೆ ಆಯುಕ್ತರು ಮುಖ್ಯಸ್ಥರಾಗಿ ಹಾಗೂ ಮೀನುಗಾರಿಕಾ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುವ ಸಮಿತಿ ರಚನೆಯಾದ ಬಳಿಕ ಎರಡು ಸಭೆಯಷ್ಟೇ ನಡೆದಿದೆ. ವಿಶ್ವವಿದ್ಯಾನಿಲಯ ಸ್ಥಾಪನೆ ಪರ- ವಿರೋಧವಾಗಿ ಚರ್ಚೆ ಆಗಿದೆ.ಇನ್ನೂ ಕೆಲವು ಸಮಾಲೋಚನೆ ಸಭೆಗಳನ್ನು ನಡೆಸಿದ ಬಳಿಕವಷ್ಟೇ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಸವಲತ್ತು, ಮಾನವ ಸಂಪನ್ಮೂಲ
ಹೆಚ್ಚಿಸುವ ಸವಾಲು
ಸದ್ಯ ಮೀನುಗಾರಿಕಾ ಕಾಲೇಜು ರಾಜ್ಯದಲ್ಲಿ ಒಂದೇ ಇದೆ. ಬೀದರ್‌ ಪಶುವೈದ್ಯಕೀಯ ವಿ.ವಿ.ಯ ಅಧೀನದಲ್ಲಿ ಬೆಂಗಳೂರು, ಹೆಬ್ಟಾಳ, ಅಂಕೋಲಾ ಹಾಗೂ ವಿಜಯಪುರದ ಬೂತ್ನಾಳ್‌ ಸೇರಿದಂತೆ ನಾಲ್ಕು ಪುಟ್ಟ ಸಂಶೋಧನ ಕೇಂದ್ರಗಳಷ್ಟೇ ಇವೆ. ಮಂಗಳೂರಿನ ಕಾಲೇಜಿನಲ್ಲೂ ನಿಗದಿಪಡಿಸಿದ ಹುದ್ದೆಗಳಲ್ಲಿ ಶೇ.30ರಷ್ಟು ಸಿಬಂದಿಗಳಷ್ಟೇ ಇದ್ದಾರೆ, ಅವುಗಳು ಭರ್ತಿಯಾಗಬೇಕಿದೆ. ಅಲ್ಲದೆ ಶಿವಮೊಗ್ಗ, ಅಥವಾ ಆಲಮಟ್ಟಿಯಲ್ಲಿ ಇನ್ನೊಂದು ಮೀನುಗಾರಿಕಾ ಕಾಲೇಜು ಆರಂಭಿಸಬೇಕು, ಆಗ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತದೆ, ಬೋಧಕ ಸಿಬಂದಿಗಳ ಸಂಖ್ಯೆಯೂ ಹೆಚ್ಚುತ್ತದೆ, ಆಗ ಪ್ರತ್ಯೇಕ ವಿ.ವಿ. ಬೇಡಿಕೆಗೆ ಬಲಬರುತ್ತದೆ ಎನ್ನುತ್ತಾರೆ ಮಂಗಳೂರಿನ ಮೀನುಗಾರಿಕಾ ಕಾಲೇಜು ಡೀನ್‌ ಡಾ| ಶಿವಕುಮಾರ್‌ ಮಗಧ.

ಮಂಗಳೂರು ಮೀನುಗಾರಿಕಾ ಕಾಲೇಜನ್ನು ಹಂತಹಂತವಾಗಿ ವಿಶ್ವವಿದ್ಯಾನಿಲಯ ಮಾಡುವ ಬಗ್ಗೆ ಚಿಂತನೆ ಇದೆ, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇನೆ, ಅವರೂ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
– ಎಸ್‌. ಅಂಗಾರ, ಮೀನುಗಾರಿಕಾ ಸಚಿವರು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next