Advertisement

ಹಾಸನ ಜಿಲ್ಲೆಯಲ್ಲಿ ಈ ವರ್ಷ ಮೀನು ಕೃಷಿ ಚುರುಕು; 3 ಕೋಟಿ ಮರಿಗಳ ಬೇಡಿಕೆ

06:15 PM Nov 25, 2022 | Team Udayavani |

ಹಾಸನ: ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಜಲಾಶಯಗಳೂ ಭರ್ತಿಯಾಗಿದ್ದು, ಮೀನುಗಾರಿಕೆಗೆ ವಿಪುಲ ಅವಕಾಶಗಳಿದ್ದು, ಮೀನು ಕೃಷಿಕರಿಂದ ಮೂರು ಕೋಟಿ ಮೀನುಮರಿಗಳಿಗೆ ಬೇಡಿಕೆ ಬಂದಿದೆ.

Advertisement

ಮೀನುಗಾರಿಕೆ ಇಲಾಖೆ ವ್ಯಾಪ್ತಿಯಡಿ ಜಿಲ್ಲೆಯಲ್ಲಿ 172 ಕೆರೆಗಳಿವೆ. ಆ ಪೈಕಿ 97 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಆ ಕೆರೆಗಳಲ್ಲಿ ಮೀನುಗಾರಿಕೆಗೆ ಇಲಾಖೆ ಹರಾಜಿನ ಮೂಲಕ ವಿಲೇವಾರಿ ಮಾಡಿದೆ. ಈ ಕೆರೆಗಳ ಲ್ಲಿ 5 ವರ್ಷಗಳ ಕಾಲ ಮೀನು ಸಾಕಾಣಿಕೆಗೆ ಇಲಾಖೆಯು ಲೈಸೆನ್ಸ್‌ ನೀಡಿದೆ. ಹಾಗೆಯೇ ನದಿಗಳಲ್ಲಿ ಹಾಗೂ ಜ ಲಾಶಯಗಳಲ್ಲಿಯೂ ಮೀನುಗಾರಿಕೆಗೆ ಇಲಾಖೆಯು ಪರವಾನಿಗೆ ನೀಡಿದ್ದು, ನದಿಗಳಲ್ಲಿ ಮೀನುಗಾರಿಕೆಯಿಂದ ಇಲಾಖೆಗೆ 2,76,500 ರೂ., ಜಲಾಶಯಗಳ ಮೀನುಗಾರಿಕೆಯಿಂದ 4,78,500 ರೂ. ಹಾಗೂ ಕೆರೆಗಳಲ್ಲಿ ಮೀನು ಕೃಷಿಗೆ ನೀಡಿರುವ ಪರವಾನಗಿಯಿಂದ 20,70,210 ರೂ. ಸೇರಿ ಒಟ್ಟು ಈ ವರ್ಷ 28.24 ಲಕ್ಷ ರೂ.ಗಳನ್ನು ಮೀನುಗಾರಿಕೆ ಇಲಾಖೆ ಆದಾಯ ನಿರೀಕ್ಷೆ ಮಾಡಿದೆ.

ಮೀನುಗಾರಿಕೆ ನಿಷೇಧ: ಜಿಲ್ಲೆಯಲ್ಲಿ ಒಟ್ಟು 17 ಮೀನುಗಾರಿಕಾ ಸಹಕಾರಿ ಸಂಘಗಳಿದ್ದು, ಈ ಸಂಘಗಳು ವಾರ್ಷಿಕ ಮೂರು ಸಾವಿರ ರೂ. ಪಾವತಿಸಿ ಲೈಸೆನ್ಸ್‌ ಪಡೆದು 10 ತಿಂಗಳು ಮೀನುಗಾರಿಕೆ ಮಾಡಲಿವೆ. ಈ ಸಂಘಗಳು ಗರಿಷ್ಠ ಮೂರು ಕೆರೆಗಳು ಅಥವಾ 300 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಮೀನುಗಾರಿಕೆ ಮಾಡಬಹುದು. ಜೂನ್‌ ಮತ್ತು ಜುಲೈನಲ್ಲಿ ಮೀನುಗಳು ಸಂತಾನಾಭಿವೃದ್ಧಿಯ ಸಮಯವಾಗಿರುವುದರಿಂದ ಆ ಎರಡು ತಿಂಗಳು ನದಿ ಅಥವಾ ಡ್ಯಾಂಗಳಲ್ಲಿ ಮೀನುಗಾರಿಕೆ ನಿಷೇಧಕ್ಕೆ ಒಳಪಟ್ಟು ಸಹಕಾರಿ ಸಂಘಗಳಿಗೆ ಮೀನುಗಾರಿಕೆ ಇಲಾಖೆ ಲೈಸೆನ್ಸ್‌ ನೀಡಲಿದೆ.

ಅತಿ ಹೆಚ್ಚು ಬೇಡಿಕೆ: ವರ್ಷ ಮುಂಗಾರು ಹಂಗಾಮಿನಲ್ಲಿಯೇ ಕೆರೆಗಳು ಭರ್ತಿಯಾಗಿವೆ. ಹಾಗಾಗಿ ಮೀನು ಮರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆಗಸ್ಟ್‌-ಸೆಪ್ಟಂಬರ್‌ ಅಂತ್ಯದವರೆಗೂ ಮಳೆ ಮುಂದುವರಿದಿದ್ದರಿಂದ ಮೀನು ಬಿತ್ತನೆ ಸಾಧ್ಯವಾಗಿರಲಿಲ್ಲ. ಆ ವೇಳೆ ಬಿತ್ತನೆ ಮಾಡಿದರೂ ಕೆರೆಗಳು ಕೋಡಿ ಹರಿಯುತ್ತಿದ್ದುದ್ದರಿಂದ ನೀರಿನಲ್ಲಿ ಮೀನುಮರಿಗಳು ಕೊಚ್ಚಿ ಹೋಗುತ್ತಿದ್ದವು. ಹಾಗಾಗಿ ಅಕ್ಟೋಬರ್‌ನಿಂದ ಮೀನು ಬಿತ್ತನೆ ಚುರುಕಾಗಿದೆ. ಈ ವರ್ಷ ಹಾಸನ ಜಿಲ್ಲೆಯ ಮೀನು ಕೃಷಿಕರಿಂದ ಸುಮಾ ರು 3 ಕೋಟಿ ಮೀನುಮರಿಗಳ ಬೇಡಿಕೆಯಿದೆ. ಜಿಲ್ಲೆಯಲ್ಲಿ ಕಾಟ್ಲಾ ಮತ್ತು ಕಾಮನ್‌ ಕಾರ್ಪ್‌ ಕೃಷಿ ಹೆಚ್ಚಿನ ಪ್ರಮಾಣದಲ್ಲಿದೆ. ಭದ್ರಾವತಿ ಖಾಸಗಿ ಮೀನುಮರಿ ಪಾಲನಾ ಕೇಂದ್ರಗಳಿಂದಲೂ ಖರೀದಿಸಿ ಬಿತ್ತನೆ ಮಾಡುತ್ತಾರೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಆರ್‌.ವಿವೇಕ್‌ ಅವರು ಹೇಳಿದರು.

15.82 ಲಕ್ಷ ಮೀನು ಮರಿಗಳ ವಿತರಣೆ
ಮೀನುಗಾರಿಕೆ ಇಲಾಖೆ 7 ಪಾಲನಾ ಕೇಂದ್ರಗಳ ಮೂಲಕ ಮೀನು ಕೃಷಿಕರಿಗೆ ಮೀನು ಮರಿಗಳನ್ನು ವಿತರಣೆ ಮಾಡಲಿದೆ. 25 ರಿಂದ 30 ದಿನಗಳ ಮರಿಗಳನ್ನು ಮೀನು ಕೃಷಿಕರಿಗೆ ಇಲಾಖೆಯು ಮಾರಾಟ ಮಾಡಲಿದೆ ಒಂದು ಕಾಟ್ಲಾ ಮೀನುಮರಿಗೆ 1.50 ರೂ., ಕಾಮನ್‌ ಕಾರ್ಪ್‌ ಮೀನು ಮರಿಗೆ 1.20ರೂ. ದರ ನಿಗದಿಪಡಿಸಿದ್ದು, ಮೀನು ಕೃಷಿಕರು ಪಾಲನಾ ಕೇಂದ್ರಗಳಿಂದ ಮರಿಗಳನ್ನು ಕೊಂಡೊಯ್ದು ತಾವು ಗುತ್ತಿಗೆ ಪಡೆದ ಕೆರೆಗಳಲ್ಲಿ ಮೀನು ಸಾಕಾಣಿಗೆ ಮಾಡಬಹುದು. ಈ ವರ್ಷ ಇದುವರೆಗೂ ಇಲಾಖೆಯು ಮೀನು ಕೃಷಿಕರಿಗೆ 15.82 ಲಕ್ಷ ಮೀನು ಮರಿಗಳನ್ನು ವಿತರಿಸಿದ್ದು, ಇಲಾಖಾ ಕೆರೆಗಳಿಗೆ 91ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿದೆ. ಇನ್ನೂ ಒಂದು ಕೋಟಿ ಮೀನುಮರಿಗಳನ್ನು ಇಲಾಖೆಯು ತನ್ನ ಪಾಲನಾ ಕೇಂದ್ರ ಗಳಲ್ಲಿ ದಾಸ್ತಾನಿರಿಸಿಕೊಂಡಿದೆ. ಕೃಷಿಕರಿಗೆ ಬೇಡಿಕೆಯಷ್ಟು ಮೀ ನು ಮರಿಗಳನ್ನು ಪೂರೈಕೆ ಮಾಡುತ್ತಿಲ್ಲ. ಹಾಗಾಗಿ ಮೀನು ಕೃಷಿಕರು ಶಿವಮೊಗ್ಗ ಜಿಲ್ಲೆ ಭದ್ರಾ ಡ್ಯಾಂ ಯೋಜನೆ ವ್ಯಾಪ್ತಿಯಲ್ಲಿ ಖಾಸಗಿಯವರ ಮೀನು ಮರಿಪಾಲನಾ ಕೇಂದ್ರಗಳಿಂದ ಖರೀದಿಸಿ ಮೀನು ಕೃಷಿ ನಡೆಸುತ್ತಿದ್ದಾರೆ.

Advertisement

ಉಚಿತ ಮೀನು ಮರಿ ಬಿತ್ತನೆ
ಈ ವರ್ಷ ಗ್ರಾಪಂ ಕೆರೆಗಳಿಗೆ ಮೀನುಗಾರಿಕೆ ಇಲಾಖೆಯು ಉಚಿತವಾಗಿ ಮೀನು ಮರಿಗಳನ್ನು ಬಿತ್ತನೆ ಮಾಡುವ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಒಂದು ಕೆರೆಗೆ ಗರಿಷ್ಠ 10ಸಾವಿರ ರೂ. ಮರಿಗಳನ್ನು ಇಲಾಖೆಯು ಉಚಿತವಾಗಿ ಬಿತ್ತನೆ ಮಾಡಲಿದ್ದು, ಒಟ್ಟು 545 ಗ್ರಾಪಂ ಕೆರೆಗಳ ಪೈಕಿ 500 ಕೆರೆಗಳಲ್ಲಿ ಮೀನು ಬಿತ್ತನೆ ಮಾಡು ವ ಗುರಿ ಹೊಂದಿದೆ.

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next