ಗಡ್ಡ ಮೀಸೆ ಚಿಗುರಿದೆ. ಆದರೂ, ಎಲ್ಲರಿಗೂ ನಮ್ಮ ಮೇಲೆ ಏನೋ ಒಂಥರಾ ಅಸಡ್ಡೆ. ಪ್ರೀತಿ ಮಾಡ್ತೀವಿ ಅಂದ್ರೆ, ಅದೆಲ್ಲ ಅರೆಬೆಂದ ಏಜ್‌ನ ಕ್ರಶ್ ಅಂತ ತಳ್ಳಿ ಹಾಕ್ತಾರೆ. ನಾನು ಕೂಡ ಪ್ರೌಢ ಅಂತ ನಿರೂಪಿಸ ಹೊರಟಾಗಲೆಲ್ಲಾ ಸೋತು ಹೋಗುತ್ತೇವೆ. ಆದರೆ, ಅಲ್ಲಿ ನಮಗೆ ಸೋಲೇ ಇಲ್ಲ! ಅಲ್ಲಿ ನಮಗೊಂದು ಹಕ್ಕಿದೆ. ನಮ್ಮ ಕರೆಕ್ಟ್ ಹದಿನೆಂಟರ ವಯಸ್ಸಿಗೆ ಅಲ್ಲಿ ಬೆಲೆಯಿದೆ…
ಮೊದಲ ಪ್ರೀತಿ, ಮೊದಲ ಮುತ್ತು, ಮೊದಲ ಶೇವಿಂಗ್‌ನಷ್ಟೇ ಮೊದಲ ಮತದಾನವೆಂದರೆ ಸಾವಿರ ಪುಳಕಗಳ ಮೇಳ. ಬೆರಳ ಮೇಲೆ ತಿಂಗಳುಗಟ್ಟಲೆ ಕೂರುವ ಶಾಯಿಯ ಕಲೆ ಜೊತೆಗೆ ಸರತಿಯಲ್ಲಿ ನಿಂತು ಕೈಯಲ್ಲೊಂದು ಐಡಿ ಹಿಡಿದು ಇಷ್ಟಿಷ್ಟೇ ಭಯದಲ್ಲಿ ವೋಟು ಒತ್ತಿ ಬರುವವರನ್ನು ಕಂಡಾಗೆಲ್ಲ, ನಮ್ಮದು ಯಾವಾಗ ಹದಿನೆಂಟು ತುಂಬುತ್ತದೋ ಎಂದು ತಹತಹಿಸಿದರೇ ಹೆಚ್ಚು.
ಮತದಾನದ ಲಿಸ್ಟಿನಲ್ಲಿ ಹೆಸರು ಬರೆಸುವಾಗಲೇ ಆರಂಭವಾಗುತ್ತದೆ ವೋಟಿನ ಪುಳಕದ ಮೊದಲ ಕಂತು. ಲಿಸ್ಟ್ನಲ್ಲಿ ಹೆಸರು, ಅದರ ಜೊತೆ ಜೊತೆಯಲ್ಲೇ ಸಿಗುವ ಕಪ್ಪು ಬಿಳುಪಿನ ಎಪಿಕ್ ಕಾರ್ಡ್. ಅದರಲ್ಲಿರುವುದು ನಾನೇನಾ ಅನ್ನುವಷ್ಟು ಗುಮಾನಿ ಬರುವ ನಮ್ಮದೇ ಚಿತ್ರ. ಸೆಲ್ಫಿಯಲ್ಲಿ ಕಂಡು ಬಂದ ಚಂದ ಯಾಕೋ ಇಲ್ಲಿ ಕೈಕೊಟ್ಟಿದೆ ಎಂದು ನಮ್ಮ ಮೇಲೆ ನಮಗೇ ಸಣ್ಣ ಅಸಹನೆ.
ಕುತೂಹಲಗಳ ಮೇಲೆ ಕುತೂಹಲ. ಹೀಗೆಯೇ ವೋಟ್ ಮಾಡಬೇಕು ಅಂತ ಕಾಲೇಜಿನಲ್ಲಿ, ಬಸ್‌ಸ್ಟಾಂಡ್‌ಗಳಲ್ಲಿ ನೀಡುವ ಡೆಮೊಗಳು ನಮ್ಮನ್ನು ಇನ್ನಷ್ಟು ಕೆರಳಿಸುತ್ತವೆ. ಯಾರಿಗೆ ವೋಟ್ ಮಾಡಬೇಕು ಎಂಬುದರ ಬಗ್ಗೆ ತೀರದ ಗೊಂದಲ. ಆಮಿಷಗಳು ನಮ್ಮನ್ನು ಕಾಡುವಾಗ ಮೊದಲ ಬಾರಿಗೆ ಆ ಕಡೆಗೊಂದು ಅಸಹ್ಯ ಮೂಡುತ್ತದೆ. ವೋಟು, ವಗೈರೆಯ ಒಳಗಿನ ಬದುಕು ಹೀಗೂ ಇದೆಯಾ ಅನಿಸುತ್ತದೆ. ಅವೆಲ್ಲವನ್ನೂ ಮೀರಿ ನಿಲ್ಲು ಅನ್ನುತ್ತದೆ ಒಳಗಿನ ಹರೆಯ. ಅದಕ್ಕೆ ವ್ಯವಸ್ಥೆ ಬಿಡುತ್ತದಾ? ಗೊತ್ತಿಲ್ಲ. ದ್ವಂದ್ವಗಳಿಗಿಂತ ಕ್ಲಿಯರ್ ಆಗಿ ಇರುವುದರ ಕಡೆ ಮನಸ್ಸು ನೆಡಬೇಕು ಅನಿಸುತ್ತದೆ. ಅದಕ್ಕಾದರೂ ಅವಕಾಶ ಕೊಟ್ಟರೆ ಅಷ್ಟು ಸಾಕು. ಮತದಾನದ ಒಳ್ಳೆ ಆರಂಭ ಮುಂದಿನ ಒಳ್ಳೆಯ ದಿನಗಳಿಗೆ ಸಾಕ್ಷಿಯಾಗಲಿ ಎಂಬುದು ನಮ್ಮ ಅಭಿಲಾಷೆ.
ಜವಾಬ್ದಾರಿಯನ್ನೂ ಮೀರಿದ ಕೂತೂಹಲ ಮೊದಲ ವೋಟಿಗಿದೆ. ಪುಳಕಗಳ ದೊಡ್ಡ ಹಿಡಿಗಂಟಿದೆ. ಅವತ್ತಿನ ದಿನ ಸಿನಿಮಾಗೊ, ಪಾರ್ಟಿಗೊ ಹೋಗುವಂತೆ ತಯಾರಾಗಬೇಕು ಅನಿಸುತ್ತೆ. ಪರ್ಸ್‌ನಲ್ಲಿ ಐಡಿ ಕಾರ್ಡ್ ಬಂದು ಕೂರುತ್ತೆ. ಒಳಗೆ ಏನು ಕೇಳಬಹುದು? ಯಾರೆಲ್ಲ ಇರ್ತಾರೆ? ಅಕ್ಕ ಹೇಳಿದ ಹಾಗೆ ಇರುತ್ತಾ? ಅಣ್ಣ ಹೆದರಿಸಿದ ರೀತಿ ಇರುತ್ತಾ? ವೋಟ್ ಒತ್ತುವಾಗ ಏನಾದರೂ ಆಗಿಬಿಟ್ರೆ? ಹಾಕಿದ ಶಾಹಿಯನ್ನು ಜೋಪಾನವಾಗಿ ಉಳಿಸಿಕೊಳ್ಳಬೇಕು. ಶಾಹಿ ಮೆತ್ತಿದ ಬೆರಳಿನೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು ಅದನ್ನು ಫೇಸುºಕ್‌ನಲ್ಲಿ ಹಾಕಿ ಜಾಸ್ತಿ ಲೈಕ್ ಗಿಟ್ಟಿಸಬೇಕು. ನನ್ನ ಮೊದಲ ಮತದಾನವನ್ನು ಸಂಭ್ರಮಿಸಬೇಕು. ಶಾಹಿ ಮೆತ್ತಿದ ಬೆರಳನ್ನು ಕಿರಿಯರಿಗೆ ತೋರಿಸಿ ಅವರ ಕಣ್ಣುಗಳಲ್ಲಿ ಬೆರಗು ಮೂಡಿಸಬೇಕು. ಇದನ್ನೊಂದು ಸಿಹಿ ಮೆಮೊರಿಯಾಗಿ ಉಳಿಸಿಕೊಳ್ಳಬೇಕು. ನಾನು ದೊಡ್ಡವನಾಗಿಬಿಟ್ಟೆ ಅಂತ ಅಪ್ಪ- ಅಮ್ಮನಿಗೆ ಹೇಳಬೇಕು, ಇನ್ನಾದರೂ ಚುನಾವಣೆಯೆಂದರೆ ದುಡ್ಡಿನಿಂದ ಆಗುವುದಲ್ಲ, ಜಾತಿಯಿಂದ ಗೆಲ್ಲುವುದಲ್ಲ ಅದು ವ್ಯಕ್ತಿತ್ವದಿಂದ ಗೆಲ್ಲುವಂಥದ್ದು ಎಂಬುದನ್ನು ನವ ಮತದಾರನಾಗಿ ನಾನು ಸಾರಿ ಹೇಳಬೇಕು… ಎಂಬಿತ್ಯಾದಿ ಕನವರಿಕೆಗಳ ಒಟ್ಟು ಹೂರಣವೇ ಮೊದಲ ಮತದಾನ.
ಸದಾಶಿವ್ ಸೊರಟೂರು