ಕೋಲ್ಕತ : ಇಲ್ಲಿನ ಈಡನ್ ಗಾರ್ಡನ್ಸ್ ಅಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಲಂಕೆ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಭಾರತಕ್ಕೆ ತನ್ನ ಮೊದಲ ಇನ್ನಿಂಗ್ಸ್ ಆಟವನ್ನು 172 ರನ್ ವರೆಗೂ ಬೆಳೆಸಲು ಸಾಧ್ಯವಾಯಿತು.
ಮಳೆಯಿಂದ ಪೀಡಿತವಾಗಿರುವ ಈ ಟೆಸ್ಟ್ ಪಂದ್ಯದಲ್ಲಿ ಮಳೆ ಕಾಟ ಕಡಿಮೆಯಾಗುತ್ತಾ 3ನೇ ದಿನದದು ಪಿಚ್ ತನ್ನ ಸ್ಥಿರತೆಯನ್ನು ತೋರುವ ಲಕ್ಷಣ ತೋರಿದ ಸ್ಥಿತಿಯಲ್ಲಿ ಲಂಕಾ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿ ನಾಲ್ಕ ವಿಕೆಟ್ ನಷ್ಟಕ್ಕೆ 165 ರನ್ (45.4 ಓವರ್‌ಗಳ ಆಟ) ತೆಗೆಯುವಲ್ಲಿ ಸಫಲವಾಯಿತು.
ಈಗ ಲಂಕಾ ಭಾರತದ ಮೊದಲ ಇನ್ನಿಂಗ್‌ನ 172 ರನ್ ಮೊತ್ತದಿಂದ ಕೇವಲ 7 ರನ್ ಹಿಂದಿದ್ದು ಅದರ ಕೈಯಲ್ಲಿ ಇನ್ನೂ ಆರು ವಿಕೆಟ್‌ಗಳು ಉಳಿದಿವೆ. ಹಾಗಿರುವಾಗ ಅದಕ್ಕೆ ಉತ್ತಮ ಹಾಗೂ ನಿರ್ಣಾಯಕ ಲೀಡ್ ಪ್ರಾಪ್ತವಾಗುವ ಸಾಧ್ಯತೆ ಇರುವುದು ಈಗ ನಿಚ್ಚಳವಾಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲ ಪ್ರತಿಕೂಲತೆಗಳ ನಡುವೆಯೂ ಸ್ಥಿರವಾಗಿ ನಿಂತು ಆಡಿದ್ದು ಚೇತೇಶ್ವರ ಪೂಜಾರ 52ರನ್‌ಗಳ ಉತ್ತಮ ಕಾಣಿಕೆ ನೀಡಿದರು. ಇವರಿಗೆ ಸಾಥ್ ಕೊಟ್ಟ ಅಜಿಂಕ್ಯ ರಹಾಣೆ 21, ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ 29, ರವಿಚಂದ್ರನ್ ಅಶ್ವಿನ್ 29, ರವೀಂದ್ರ ಜಡೇಜ 22, ಭುವನೇಶ್ವರ ಕುಮಾರ್ 13, ಮೊಹಮ್ಮದ್ ಶಮೀ 24 ರನ್ ಬಾರಿಸಿ ತಮ್ಮ ಕಾಣಿಕೆ ನೀಡಿದರು.
ಲಂಕೆಯ ಮೊದಲ ಇನ್ನಿಂಗ್ಸ್‌ನಲ್ಲಿ ಏಂಜಲೋ ಮ್ಯಾಥ್ಯೂಸ್ 52 ಮತ್ತು ಲಾಹಿರು ತಿರಿಮನ್ನೆ 51 ರನ್ ಬಾರಿಸಿ ಔಟಾದರು.
ಬೆಳಕಿನ ಕೊರತೆಯಿಂದ ಬೇಗನೆ ಆಟವನ್ನು ನಿಲ್ಲಿಸಲಾದಾಗ ದಿನೇಶ್ ಚಾಂಡಿಮಾಲ್ (ಕಪ್ತಾನ) 13 ರನ್ ಹಾಗೂ ನಿರೋಶನ್ ಡಿಕ್‌ವೆಲ 14 ರನ್‌ಗಳೊಂದಿಗೆ ಕ್ರೀಸಿನಲ್ಲಿ ಉಳಿದಿದ್ದರು. ಆಗ ಲಂಕೆ 4 ವಿಕೆಟಿಗೆ 165ರ ಉತ್ತಮ ಸ್ಥಿತಿಯಲ್ಲಿ ಇತ್ತು. ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ತಲಾ ಎರಡು ವಿಕೆಟ್ ಕಿತ್ತರು.