ಬೆಂಗಳೂರು: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರಿಗೆ ಮೊದಲ “ಟಾಸ್ಕ್’ ಎದುರಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮುಂದಿನ ಮೂರೂವರೆ ವರ್ಷ ಬಿಜೆಪಿ ಸರ್ಕಾರವನ್ನು ಭದ್ರಗೊಳಿಸಬೇಕಾದ ಬಹುದೊಡ್ಡ ಸವಾಲು ಈಗ ಬಿಜೆಪಿ ರಾಜ್ಯಾಧ್ಯಕ್ಷರ ಹೆಗಲ ಮೇಲಿದೆ.
ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯೂ ಆಗಿದೆ. 17 ಶಾಸಕರು ದಿಢೀರ್ ರಾಜೀನಾಮೆ ನೀಡಿದ್ದರ ಪರಿಣಾಮ ಬಿಜೆಪಿ ಸುಲಭವಾಗಿ ಅಧಿಕಾರ ಹಿಡಿದೆ. ಸರ್ಕಾರ ಉಳಿಸಿಕೊಳ್ಳಬೇಕಾದರೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು.
ಅಸಮಾಧಾನ ಸರಿಪಡಿಸುತ್ತಾರಾ?: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತಿದೆ. 15 ಕ್ಷೇತ್ರದಲ್ಲೂ ಕನಿಷ್ಠ 12ರಿಂದ 14 ಕ್ಷೇತ್ರವನ್ನು ಗೆಲ್ಲಿಸಬೇಕಾದ ಮಹತ್ತರ ಜವಾಬ್ದಾರಿ ಇವರ ಮೇಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನ ಭುಗಿಲೆದ್ದಿದೆ. ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮತ್ತು ಅನರ್ಹಗೊಂಡಿರುವ ಶಾಸಕರ ಬೆಂಬಲಿಗರ ನಡುವಿನ ಅಸಮಾಧಾನ ಸರಿಪಡಿಸಬೇಕಾದ ಸವಾಲು ಹೊಸ ಅಧ್ಯಕ್ಷರ ಮುಂದಿದೆ.
ರಾಜ್ಯ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂ ರಪ್ಪ ಅವರು ಅಧಿಕಾರ ಸ್ವೀಕರಿಸಿ, ಹೊಸ ಮಂತ್ರಿ ಮಂಡಲ ರಚನೆಯಾದ ದಿನವೇ ರಾಜ್ಯ ಬಿಜೆಪಿ ಅಧ್ಯಕ್ಷ ರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಿಸಿ, ರಾಷ್ಟ್ರೀಯ ಬಿಜೆಪಿ ಆದೇಶ ಹೊರಡಿಸಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಅನರ್ಹಗೊಂಡಿರುವ ಶಾಸಕರಿಗೆ ಯಾವ ಭರವಸೆ ನೀಡಿದ್ದಾರೆ ಎಂಬುದು ಸದ್ಯ ರಾಜ್ಯಾಧ್ಯಕ್ಷರಿಗೂ ತಿಳಿದಿರಲು ಸಾಧ್ಯವಿಲ್ಲ. ಆದರೂ, ಪಕ್ಷ ಸಂಘಟನೆ ಮತ್ತು ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸಬೇಕಾದ ಬಹುದೊಡ್ಡ ಟಾಸ್ಕ್ ಹೊಸ ಅಧ್ಯಕ್ಷರ ಮೇಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸಂಘಟನಾ ಶಕ್ತಿ ಮತ್ತು ಅವರ ಸೂಚನೆಯನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವೇಳೆ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿರುವ ಅಭ್ಯರ್ಥಿಯನ್ನು ನೇರವಾಗಿ ವಿರೋಧಿಸಲು ಸಾಧ್ಯವಿಲ್ಲ.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಗೆದ್ದರೆ ಮಾತ್ರ ಬಿಜೆಪಿ ಸರ್ಕಾರ ಮುಂದಿನ ಮೂರೂವರೆ ವರ್ಷ ಸುಭದ್ರವಾಗಿರಲು ಸಾಧ್ಯ. ಬಿಜೆಪಿ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಸೋಲುಕಂಡರೆ, ಸರ್ಕಾರ ಪತನವಾಗುವ ಜತೆಗೆ ಹೊಸ ಅಧ್ಯಕ್ಷರಿಗೆ ಹಿನ್ನೆಡೆಯೂ ಆಗಬಹುದು. ಹೀಗಾಗಿ ಅಧ್ಯಕ್ಷರು ಯಾವ ರೀತಿಯ ಕಾರ್ಯತಂತ್ರ ಮಾಡಲಿದ್ದಾರೆ ಎಂಬುದು ಅತಿಮುಖ್ಯವಾಗಿದೆ.
ಬಿಎಸ್‌ವೈಗೂ ಇದೆ ಸವಾಲು: ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದೆಯೂ ಈಗ ಬಹುದೊಡ್ಡ ಸವಾಲಿದೆ. ಬಿಜೆಪಿಗೆ ಜನ ಬೆಂಬಲವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದಾರೆ. ಲೋಕಸಭೆಯಲ್ಲಿ ನಿರೀಕ್ಷೆಗೂ ಮೀರಿದ ಫಲ ಸಿಕ್ಕಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಬಿಜೆಪಿಗೆ ಜನ ಬೆಂಬಲ ಇದೆ ಎಂಬುದನ್ನು ಪದೇ ಪದೇ ಹೇಳಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಉಪಚುನಾವಣೆ ದೊಡ್ಡ ಸವಾಲಾಗಿದೆ. ಅಭ್ಯರ್ಥಿ ಆಯ್ಕೆ ಮಾತ್ರವಲ್ಲ, ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆಯೂ ಇವರ ಮುಂದಿದೆ. ರಾಜ್ಯದ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿ ನಡುವೆಯೇ ಜನ ಬೆಂಬಲ ಸಾಬೀತುಪಡಿಸಬೇಕಿದೆ.
* ರಾಜು ಖಾರ್ವಿ ಕೊಡೇರಿ