ಬೆಂಗಳೂರು: ಸಂಕ್ರಾಂತಿ ಬಳಿಕ ಪ್ರಥಮ ಪಿಯುಸಿ ಮತ್ತು ಇತರ ತರಗತಿಗಳು ಶುರುವಾಗುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಶುರುವಾಗಿವೆ. ಅದಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕ, ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜತೆಗೆ ಮೊದಲ ವರ್ಷದ ಪಿಯುಸಿ ತರಗತಿಗಳನ್ನು ಶುರು ಮಾಡುವಂತೆ ಪಾಲಕರು, ವಿದ್ಯಾರ್ಥಿಗಳಿಂದ ಒತ್ತಡವೂ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜ.1ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳ ಜತೆಗೆ 6ರಿಂದ 9ನೇ ತರಗತಿ ವಿದ್ಯಾಗಮ ತರಗತಿಗಳು ಆರಂಭವಾಗಿದೆ.
ಹೀಗಾಗಿ, ಸಂಕ್ರಾಂತಿಯ ನಂತರ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವ ಸಾಧ್ಯತೆಯಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ನಡೆಯುತ್ತದೆ. ಈ ವರ್ಷ ಕೊರೊನಾದಿಂದ ಶೈಕ್ಷಣಿಕ ವರ್ಷದ ವಿಸ್ತರಣೆ ಆಗಿರುವುದರಿಂದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಆದಷ್ಟು ಬೇಗ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
6ರಿಂದ 9ನೇ ತರಗತಿಗೆ ನಡೆಯುತ್ತಿರುವ ವಿದ್ಯಾಗಮ ತರಗತಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅಲ್ಲದೆ, ಶಾಲಾವರಣದಲ್ಲಿ ಎಲ್ಲ ಸುರಕ್ಷಿತ ಕ್ರಮ ಕೂಡ ನಡೆಯಲಿದೆ. ವಿದ್ಯಾಗಮವನ್ನು 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳವರೆಗೂ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಹೇಳಾಗುತ್ತಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ರೆಡಿಯೋ ಮೂಲಕ ನಲಿಯುತ್ತಾ ಕಲಿಯೋಣ ರೆಡಿಯೋ ಪಾಠ ಆರಂಭವಾಗಿದೆ. ಏಪ್ರಿಲ್ ತನಕವೂ ನಡೆಯಲಿದೆ. ಈ ಮಧ್ಯೆ ಜಿಯೋ ಟಿವಿ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಕ್ಕೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಇಲಾಖೆ ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.