ಬೆಂಗಳೂರು: ನಗರದ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಪುರುಷರಿಗಿಂತ ಹೆಚ್ಚು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ, ಅಭ್ಯರ್ಥಿಗಳು ಮಹಿಳಾ ಮಣಿಗಳನ್ನು ನಿರ್ಲಕ್ಷಿಸುವಂತಿಲ್ಲ.
ಗ್ರಾಮಾಂತರದ ಮೂರು ಮತ್ತು ಚಿಕ್ಕಬಳ್ಳಾಪುರದ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಪುರುಷರಿಗಿಂತ ಶೇಕಡ ಒಂದರಿಂದ ಒಂದೂವರೆಯಷ್ಟು ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ.
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 90.87 ಲಕ್ಷ ಮತದಾರರಿದ್ದಾರೆ. ಈ ಪೈಕಿ 24,83,653 ಪುರುಷರು (ಶೇ.52.43) ಮತ್ತು 23,06,791 ಮಹಿಳೆಯರು (ಶೇ.53.02) ಮತ ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಪುರುಷರೇ ಹೆಚ್ಚು ಹಕ್ಕು ಚಲಾಯಿಸಿದ್ದರು.
ಇನ್ನು ಮತದಾನದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕೇಂದ್ರ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕೊನೆಯ ಸ್ಥಾನದಲ್ಲಿದೆ. ಕೇಂದ್ರದಲ್ಲಿ 22.04 ಲಕ್ಷ ಮತದಾರರ ಪೈಕಿ 11.91 ಲಕ್ಷ ಜನ ಮತ ಚಲಾಯಿಸಿದ್ದಾರೆ. ಇದು ಶೇ.54.06ರಷ್ಟಾಗುತ್ತದೆ.
ಅದೇ ರೀತಿ, ದಕ್ಷಿಣದಲ್ಲಿ 22.15 ಲಕ್ಷ ಮತದಾರರಿದ್ದು, 11.77 ಲಕ್ಷ ಜನ ಹಾಗೂ ಉತ್ತರದಲ್ಲಿ 28.48ರಲ್ಲಿ 14.65 ಜನ ಮತದಾನ ಮಾಡಿದ್ದಾರೆ. ಇದು ಕ್ರಮವಾಗಿ ಶೇ. 53.14 ಮತ್ತು ಶೇ. 51.46ರಷ್ಟು ಆಗುತ್ತದೆ.