ವಾಷಿಂಗ್ಟನ್: ಅಮೆರಿಕದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದ, 161 ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಲು ತೀರ್ಮಾನಿಸಿದೆ.
ಇವರೆಲ್ಲ ಈ ವಾರಾಂತ್ಯದಲ್ಲಿ ಚಾರ್ಟರ್ಡ್ ವಿಮಾನದಲ್ಲಿ ಪಂಜಾಬ್‌ನ ಅಮೃತಸರವನ್ನು ತಲುಪಲಿದ್ದಾರೆ.
ಯಾರಿವರು?ಇವರು ಮೆಕ್ಸಿಕೊದ ದಕ್ಷಿಣದ ಗಡಿಯಿಂದ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಪಡೆ ಇವರನ್ನು ಬಂಧಿಸಿ, ಜೈಲಿನಲ್ಲಿಟ್ಟಿತ್ತು.
ಎಲ್ಲಿಯವರು? ಇವರಲ್ಲಿ ಗರಿಷ್ಠ 76 ಮಂದಿ ಹರ್ಯಾಣಕ್ಕೆ ಸೇರಿದವರು. ಉಳಿದಂತೆ ಪಂಜಾಬ್ 56, ಗುಜರಾತ್ 12, ಉತ್ತರ ಪ್ರದೇಶ 5, ಮಹಾರಾಷ್ಟ್ರ 4, ಕೇರಳ, ತೆಲಂಗಾಣ ಹಾಗೂ ತಮಿಳುನಾಡು ತಲಾ 2, ಆಂಧ್ರಪ್ರದೇಶ, ಗೋವಾಕ್ಕೆ ತಲಾ ಒಬ್ಬರು ಸೇರಿದ್ದಾರೆ.
161 ಭಾರತೀಯ ಪ್ರಜೆಗಳಲ್ಲಿ ಮೂವರು ಮಹಿಳೆಯರಿದ್ದಾರೆ. ಅಮೆರಿಕ 2018ರಲ್ಲಿ 611, 2019ರಲ್ಲಿ 1616 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿತ್ತು.
ಪ್ರಸ್ತುತ ಅಮೆರಿಕದ 95 ಜೈಲುಗಳಲ್ಲಿ 1739 ಭಾರತೀಯ ವಲಸಿಗರು ಇದ್ದು, ಈಗ 161 ಮಂದಿಗೆ ಮಾತ್ರವೇ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ಅಮೆರಿಕದಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.