ಮುಂಬಯಿ: ‘ಟೈಗರ್ 3’ ಚಿತ್ರ ಪ್ರದರ್ಶನದ ವೇಳೆ ಹಲವೆಡೆ ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿರುವ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಕಳವಳ ವ್ಯಕ್ತ ಪಡಿಸಿದ್ದು, ಇತರರನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಮನವಿ ಮಾಡಿದ್ದಾರೆ.
‘ಟೈಗರ್ 3’ ಚಿತ್ರ ಪ್ರದರ್ಶನದ ಸಮಯದಲ್ಲಿ ಥಿಯೇಟರ್‌ಗಳಲ್ಲಿ ಪಟಾಕಿಗಳನ್ನು ಸಿಡಿಸಿರುವ ಬಗ್ಗೆ ನಾನು ಕೇಳುತ್ತಿದ್ದೇನೆ. ಇದು ಅಪಾಯಕಾರಿ. ನಮ್ಮನ್ನು ಮತ್ತು ಇತರರನ್ನು ಅಪಾಯಕ್ಕೆ ಸಿಲುಕಿಸದೆ ಚಿತ್ರವನ್ನು ಆನಂದಿಸೋಣ. ಸುರಕ್ಷಿತವಾಗಿರಿ. ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಧಾನ ಭೂಮಿಕೆಯ ‘ಟೈಗರ್ 3’ ಚಿತ್ರ ನ 12 ರಂದು ಬಹು ಭಾಷೆಗಳಲ್ಲಿ ತೆರೆ ಕಂಡಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ನಡುವೆ ನಾಸಿಕ್‌ನ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ಒಳಗೇ ಪಟಾಕಿ ಸಿಡಿಸಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಚವಾನಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರೇಕ್ಷಕರು ಜೀವಭಯದಿಂದ ಥಿಯೇಟರ್ ಒಳಗಿಂದ ಹೊರ ಓಡಿ ಬಂದ ಪ್ರಸಂಗವೂ ನಡೆದಿದೆ.