Advertisement

ಶಾಲಾ ಮಕ್ಕಳಿದ್ದ ಕಟ್ಟಡಕ್ಕೆ ಬೆಂಕಿ

06:44 AM Jan 29, 2019 | Team Udayavani |

ಬೆಂಗಳೂರು: ವಿದ್ಯುತ್‌ ಅವಘಡದಿಂದ ನೂರಾರು ಶಾಲಾ ಮಕ್ಕಳಿದ್ದ ಎರಡಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಆರ್‌.ಟಿ.ನಗರ ಬಳಿಯ ಗಂಗಾನಗರದ ಐದನೇ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

Advertisement

ಎರಡು ಅಂತಸ್ತಿನ ಈ ಕಟ್ಟಡದ ನೆಲಮಹಡಿಯಲ್ಲಿ ಆರು ವಾಣಿಜ್ಯ ಮಳಿಗೆಗಳು, ಉಳಿದಂತೆ ಒಂದು ಮತ್ತು ಎರಡನೇ ಅಂತಸ್ತಿನಲ್ಲಿ ರಾಧಾಕೃಷ್ಣ ಆಂಗ್ಲ ಶಾಲೆ ಮತ್ತು ಕಾಲೇಜು ಇದೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ವಾಣಿಜ್ಯ ಕಟ್ಟಡದಲ್ಲಿ ಶಾಲಾ-ಕಾಲೇಜು ನಡೆಸಲು ಅನುಮತಿ ಸಿಕ್ಕಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ನೆಲಮಹಡಿಯಲ್ಲಿರುವ ಮುನಾವರ್‌ ಪಾಷ ಎಂಬುವವರಿಗೆ ಸೇರಿರುವ ಸಹಾರಾ ಬೆಡ್ಡಿಂಗ್‌ ಹೌಸ್‌ನಲ್ಲಿರುವ ಸ್ಟಿಚಿಂಗ್‌ ಯಂತ್ರದಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಆತಂಕಗೊಂಡ ಮಳಿಗೆ ಮಾಲೀಕರು ಕೂಡಲೇ ಕಾರ್ಮಿಕರ ಜತೆ ಹೊರ ಬಂದಿದ್ದಾರೆ. ದಟ್ಟವಾದ ಹೊಗೆ ಎಲ್ಲಡೆ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲೇ ಇಡೀ ಮಳಿಗೆ ಆವರಿಸಿದೆ.

ಬಳಿಕ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ. ನಂತರ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿ, ಶಾಲಾ ಮತ್ತು ಕಾಲೇಜಿನಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಟ್ಟಡದಿಂದ ಹೊರ ಕಳುಹಿಸಲಾಗಿದೆ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದರು.

ವಿಷಯ ತಿಳಿಯುತ್ತಿದ್ದಂತೆ ಬಾಣಸವಾಡಿ, ಹೆಬ್ಟಾಳ ಹಾಗೂ ಇತರೆಡೆ ಇರುವ ಅಗ್ನಿಶಾಮಕ ದಳ ಕಚೇರಿಗಳಿಂದ ಸುಮಾರು 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಬೆಂಕಿ ನಂದಿಸುವ ಇತರೆ ಸಲಕರಣೆಗಳ ಜತೆ 60ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.

Advertisement

ಬಳಿಕ ಪಕ್ಕದ ಎಲ್ಲ ವಾಣಿಜ್ಯ ಮಳಿಗೆಗಳನ್ನು ಪರಿಶೀಲಿಸಿ, ಸುತ್ತುವರಿದಿದ್ದ ಹೊಗೆಯನ್ನು ಯಂತ್ರದ ಮೂಲಕ ನಿಯಂತ್ರಿಸಲಾಯಿತು ಎಂದು ಅಧಿಕಾರಿ ತಿಳಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ವಿಭಾಗದ ನಿರ್ದೇಶಕ ಎಚ್‌.ಎಸ್‌.ವರದರಾಜನ್‌, ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಅವಘಡ ಸಂಭವಿಸಿದೆ.

ಕಟ್ಟಡದಲ್ಲಿ ಶಾಲೆ ಇರುವ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಮಕ್ಕಳನ್ನು ಕಟ್ಟಡದಿಂದ ಹೊರಗಡೆ ಕಳುಹಿಸಲಾಯಿತು. ಹೀಗಾಗಿ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಳಿಗೆಯಲ್ಲಿ ಹಾಸಿಗೆ ತಯಾರಿಕೆಗೆ ಬೇಕಾದ ಹತ್ತಿ ಹಾಗೂ ಇತರೆ ವಸ್ತುಗಳು ಶೇಖರಣೆ ಮಾಡಿದರಿಂದ ಸುಲಭವಾಗಿ ಬೆಂಕಿ ಹೊತ್ತಿ ಕೊಂಡಿದೆ.

ಬೆಂಕಿಯ ಕಿನ್ನಾಲಿಗೆ ಹಾಗೂ ಹೊಗೆ ಬೇರೆಡೆ ಹರಡದಂತೆ ಕ್ರಮಕೈಗೊಳ್ಳಲಾಗಿದೆ ಎಂದರು. ಇದುವರೆಗೂ ಕಟ್ಟಡ ಮಾಲೀಕ ಯಾರು ಎಂಬುದು ತಿಳಿದು ಬಂದಿಲ್ಲ. ಒಂದೆರಡು ದಿನಗಳಲ್ಲಿ ಕಟ್ಟಡ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸಿ ನೋಟಿಸ್‌ ಜಾರಿ ಮಾಡಲಾಗುವುದು ಎಂದು ವರದರಾಜನ್‌ ಹೇಳಿದರು.

ಪ್ರಕರಣ ದಾಖಲು: ಘಟನೆ ನಡೆದ ಕಟ್ಟಡ ಗುಂಡಪ್ಪ ಎಂಬುವರಿಗೆ ಸೇರಿದ್ದು ಎಂಬುದು ತಿಳಿದು ಬಂದಿದೆ. ಕಟ್ಟಡದಲ್ಲಿ ಶಾಲಾ, ಕಾಲೇಜು ನಡೆಸಲು ಅಧಿಕೃತವಾಗಿ ಪರವಾನಗಿ ಇದೆ. ಹೀಗಾಗಿ ಆಕಸ್ಮಿಕ ಅಗ್ನಿ ಅವಘಡ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌.ಟಿ.ನಗರ ಪೊಲೀಸರು ಹೇಳಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಸಹಾಯಕ ಇಂಜಿನಿಯರ್‌, ಕಟ್ಟಡವನ್ನು ತುಂಬಾ ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರಂತೆ ಕಟ್ಟಡ ಮಾಲೀಕರಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಲಾಗುವುದು. ಜತೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಹದಿನೈದು ಮೀಟರ್‌ಗೂ ಎತ್ತರದ ಕಟ್ಟಡ ನಿರ್ಮಾಣ ಮಾಡಲು ಮಾತ್ರ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅನುಮತಿ ಅಗತ್ಯವಿದೆ. ಇಲ್ಲವಾದಲ್ಲಿ ಬಿಬಿಎಂಪಿಯಿಂದ ಪರವಾನಗಿ ಪಡೆದರೆ ಸಾಕು. ಘಟನೆ ನಡೆದ ಕಟ್ಟಡದ ಎತ್ತರ 15 ಮೀಟರ್‌ಗೂ ಕಡಿಮೆ ಇದೆ.
-ಎಂ.ಎನ್‌.ರೆಡ್ಡಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪೊಲೀಸ್‌ ಮಹಾನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next