ಇಂಫಾಲ/ಹೊಸದಿಲ್ಲಿ: ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮೇ 29ರಿಂದ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರು ವಂತೆಯೇ ಅಲ್ಲಿ ಪರಿಸ್ಥಿತಿ ನಿಯಂತ್ರಣ ದಲ್ಲಿದ್ದರೂ ಬಿಗುವಿನಿಂದ ಕೂಡಿದೆ. ಜೂ.1ರ ವರೆಗೆ ಅಮಿತ್ ಶಾ ಅವರು ಇಂಫಾಲದಲ್ಲಿ ಇರಲಿದ್ದು, ರಾಜ್ಯ ಸರಕಾರ ಮತ್ತು ಮಿಲಿಟರಿ ಅಧಿಕಾರಿಗಳು, ಮೈತೇಯಿ, ಕುಕಿ ಸಮುದಾಯಗಳ ಮುಖಂಡರ ಜತೆಗೆ ಸಂಧಾನ ನಡೆಸುವ ನಿಟ್ಟನಲ್ಲಿ ಸಭೆಗಳನ್ನೂ ನಡೆಸಲಿದ್ದಾರೆ. ಇದೇ ವೇಳೆ ರಾಜ್ಯದ ಅಲ್ಲಲ್ಲಿ ಗಲಭೆಗಳು ನಡೆದಿದ್ದರಿಂದ ಮತ್ತೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ರವಿವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಅಸುನೀಗಿದವರ ಸಂಖ್ಯೆ ಸೋಮವಾರದ ವೇಳೆಗೆ ಐದಕ್ಕೆ ಏರಿಕೆಯಾ ಗಿದೆ. ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಮೂವರು ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆ. ಇದೇ ವೇಳೆ ಕೇಂದ್ರ ಗೃಹ ಸಚಿವರ ಭೇಟಿಯ ಮುನ್ನವೇ ಭೂಸೇನೆ ಮತ್ತು ಇತರ ಕೇಂದ್ರ ಅರೆಸೇನಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 25 ಮಂದಿ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಶೇಷವಾಗಿ ಇಂಫಾಲ ಕಣಿವೆ ಪ್ರದೇಶದಿಂ ದಲೇ ಹೆಚ್ಚಿನವರನ್ನು ಮಾರಕಾಸ್ತ್ರಗಳ ಸಹಿತ ಪತ್ತೆ ಮಾಡಲಾಗಿದೆ ಎಂದು ರಕ್ಷಣ ಪಡೆ ಯ ವಕ್ತಾರರು ಇಂಫಾಲದಲ್ಲಿ ತಿಳಿಸಿದ್ದಾರೆ.
ಬಂಧಿತರಿಂದ 5 ಡಬಲ್ ಬ್ಯಾರೆಲ್ ರೈಫಲ್‌ಗಳು, ಮೂರು ಸಿಂಗಲ್ ಬ್ಯಾರೆಲ್ ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.