ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಭಾರತೀಯ ಸೇನೆಯು ಉಗ್ರರ ಉಳ ನುಸುಳುವಿಕೆಯನ್ನು ತಡೆದಿದ್ದು, ಈ ವೇಳೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಲೈನ್ ಆಫ್ ಕಂಟ್ರೋಲ್ ನ ಕೆರಾನ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ.
ಒಳನುಸುಳುವಿಕೆಯನ್ನು ತಡೆಯುವ ಕಾರ್ಯಾಚರಣೆ ಮುಂದುವರಿದಿದೆ.
ಇದಕ್ಕೂ ಮುನ್ನ ಕೇಂದ್ರಾಡಳಿತ ಪ್ರದೇಶದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರ ಜತೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಯೋಧರು ಗಾಯಗೊಂಡಿದ್ದರು.
ಜದ್ದನ್ ಬಟಾ ಗ್ರಾಮದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಶೋಧ ಕಾರ್ಯಾಚರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಾಡಿದ್ದ ತಾತ್ಕಾಲಿಕ ಭದ್ರತಾ ಶಿಬಿರದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ತೀವ್ರವಾಗಿ ಗಾಯಗೊಂಡ ಸೈನಿಕರಲ್ಲಿ ಒಬ್ಬರನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಸುಧಾರಿತ ಲಘು ಹೆಲಿಕಾಪ್ಟರ್ (ALH) ನಲ್ಲಿ ಉಧಮ್ ಪುರದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ದೋಡಾದಲ್ಲಿ ಉಗ್ರಗಾಮಿ ಚಟುವಟಿಕೆಗಳು ಸಕ್ರಿಯವಾಗಿದೆ. ಜೂನ್ 12ರಂದು ಚತ್ತೆರ್ಗಲಾ ಪಾಸ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಆರು ಮಂದಿ ಯೋಧರು ಗಾಯಗೊಂಡಿದ್ದರು.