Advertisement

ಬಂಡೀಪುರ, ನಾಗರಹೊಳೆಗೆ ಕಾಡ್ಗಿಚ್ಚು ಬೇಸಿಗೆ “ಅತಿಥಿ’

10:51 AM Feb 28, 2017 | Team Udayavani |

ಮೈಸೂರು: ಪ್ರತಿ ಬೇಸಿಗೆಯೂ ಅಮೂಲ್ಯ ಸಸ್ಯ ಮತ್ತು ವನ್ಯಜೀವಿ ಸಂಪತ್ತಿಗೆ ಆತಂಕದ ಕಾಲ. ರಾಜ್ಯದಲ್ಲೇ ಪ್ರಮುಖ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಇಟ್ಟ ಬೆಂಕಿಯಿಂದ ಸಾವಿರಾರು ಎಕರೆ ವನ್ಯಸಂಪತ್ತು ನಾಶವಾಗಿದೆ.

Advertisement

2012ರಲ್ಲಿ ಬಂಡೀಪುರ ಹುಲಿಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿದ್ದ ಬೆಂಕಿಯಿಂದ 998 ಹೆಕ್ಟೇರ್‌ ಕಾಡು ನಾಶವಾಗಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 1961 ಹೆಕ್ಟೇರ್‌ ಕಾಡು ನಾಶವಾಗಿತ್ತು. 5 ವರ್ಷಗಳ ಹಿಂದೆ ಉಂಟಾದ ಬೆಂಕಿಯ ಗಾಯ ಆರುವ ಮುನ್ನವೇ ಈ ವರ್ಷ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವಿವಿಧ ಅರಣ್ಯವಲಯಗಳಲ್ಲಿ ಕಾಣಿಸಿಕೊಂಡ ಬೆಂಕಿ ಸಾವಿರಾರು ಎಕರೆ ಅರಣ್ಯ ಸಂಪತ್ತನ್ನು ಆಹುತಿ ತೆಗೆದುಕೊಂಡಿದೆ.

ಲಂಟಾನ- ಯುಪಟೋರಿಯಂ ನಂತಹ ಕಳೆಗಳೇ ಆವರಿಸಿಕೊಂಡಿರುವ ಅರಣ್ಯದಲ್ಲಿ ಅಲ್ಲಲ್ಲಿ ಬಿದ್ದ ಬೆಂಕಿ ನೆಲಮಟ್ಟದ ಬೆಂಕಿಯಾಗಿ ಎಲ್ಲವನ್ನೂ ನಾಶಗೊಳಿಸಿದ್ದು, ಮಾತ್ರವಲ್ಲದೆ ಮರದಿಂದ ಮರಕ್ಕೆ ಬೆಂಕಿ ವ್ಯಾಪಿಸುತ್ತಾ ಅರಣ್ಯ ಇಲಾಖೆಯ ಊಹೆಗೆ ನಿಲುಕದಷ್ಟು ಹಾನಿ ಮಾಡಿದೆ.

ಸಿದ್ಧ ಉತ್ತರ ಸದಾ ಸಿದ್ಧ: ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾದಾಗ ಫೆಬ್ರವರಿಯಿಂದ ಮೇ ಅವಧಿಯಲ್ಲಿ ಅರಣ್ಯಗಳು ಸಂಪೂರ್ಣವಾಗಿ ಒಣಗಿ, ತರಗೆಲೆಗಳೆಲ್ಲ ಉದುರಿ ನೆಲಹಾಸಿನಂತೆ ಮುಚ್ಚಿಕೊಂಡಿರುವುದರಿಂದ ಬೆಂಕಿ ಹರಡುವುದು ಸುಲಭ. ಹೀಗಾಗಿ ಅರಣ್ಯ ಇಲಾಖೆ ಪ್ರತಿ ಬೇಸಿಗೆಗೂ ಮುನ್ನ ಅರಣ್ಯಗಳಲ್ಲಿ ಬೆಂಕಿ ಲೇನುಗಳು ಮತ್ತು ಡಿಲೇನುಗಳ ನಿರ್ವಹಣೆ, ಬೆಂಕಿ ರಕ್ಷಣಾ ಕೇಂದ್ರಗಳು ಮತ್ತು ಬೆಂಕಿ ಗುರುತಿಸುವ
ಕೇಂದ್ರಗಳ ಸ್ಥಾಪನೆ, ಬೆಂಕಿ ರಕ್ಷಣಾ ಕಾರ್ಯಕ್ಕೆ ವಾಹನಗಳ ಬಳಕೆ, ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅರಣ್ಯದಂಚಿನ ಗ್ರಾಮಸ್ಥರಿಗೆ ಬೆಂಕಿ ರಕ್ಷಣೆ ಬಗ್ಗೆ ಅರಿವು ಮೂಡಿಸಿ ಇವರ ಸಹಭಾಗಿತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿದ್ಧ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಾರೆ.

ತಪ್ಪು ಕಲ್ಪನೆಯಿಂದ ಕಾಡಿಗೆ ಬೆಂಕಿ?: ಆದರೆ, ಕ್ಷೇತ್ರಕಾರ್ಯಧಿದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಅರಣ್ಯಪ್ರದೇಶಕ್ಕೆ ಬೆಂಕಿ ಬೀಳುವುದು ಬಹುತೇಕ ಕಿಡಿಗೇಡಿಗಳ ಕೃತ್ಯವೇ ಆಗಿರುತ್ತದೆ. ಅರಣ್ಯದಂಚಿನ ಗ್ರಾಮಗಳ ರೈತರು ತಮ್ಮ ಜಾನುವಾರುಗಳಿಗೆ ಮುಂದಿನ ಮಳೆಗಾಲದಲ್ಲಿ ಚೆನ್ನಾಗಿ ಹುಲ್ಲು ಬೆಳೆಯಲಿ ಎಂಬ ತಪ್ಪುಕಲ್ಪನೆಯಿಂದ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಕಾಡಿಗೆ ಬೆಂಕಿ ಹಚ್ಚುತ್ತಾರೆ. ಇನ್ನುಅರಣ್ಯ ಇಲಾಖೆಯ ಮೊಕದ್ದಮೆ ಎದುರಿಸುತ್ತಿರುವ ಆರೋಪಿಗಳನ್ನು ಇಲಾಖಾ ಸಿಬ್ಬಂದಿ ನ್ಯಾಯಾಲಯಕ್ಕೆ ಒಪ್ಪಿಸಿದಾಗ ಅವರ ಮೇಲಿನ ದ್ವೇಷ ತೀರಿಸಿಕೊಳ್ಳಲೂ ಕಾಡಿಗೆ ಬೆಂಕಿ ಹಚ್ಚುವ ಪ್ರಕರಣಗಳೂ ಹೆಚ್ಚಿವೆ. ಇತ್ತೀಚಿನ ವರ್ಷಗಳಲ್ಲಂತೂ ನಮ್ಮ ಕಾಡುಗಳು
ಪ್ರವಾಸೋದ್ಯಮಕ್ಕೆ ತೆರೆದುಕೊಂಡಿರುವುದರಿಂದ ವನ್ಯಜೀವಿ ವೀಕ್ಷಣೆಗೆ ಬರುವ ಪ್ರವಾಸಿಗರು ಅಥವಾ ಅರಣ್ಯದ ಮಧ್ಯೆ ಹಾದುಹೋಗಿರುವ ರಸ್ತೆಗಳಲ್ಲಿ ಹಾದುಹೋಗುವ ಪ್ರಯಾಣಿಕರು ಬೀಡಿ, ಸಿಗರೇಟು ಸೇದಿ ಬಿಸಾಡಿದಂತಹ ಸಂದರ್ಭಗಳಲ್ಲಿಯೂ ಕಾಡಿಗೆ ಬೆಂಕಿ ಬೀಳುವ ಸಂಭವವಿರುತ್ತದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು, ಪ್ರಾಣಿಗಳನ್ನು
ಒಂದೆಡೆಯಿಂದ ಬೆದರಿಸಿ ಮತ್ತೂಂದೆಡೆ ಹಿಡಿಯುವ ಸಲುವಾಗಿ ಹಚ್ಚಿದ ಬೆಂಕಿಯೂ ಅರಣ್ಯವನ್ನು ಆಹುತಿ ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

Advertisement

ಸಿಬ್ಬಂದಿ ಕೊರತೆ: ಬಂಡೀಪುರದಲ್ಲಿ 341 ಮಂಜೂರಾದ ಹುದ್ದೆಯಲ್ಲಿ 118 ಹುದ್ದೆ ಖಾಲಿ ಉಳಿದಿದ್ದು, 13 ವಲಯ
ಅರಣ್ಯಾಧಿಕಾರಿಗಳ ಪೈಕಿ 3 ವಲಯಗಳಲ್ಲಿ ಅಧಿಕಾರಿಗಳೇ ಇಲ್ಲ. 133 ಅರಣ್ಯ ರಕ್ಷಕರ ಪೈಕಿ 55 ಹಾಗೂ 90 ವಾಚರ್‌
ಗಳ ಪೈಕಿ 10 ಹುದ್ದೆ ಖಾಲಿ ಇದೆ. ಹೀಗಾಗಿ ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ನಂಬಿಕೊಂಡಿರುವುದು ಗಿರಿಜನ ಯುವಕರನ್ನೇ, ಬೇಸಿಗೆ ಕಾಲದಲ್ಲಿ ಇವರನ್ನೇ ಹಂಗಾಮಿ ನೌಕರರಾಗಿ ಬೆಂಕಿ ನಂದಿಸುವ ಕೆಲಸಕ್ಕೆ
ಬಳಸಿಕೊಳ್ಳಲಾಗುತ್ತದೆ. ಬಿರು ಬೇಸಿಗೆಯ ಬಿಸಿಲಿನ ತಾಪ, ಮುಗಿಲೆತ್ತರಕ್ಕೆ ಚಾಚಿಕೊಂಡು ಉರಿಯುವ ಬೆಂಕಿಗೆ ಅಡ್ಡಲಾಗಿ ಹಸಿಸೊಪ್ಪು ಹಿಡಿದು ಬೆಂಕಿಯನ್ನು ಬಡಿದು ನಂದಿಸುವುದು ಸುಲಭದ ಕೆಲಸವಲ್ಲ.

ಜೀವದ ಹಂಗು ತೊರೆದು ಇಂತಹ ಕಷ್ಟದ ಕೆಲಸದಲ್ಲಿ ತೊಡಗುವ ಗಿರಿಜನ ಯುವಕರಿಗೆ ವಿಮೆ ಸೇರಿದಂತೆ ಯಾವುದೇ ಸೌಲಭ್ಯವನ್ನೂ ಅರಣ್ಯ ಇಲಾಖೆ ನೀಡುವುದಿಲ್ಲ.

ಪ್ರಕರಣವನ್ನೇ ಕೈಬಿಟ್ಟ ಇಲಾಖೆ!
2012ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಬಂಧಿಸಿದ್ದರು. ಆದರೆ, ಕೆಲ ಸ್ಥಳೀಯರು ಕಚೇರಿಗೆ ನುಗ್ಗಿ ಗೂಂಡಾಗಿರಿ ಮಾಡಿ ಬಂಧಿತ ಆರೋಪಿಗಳನ್ನು ಬಿಡಿಸಿಕೊಂಡು ಹೋಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ
ಮನಗಂಡು ಪ್ರಕರಣವನ್ನೇ ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next