ಬೆಂಗಳೂರು : ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ದಕ್ಷಿಣ ಆಫ್ರಿಕಾ ಪ್ರಜೆಯನ್ನು ಕಳುಹಿಸಿದ ಆರೋಪದ ಮೇಲೆ ಖಾಸಗಿ ಹೋಟೆಲ್‌ವೊಂದರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಎಂ.ನವೀನ್ ಕುಮಾರ್ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕ್ವಾರಂಟೈನ್‌ನಲ್ಲಿದ್ದ 66 ವರ್ಷದ ಆಫ್ರಿಕಾ ಪ್ರಜೆ ಹಾಗೂ ಖಾಸಗಿ ಐಷಾರಾಮಿ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನ.20ರಂದು ದಕ್ಷಿಣ ಆಫ್ರಿಕಾದಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸೋಂಕಿತನನ್ನು 14 ದಿನಗಳ ಕಾಲ ಖಾಸಗಿ ಹೋಟೆಲ್‌ನ ಪ್ರತ್ಯೇಕ ಕೋಣೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಆದರೆ, ಹೋಟೆಲ್ ಆಡಳಿತ ಮಂಡಳಿ ಪಾಲಿಕೆ ಆರೋಗ್ಯಾಧಿಕಾರಿಗಳ ಗಮನಕ್ಕೆ ತರದೆ ನ.27ರ ಮಧ್ಯಾಹ್ನ ಸೋಂಕಿತನನ್ನು ಹೋಟೆಲ್‌ನಿಂದ ಕಳುಹಿಸಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಹೋಟೆಲ್ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ, ದಕ್ಷಿಣ ಆಫ್ರಿಕಾ ಪ್ರಜೆ ಕೊರೊನಾ ನೆಗೆಟೀವ್ ವರದಿ ತೋರಿಸಿದ್ದಕ್ಕೆ ಹೋಟೆಲ್‌ನಿಂದ ಹೊರಹೋಗಲು ಅವಕಾಶ ನೀಡಿದ್ದಾಗಿ ಹೇಳಿದ್ದಾರೆ. ಈ ವಿಚಾರವನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಕೊರೊನಾ ಸೋಂಕಿತ ಹಾಗೂ ಈ ಹೋಟೆಲ್ ಆಡಳಿತ ಮಂಡಳಿ ಕೊರೊನಾ ಸಾಂಕ್ರಾಮಿಕ ಸಾರ್ವಜನಿಕವಾಗಿ ಹರಡಲು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.