Advertisement

ಅಳಿಯನನ್ನೇ ಅಪಹರಣ ಮಾಡಿದ ಕೇಸ್: ಕಾಂಗ್ರೆಸ್‌ ನಾಯಕಿ ದಿವ್ಯಾಪ್ರಭಾ ವಿರುದ್ಧ ಎಫ್ಐಆರ್‌

08:48 PM Feb 19, 2023 | Team Udayavani |

ಬೆಂಗಳೂರು: ಅಳಿಯನನ್ನೇ ಅಪಹರಣ ಮಾಡಿ ಆಸ್ಪತ್ರೆಗೆ ದಾಖಲಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡದ ಕಾಂಗ್ರೆಸ್‌ ನಾಯಕಿ ದಿವ್ಯಪ್ರಭಾ ಹಾಗೂ ಅವರ ಕುಟುಂಬದ ಐವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ದಿವ್ಯಪ್ರಭಾ ಅಳಿಯನಾಗಿರುವ ದಕ್ಷಿಣ ಕನ್ನಡ ಸುಳ್ಯದ ಬೆಳ್ಳಾರೆ ನಿವಾಸಿ ನವೀನ್‌ಎಂ. ಗೌಡ (32) ಕೊಟ್ಟ ದೂರಿನ ಆಧಾರದ ಮೇಲೆ ದಿವ್ಯಪ್ರಭಾ, ಇವರ ಮಗಳು ಸ್ಪಂದನಾ, ಪರಶುರಾಮ್‌, ಸ್ಪರ್ಶಿತ, ಮಹದೇವಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ನವೀನ್‌ ಎಂ. ಗೌಡ ಅವರು ತಮ್ಮ ಊರಿನ ಪಕ್ಕದವರಾದ ದಿವ್ಯಪ್ರಭಾ ಪುತ್ರಿ ಸ್ಪಂದನಾ ಅವರನ್ನು 2019ರ ಫೆಬ್ರುವರಿಯಲ್ಲಿ ವಿವಾಹವಾಗಿದ್ದರು. 2022ರ ಅಕ್ಟೋಬರ್‌ನಿಂದ ನವೀನ್‌ ಮತ್ತು ಸ್ಪಂದನಾ ನಡುವೆ ಸಂಸಾರಿಕ ಮನಸ್ತಾಪ ಉಂಟಾಗಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ಈ ಮಧ್ಯೆ “ಸ್ಪಂದನಾ ಅವರಿಗೆ ಬೇರೆಯವರ ಜತೆ ಸಂಬಂಧ ಇದೆ. ಮೊಬೈಲ್‌ನಲ್ಲಿ ನಡೆಸಿದ್ದ ಅಶ್ಲೀಲ ಚಾಟ್‌ಗಳು ಸಿಕ್ಕಿದ್ದರಿಂದ ದೂರವಾಗಿದ್ದೆ’ ಎಂದು ದೂರಿನಲ್ಲಿ ನವೀನ್‌ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳು ಒಳಸಂಚು ರೂಪಿಸಿ 2022 ಡಿ.19ರಂದು ಮನೆಗೆ ಬಂದು, ಬಲವಂತವಾಗಿ ನನ್ನ ಕೈಕಾಲು ಕಟ್ಟಿಕೊಂಡು ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿನ ಜೆ.ಪಿ. ನಗರದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆ ಆಸ್ಪತ್ರೆ ವೈದ್ಯರ ಜತೆಗೆ ಒಳ ಒಪ್ಪಂದದ ಮಾತುಕತೆ ನಡೆಸಿ ನನ್ನನ್ನು ಮಾನಸಿಕ ಅಸ್ವಸ್ಥ ಎಂಬುದಾಗಿ ಬಿಂಬಿಸಿ ಅಕ್ರಮ ಬಂಧನದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಆರೋಪಿಗಳು ಆಸ್ಪತ್ರೆಯಲ್ಲಿಯೇ ಕೈಗಳಿಂದ ಮುಖ ಹಾಗೂ ದೇಹದ ಇತರೆ ಕಡೆ ಹಲ್ಲೆ ಮಾಡಿ ಚಿಕಿತ್ಸೆಗೆ ಸಮ್ಮತಿ ನೀಡಿರುವುದಾಗಿ ಬಿಂಬಿಸಿದ್ದರು.

ಬಳಿಕ ಕೆಲವು ಕಾಗದ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದರು. ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡದಿರುವ ಕಾರಣ ಆರೋಪಿಗಳೇ ಕೆಲ ಕಾಗದ ಪತ್ರಗಳನ್ನು ಸೃಷ್ಟಿ ಮಾಡಿ, ಆ ಪತ್ರಗಳಿಗೆ ನನ್ನ ನಕಲಿ ಸಹಿ ದಸ್ತಾವೇಜು ಸೃಷ್ಟಿಸಿಕೊಂಡಿದ್ದಾರೆ. ಅಪಹರಣದ ಸಂಬಂಧ ದಾಖಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಂಬಂಧ ಹೈಕೋರ್ಟ್‌ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ 2022ರ ಡಿ. 22ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್ಐಆರ್‌ನಲ್ಲಿ ನವೀನ್‌ ಉಲ್ಲೇಖಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next