ದೇವನಹಳ್ಳಿ: ಜಿಲ್ಲೆಯಲ್ಲಿ ನೋಂದಣಿಯಾಗಿ ಕೌಶಲ್ಯ ಹೊಂದಿರುವ ವಲಸೆ ಕಾರ್ಮಿಕರಿಗೆ ಶ್ರೀಘ್ರ ಉದ್ಯೋಗ ದೊರಕಿಸುವುದರೊಂದಿಗೆ, ಅಗತ್ಯವಿರುವ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಹಮ್ಮಿಕೊಳ್ಳಬೇಕು ಎಂದು ಡೀಸಿ ಪಿ. ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಡೆದ ವಲಸೆ ಕಾರ್ಮಿಕರು ಕೌಶಲ್ಯ ಇಲಾಖೆಯಲ್ಲಿ ನೋಂದಾಯಿತ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಹಾಗೂ ತರಬೇತಿ ಕಲ್ಪಿಸುವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯೋಗ ಕೌಶಲ್ಯ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿರುವ ಕೌಶಲ್ಯ ಹೊಂದಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆ ಘಟಕಗಳಲ್ಲಿ ಖಾಲಿಯಿರುವ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಕ್ರಮವಹಿಸಬೇಕು ಎಂದರು.
ಜಿಲ್ಲೆಗೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಎಲೆಕ್ಟ್ರೀಷಿಯನ್, ಪ್ಲಂಬರ್, ಪೇಂಟರ್, ಬಡಗಿ, ಚಾಲಕರು ಸೇರಿದಂತೆ ಅಸಂಘಟಿತ ವಲಸೆ ಕಾರ್ಮಿಕರಿಗೆ ಸ್ಥಳೀಯ ಅಗತ್ಯಗಳಿಗೆ ಅನುಸಾರವಾಗಿ ಮರು ಕೌಶಲ್ಯ ತರಬೇತಿ ನೀಡಿ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ.ಭೂ ಶಂಕರ್, ಜಿಲ್ಲಾ ನಗರಾಭಿವೃದ್ಧಿ ಯೋಜನೆ ನಿರ್ದೇಶಕಿ ಸುಮಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಮುಕುಂದ್ ಸೇರಿ ಇಲಾಖೆಗಳ ಅಧಿಕಾರಿಗಳು ಇದ್ದರು.