ಸೆಳೆಯುವ ರಾಜ್ಯದ ಪ್ರಖ್ಯಾತ ಉದ್ಯಾನಗಳಾದ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆಆರ್‌ಎಸ್ ಸೇರಿದಂತೆ ಪಾರ್ಕ್‌ಗಳ ನಿರ್ವಹಣೆಗೆ ಬಜೆಟ್ ನಲ್ಲಿ ನೀಡಿರುವ ಅನುದಾನ ಅತ್ಯಲ್ಪವಾಗಿದ್ದು, ಹೆಚ್ಚುವರಿಯಾಗಿ 30 ಕೋಟಿ ರೂ. ಮಂಜೂರು ಮಾಡುವಂತೆ ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
Advertisement
ಕಳೆದ ಹಣಕಾಸು ವರ್ಷದಲ್ಲಿ ರಾಜ್ಯದ ಪ್ರತಿಷ್ಠಿತ ಉದ್ಯಾನಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಸುಮಾರು 34 ಕೋಟಿ ರೂ. ಅನುದಾನ ನೀಡಿತ್ತು. ಪ್ರಸಕ್ತ ವರ್ಷದಲ್ಲಿ ಉದ್ಯಾನ, ಗಿರಿಧಾಮಗಳ ನಿರ್ವಹಣೆ ವೆಚ್ಚದಲ್ಲಿ ಏರಿಕೆಯಾಗಿದ್ದು, ಸುಮಾರು 50 ಕೋಟಿ ರೂ.ಗಳಿಗೂ ಅಧಿಕ ಅನುದಾನದ ಅವಶ್ಯಕತೆ ಇದೆ. ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿತ್ತು. ಆದರೆ, ತೋಟಗಾರಿಕೆ ಇಲಾಖೆಗೆ ಈ ಬಾರಿ ಆಯವ್ಯಯದಲ್ಲಿ ಸಿಕ್ಕಿದ 940 ಕೋಟಿ ರೂ. ಗಳಿಗೂ ಅಧಿಕ ಅನುದಾನದಲ್ಲಿ ಉದ್ಯಾನಗಳ ನಿರ್ವಹಣೆಗೆಂದು ಲಭ್ಯವಾಗಿದ್ದು ಕೇವಲ 10 ಕೋಟಿ ರೂ. ಮಾತ್ರ. ರಾಜ್ಯಾದ್ಯಂತ ಇರುವ 31 ಉದ್ಯಾನಗಳ ವಾರ್ಷಿಕ ನಿರ್ವಹಣೆಗೆ 10 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಜತೆಗೆ ಈಗಾಗಲೇ ನೀಡಿರುವ ಅನುದಾನವನ್ನು 24 ಜಿಲ್ಲೆಗಳಲ್ಲಿ ಇರುವ ಉದ್ಯಾನಗಳ ನಿರ್ವಹಣೆಗೆ ವಿತರಿಸಲಾಗಿದ್ದು, ಖರ್ಚಾಗಿ ಹೋಗಿದೆ. ಆರ್ಥಿಕ ವರ್ಷದ ಮುಕ್ತಾಯಕ್ಕೆ ಇನ್ನೂ 8 ತಿಂಗಳು ಬಾಕಿ ಇದ್ದು, ನಿರ್ವಹಣೆ ಕಷ್ಟಕರವಾಗಲಿದೆ. ಜತೆಗೆ ಈಗಾಗಲೇ ಪ್ರಗತಿಯಲ್ಲಿರುವ ಹಲವು ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳು ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಆ ಕಾರಣದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಗಿರಿಧಾಮ, ಶಿರಸಿ, ಬೆಂಗಳೂರು ಗ್ರಾಮಾಂತರದ ಕನ್ನಮಂಗಲದ ಲಾಲ್‌ಬಾಗ್ ಸೇರಿದಂತೆ ಸುಮಾರು 31 ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ. ಉದ್ಯಾನಗಳಿಗೆ ಹೊಸ ತಳಿಯ ಸಸ್ಯಗಳನ್ನು ತಂದು ಅಭಿವೃದ್ಧಿಪಡಿಸುವುದು, ಯಂತ್ರೋಪಕರಣಗಳ ಖರೀದಿ, ದುರಸ್ತಿ, ನಿರ್ವಹಣೆ, ಮೂಲಸೌಕರ್ಯ ಒದಗಿಸುವುದು, ಸಮರ್ಪಕ ವಿದ್ಯುತ್ ನಿರ್ವಹಣೆ, ನೀರು ಸರಬರಾಜು, ಭದ್ರತಾ ಸೇವೆ, ಸ್ವತ್ಛತಾ ಸೇವೆ ಮಾನವ ದಿನಗಳ ಸೇವೆ ನಿರ್ವಹಣಾ ವೆಚ್ಚ, ಗಿರಿಧಾಮಗಳ ಅತಿಥಿ ಗೃಹಗಳ ಸ್ವತ್ಛತೆ ಮತ್ತು ಊಟೋಪಚಾರ ವ್ಯವಸ್ಥೆ, ಹೊಸ ಭೂದೃಶ್ಯ ವಿನ್ಯಾಸ ಹೀಗೆ ವಿವಿಧ ಕಾಮಗಾರಿಗಳಿಗಾಗಿ ತೋಟಗಾರಿಕೆ ಇಲಾಖೆ ಹಂಚಿಕೆ ಮಾಡಿರುವ 10 ಕೋಟಿ ರೂ.ಗಳ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
Related Articles
Advertisement
ರಾಜ್ಯದ ಪ್ರಖ್ಯಾತ ಉದ್ಯಾನಗಳ ನಿರ್ವಹಣೆಗೆ ಅನುದಾನದ ಅವಶ್ಯಕತೆ ಇತ್ತು. ಈಗಾಗಲೇ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಪ್ರಕ್ರಿಯೆಯಲ್ಲಿದೆ. ಸರ್ಕಾರವೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ.
ಎಸ್.ಎಸ್.ಮಲ್ಲಿಕಾರ್ಜುನ್, ತೋಟಗಾರಿಕಾ ಸಚಿವ ಸಂಪತ್ ತರೀಕೆರೆ