Advertisement

ಅಂತೂ ಇಂತೂ ಕೆಂದೂರ ಕೆರೆಗೆ ಬಂತು ನೀರು

12:33 PM Apr 08, 2022 | Team Udayavani |

ಬಾಗಲಕೋಟೆ: ಅಖಂಡ ವಿಜಯಪುರ ಜಿಲ್ಲೆಯಲ್ಲಿಯೇ 2ನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಪಡೆದ, ಐತಿಹಾಸಿಕ ಬಾದಾಮಿ ತಾಲೂಕಿನ ಕೆಂದೂರ ಕೆರೆಗೆ ಅಂತೂ ನೀರು ಹರಿದಿದೆ. ಕೆಂದೂರ ಕೆರೆಗೆ ನೀರು ತುಂಬಿಸಬೇಕೆಂಬ ಬೇಡಿಕೆ ಇಂದು-ನಿನ್ನೆಯದಲ್ಲ. ಇದಕ್ಕಾಗಿ ಸುಮಾರು 15 ವರ್ಷಗಳಿಂದ ನಿರಂತರ ಹೋರಾಟ ನಡೆದಿತ್ತು.

Advertisement

ಕೆರೆ ಅಭಿವೃದ್ಧಿಗೆ ಕೇಳಿ ಬಂದಿತ್ತು ಕೂಗು: ಇಂತಹ ಅದ್ಭುತ ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಬೇಕು. ಕೆರೆಯ ಸುತ್ತಲೂ ನೈಸರ್ಗಿಕ ಬೆಟ್ಟ-ಗುಡ್ಡಗಳಿದ್ದು, ಪಕ್ಷಿಗಳ ಕಲರವ ನಿತ್ಯವೂ ಕೇಳಿ ಬರುತ್ತಿದೆ. ಹೀಗಾಗಿ ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಪಕ್ಷಿಧಾಮ ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದಕ್ಕಾಗಿ ಶ್ರೀ ಒಪ್ಪತ್ತೇಶ್ವರ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ 2017ರಲ್ಲಿ ಪತ್ರ ಬರೆದು, ಕೆಂದೂರ ಕೆರೆ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂಬ ಮನವಿ ಮಾಡಿದ್ದರು.

ಈ ಕೆರೆಯಂಗಳ ಸಣ್ಣ ನೀರಾವರಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಮಧ್ಯದ ತಿಕ್ಕಾಟದಿಂದ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿತ್ತು. ಸ್ವಾಮೀಜಿಗಳು ಪ್ರಧಾನಿಗೆ ಬರೆದ ಪತ್ರದಲ್ಲಿ ಈ ವಿಷಯ ವಿವರಿಸಿದ್ದರು. ಪ್ರಧಾನಿ ಕಚೇರಿಯಿಂದ ಈ ಕುರಿತು ಸರ್ಕಾರಕ್ಕೆ ನಿರ್ದೇಶನ ಕೂಡ ಬಂದಿತ್ತು. ಆದರೆ ಸರ್ಕಾರದಿಂದ ಅನುದಾನವಾಗಲಿ, ಯೋಜನೆಯಾಗಲಿ ಮಂಜೂರು ಆಗಿರಲಿಲ್ಲ.

ಭರವಸೆ ನೀಡಿದ್ದ ಸಿದ್ದು: ಕಳೆದ 2018ರ ವಿಧಾನಸಭೆ ಚುನಾವಣೆ ವೇಳೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಕೆಂದೂರಿನಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಾಗ ನಮ್ಮೂರಿನ ಕೆರೆಗೆ ನೀರು ತುಂಬಿಸಬೇಕು ಎಂದು ಇಡೀ ಗ್ರಾಮಸ್ಥರು ಮನವಿ ಮಾಡಿದ್ದರು.

ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿ, ಖಂಡಿತಾ ನಿಮ್ಮೂರಿನ ಕೆರೆ ತುಂಬಿಸಲು ಯೋಜನೆ ರೂಪಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೂಡ ಅಧಿಕಾರಕ್ಕೆ ಬಂತು. ಆ ವೇಳೆ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಕೆಂದೂರ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸಲು 5 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ, ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾತಿ ಕೊಡಿಸಲು ಯಶಸ್ವಿಯಾಗಿದ್ದರು. ಅದೇ ವರ್ಷ ಈ ಯೋಜನೆಗೆ ಭೂಮಿಪೂಜೆಯೂ ನೆರವೇರಿಸಿದ್ದರು.

Advertisement

ಹರಿಯಿತು ಮಲಪ್ರಭೆಯ ನೀರು: ಕೆಂದೂರ ಕೆರೆಗೆ 5.47 ಕೋಟಿ ಅನುದಾನದಡಿ ಕೆರೆಗೆ ನೀರು ತುಂಬಿಸಲು ನಂದಿಕೇಶ್ವರ ಬಳಿ ಮಲಪ್ರಭಾ ನದಿಯಲ್ಲಿ ಪಂಪ್‌ಹೌಸ್‌ ನಿರ್ಮಿಸಿ ಅಲ್ಲಿಂದ ಸುಮಾರು 7 ಕಿ.ಮೀ ವ್ಯಾಪ್ತಿಯ ಕೆರೆವರೆಗೆ ಪೈಪ್‌ ಲೈನ್‌ ಅಳವಡಿಸಲಾಗಿದೆ.

ಗುರುವಾರದಿಂದ ಕೆರೆಗೆ ನೀರು ತುಂಬಿಸಲು ಆರಂಭಿಸಲಾಗಿದ್ದು, ಇಡೀ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಸಿದ್ದರಾಮಯ್ಯ ಗುರುವಾರ ಕೆಂದೂರಿಗೆ ಆಗಮಿಸಿ, ಕೆರೆಗೆ ನೀರು ತುಂಬುವ ಯೋಜನೆ ಲೋಕಾರ್ಪಣೆಗೊಳಿಸಿದರು. ಹಲವು ವರ್ಷಗಳಿಂದ ನಡೆದ ಕೆರೆಗೆ ನೀರು ತುಂಬಿಸುವಂತೆ ನಡೆದ ಹೋರಾಟಕ್ಕೆ ಅಂತೂ ಯಶಸ್ಸು ಸಿಕ್ಕಿದ್ದು, ಈ ಕೆರೆಯಿಂದ ಸುಮಾರು 8ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲಿದೆ. ಚುನಾವಣೆ ವೇಳೆ ನಾನು ಕೆಂದೂರಿಗೆ ಬಂದಾಗ ಕೆರೆಗೆ ನೀರು ತುಂಬಿಸುವುದಾಗಿ ಹೇಳಿದ್ದೆ. ಹೇಳಿದಂತೆ 2018-19ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ 5.47 ಕೋಟಿ ಅನುದಾನದಡಿ ನೀರು ತುಂಬಿಸಲು ಯೋಜನೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಒಟ್ಟು 11 ಕೋಟಿ ರೂ. ವೆಚ್ಚ ಮಾಡಿಡಲಾಗಿದೆ. ಕೆರೆಯಲ್ಲಿ ಮುಳ್ಳು-ಕಂಟಿ ಬೆಳೆದಿದ್ದು, ಸಾಕಷ್ಟು ಹೂಳು ತುಂಬಿಕೊಂಡಿದೆ. ಹಾಗೆಯೇ ನೀರು ತುಂಬಿಸಿದರೆ ಅಷ್ಟೊಂದು ಫಲಪ್ರದವಾಗಲ್ಲ. ಅದ್ದರಿಂದ ಕೆರೆಯ ಹೂಳು ತೆಗೆಯಲು, ಮುಳ್ಳು-ಕಂಟಿ ಸಂಪೂರ್ಣ ಸ್ವತ್ಛಗೊಳಿಸುವ ಜತೆಗೆ ಕೆರೆಯ ಮಧ್ಯೆ ನಡುಗಡ್ಡೆ ನಿರ್ಮಿಸಿ, ಪಕ್ಷಿಧಾಮ ನಿರ್ಮಿಸಲು 25 ಕೋಟಿ ವೆಚ್ಚದ ಯೋಜನೆ ರೂಪಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ.  -ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಮೂರ್ತಿ- ಸ್ಮರಣಿಕೆ ನೀಡಿ ಸನ್ಮಾನ: ತಮ್ಮೂರಿನ ಕೆರೆ ತುಂಬಿಸಲು ಪ್ರಮುಖ ಕಾರಣರಾದ ಸಿದ್ದರಾಮಯ್ಯ ಅವರಿಗೆ ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ, ಶಿವಪ್ಪ ಹಣಮಸಾಗರ, ಗುರುನಾಥ ಹುದ್ದಾರ ಅವರು ಬುದ್ಧ-ಬಸವ ಮೂರ್ತಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಗ್ರಾಮದ ಪ್ರಮುಖರಾದ ಕುಮಾರ ಚುಂಗಿನ, ಬಸಲಿಂಗಯ್ಯ ಹಿರೇಮಠ, ಕೆಲೂಡೆಪ್ಪ ಮುತ್ತಲಗೇರಿ, ರಂಗಪ್ಪ ಜಿಂಗಿ, ಮಲ್ಲಪ್ಪ ರೇವಡಿ ಮುಂತಾದವರು ಪಾಲ್ಗೊಂಡಿದ್ದರು.

2ನೇ ಅತಿ ದೊಡ್ಡ ಕೆರೆ: ಅಖಂಡ ವಿಜಯಪುರ ಜಿಲ್ಲೆಯಲ್ಲೇ ಇದು 2ನೇ ಅತಿ ದೊಡ್ಡ ಕೆರೆ. ಸಣ್ಣ ನೀರಾವರಿ ಇಲಾಖೆಯಡಿ ಬರುವ ಈ ಕೆರೆ ಒಟ್ಟು 164 ಎಕರೆ ವಿಸ್ತಾರ ಹೊಂದಿದೆ. ಈ ಕೆರೆಯಂಗಳದಲ್ಲಿ ಅರಣ್ಯ ಇಲಾಖೆ ಸುಮಾರು 30 ವರ್ಷಗಳ ಹಿಂದೆ ಸಸಿಗಳನ್ನು ನೆಡಲಾಗಿತ್ತು. ಆ ಸಸಿಗಳ ಪೋಷಣೆ ಕೂಡ ಇಲಾಖೆ ಮಾಡಿತ್ತು. ಆಗ ಸುಮಾರು 4 ಎಕರೆ ವಿಸ್ತಾರದಷ್ಟು ಕೆರೆಯ ಭೂಮಿ, ಅರಣ್ಯ ಇಲಾಖೆಯಡಿ ನೋಂದಣಿಯಾಗಿದ್ದರ ಪರಿಣಾಮ ಈ ಕೆರೆ ಅಭಿವೃದ್ಧಿಗೆ ಏನೇ ಯೋಜನೆ ರೂಪಿಸಬೇಕಿದ್ದರೂ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತಿತ್ತು.

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next