ಮೈಸೂರು : ದಿನಕ್ಕೊಂದು ರೂಪ ಪಡೆದ ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್ ಗಳ ಪೈಕಿ ಎರಡು ಚಿಕ್ಕ ಗುಂಬಜ್ ಗಳನ್ನು ಕೊನೆಗೂ ತೆರವು ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ”ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.
ರಾಮದಾಸ್ ಪತ್ರಿಕಾ ಪ್ರಕಟಣೆ
ಡೂಮ್ ಗಳ ತೆರವಿನ ಕುರಿತು ಕೃಷ್ಣ ರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಹಳ ಅವಶ್ಯಕ ವಾದ ಮಂತ್ರ. ಅಭಿವೃದ್ಧಿ ಕಾರ್ಯದಲ್ಲಿ ಸರ್ವ ಜಾತಿ, ಧರ್ಮ, ಪಂಗಡಗಳನ್ನು ಒಟ್ಟಾಗಿ ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ತೆಗೆದುಕೊಂಡು ಹೋಗಿದ್ದೇನೆ. ಇದುವರೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ವಿವಾದ ನಡೆದಿರುವುದಿಲ್ಲ. ನಾಗರಿಕರ ಸೌಲಭ್ಯಕ್ಕಾಗಿ 12 ಬಸ್ ನಿಲ್ದಾಣಗಳನ್ನು ನಿರ್ಮಿಸಲು ಶಾಸಕರ ನಿಧಿಯಿಂದ ಕಾರ್ಯೋನ್ಮುಖವಾಗಿದ್ದು ಸರಿಯಷ್ಟೆ. ಮೈಸೂರು ಪಾರಂಪರಿಕ ನಗರಿ. ಅರಮನೆ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಿಸುವುದು ನನ್ನ ಗುರಿಯಾಗಿತ್ತು. ಅದಕ್ಕೆ ಅನಾವಶ್ಯಕ ಧರ್ಮದ ಲೇಪ ನೀಡಿ ವಿವಾದದ ಸ್ಥಳವನ್ನಾಗಿ ಮಾಡಿರುವುದು ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ಇದೊಂದು ವಿವಾದಿತ ಕೇಂದ್ರವನ್ನಾಗಿ ಮುಂದೆ ಕಪ್ಪು ಚುಕ್ಕೆ ನಿರ್ಮಾಣ ಮಾಡಬಾರದು ಎಂದು ಎರಡು ಡೂಮ್ ಗಳನ್ನು ತೆರವು ಮಾಡಿ ತಂಗುದಾಣವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಪರೋಕ್ಷವಾಗಿ ಸ್ವಪಕ್ಷದ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.
ತೀವ್ರ ವಿವಾದ
ಗುಂಬಜ್ ವಿರೋಧಿಸಿ ಪ್ರತಾಪ್ ಸಿಂಹ ಹೇಳಿಕೆ ಕೊಡುವ ಮುನ್ನ ಬರೀ ಮೂರು ಗುಂಬಜ್ ಮಾತ್ರ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸಗಳನ್ನೂ ಹಾಕಲಾಗಿತ್ತು.
ಇದು ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಶಾಸಕ ಎಸ್ ಎ ರಾಮದಾಸ್ ಅವರು, ‘ನನ್ನನ್ನು ದಯಮಾಡಿ, ಬಿಟ್ಟು ಬಿಡಿ’ ಎಂದು ಕೈ ಮುಗಿದು ಕೇಳಿಕೊಂಡಿದ್ದರು.
ಗುಂಬಜ್ ತೆರವಿಗೆ ಗಡುವು ನೀಡಿದ್ದ ಪ್ರತಾಪ್ ಸಿಂಹ, ತೆರವು ಮಾಡದೆ ಇದ್ದರೆ ಮೊದಲೇ ಹೇಳಿದಂತೆ ನಾನೇ ತೆರವು ಮಾಡುತ್ತೇನೆ. ಬಸ್ ಸ್ಟ್ಯಾಂಡ್ ತೆರವು ಮಾಡವುದಿಲ್ಲ. ಬಸ್ ಸ್ಟ್ಯಾಂಡ್ ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆ ಎಂದು ಗುಡುಗಿದ್ದರು.