Advertisement

ಸ್ನಾತಕೋತ್ತರ ಕೋರ್ಸ್‌ಗೆ ಕೊನೆಗೂ ಸಿಕು ಅನುಮತಿ

04:41 PM Nov 12, 2018 | |

ಬಳ್ಳಾರಿ: ಇಲ್ಲಿನ ತಾರಾನಾಥ್‌ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಹೆಚ್ಚುವರಿ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಕಳೆದ ಎರಡು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ದೆಹಲಿಯ ಆಯುಷ್‌ ಮಂತ್ರಾಲಯ ಕೊನೆಗೂ ಅಸ್ತು ಎಂದಿದೆ.

Advertisement

ಕಾಯ ಚಿಕಿತ್ಸೆ, ಪಂಚಕರ್ಮ, ಶಲ್ಯತಂತ್ರ ಸ್ನಾತಕೋತ್ತರ ಪದವಿ ಕೋರ್ಸ್‌ ನಡೆಸಲು ಅನುಮತಿ ದೊರೆತಿದ್ದು,
ಪ್ರಸಕ್ತ ಅಕಾಡೆಮಿಕ್‌ ವರ್ಷದಿಂದಲೇ ಚಾಲನೆ ದೊರೆಯಲಿದೆ. ಜತೆಗೆ ಸ್ನಾತಕ ಪದವಿ ಕೋರ್ಸ್‌ಗಳಿಗೂ ವಿದ್ಯಾರ್ಥಿಗಳ
ಸಂಖ್ಯೆಯನ್ನು ಹೆಚ್ಚಿಸಿದೆ. 

ಹೈದ್ರಾಬಾದ್‌ ಕರ್ನಾಟಕ ಸೇರಿ ಉತ್ತರ ಕರ್ನಾಟಕದಲ್ಲೇ ಏಕೈಕ ಸರ್ಕಾರಿ ಕಾಲೇಜು ಆಗಿರುವ ನಗರದ ಸರ್ಕಾರಿ ತಾರಾನಾಥ್‌ ಆಯುರ್ವೇದ ಕಾಲೇಜು ಕಳೆದ ಐದಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಆರಂಭದಿಂದಲೂ ಕಾಲೇಜಿನಲ್ಲಿ ವಿವಿಧ ವಿಭಾಗಗಳ ಸ್ನಾತಕ ಪದವಿಗಳು ಚಾಲನೆಯಲ್ಲಿವೆ. ಕಳೆದ 20 ವರ್ಷಗಳಿಂದ ರಸಶಾಸ್ತ್ರ ವಿಭಾಗದಲ್ಲಿ ಮಾತ್ರ ಸ್ನಾತಕೋತ್ತರ ಪದವಿ ಕೋರ್ಸ್‌ ಇದ್ದು, 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇನ್ನುಳಿದ ವಿಭಾಗಗಳಿಗೂ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಆರಂಭಿಸಲು ಅನುಮತಿ ನೀಡುವಂತೆ ಕಳೆದ ಎರಡು ದಶಕಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಈಚೆಗೆ ದೆಹಲಿಯ ಮಿನಿಸ್ಟ್ರಿ ಆಫ್‌ ಆಯುಷ್‌ ಮಂತ್ರಾಲಯ ಮತ್ತು ಬೆಂಗಳೂರಿನರಾಜೀವ್‌ ಗಾಂಧಿ ಮೆಡಿಕಲ್‌ ಸೈನ್ಸಸ್‌ ಸಂಸ್ಥೆಯು ಕಾಯಚಿಕಿತ್ಸೆ, ಪಂಚಕರ್ಮ, ಶಲ್ಯತಂತ್ರ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನಡೆಸಲು ಅನುಮತಿ ದೊರೆತಿದೆ. ಹೀಗಾಗಿ ಒಟ್ಟು 18 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಸೀಟ್‌ಗಳ ಹಂಚಿಕೆ: ತಾರಾನಾಥ್‌ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ರಸಶಾಸ್ತ್ರ ವಿಭಾಗಕ್ಕೆ ಸ್ನಾತಕೋತ್ತರ ಪದವಿ (ಪಿಜಿ) ಚಾಲನೆಯಲ್ಲಿದ್ದು, 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ ಇದೀಗ ಅನುಮತಿ ದೊರೆತಿರುವ ಪಂಚಕರ್ಮ ಸ್ನಾತಕೋತ್ತರ ಪದವಿ ಕೋರ್ಸ್‌ಗೆ 7, ಕಾಯಚಿಕಿತ್ಸೆಗೆ 7, ಶಲ್ಯತಂತ್ರ (ಆಪರೇಷನ್‌) ಕೋರ್ಸಗೆ 4 ಸೇರಿ ಒಟ್ಟು 18 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲಿದ್ದಾರೆ. 

Advertisement

ಈಚೆಗೆ ನಡೆದ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗಿದ್ದು, ಶೇ. 80ರಷ್ಟು ಹೈಕ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ ಎನ್ನುತ್ತಾರೆ ಕಾಲೇಜು ಪ್ರಭಾರಿ ಪ್ರಾಚಾರ್ಯ ರಾಜಶೇಖರ್‌ ಗಾಣಿಗೇರ್‌. 

ಯುಜಿಗೂ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ: ಕಳೆದ ಐದಾರು ದಶಕಗಳಿಂದ ಆಯುರ್ವೇದ ಚಿಕಿತ್ಸೆ ಬಗ್ಗೆ ಬೋಧಿಸುತ್ತಿರುವ ನಗರದ ಸರ್ಕಾರಿ ತಾರಾನಾಥ್‌ ಆಯುರ್ವೇದ ಕಾಲೇಜಿನಲ್ಲಿ ಕೇವಲ ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು. ಪ್ರಸಕ್ತ ವರ್ಷದಿಂದ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಒಟ್ಟು 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರೆಯಲಿದೆ. ಇದರಲ್ಲೂ 371(ಜೆ) ಪ್ರಕಾರ ಹೈಕ ಭಾಗದ ಸುಮಾರು 48 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅವಕಾಶ ದೊರೆಯಲಿದೆ.

ಕೆಎಂಇಆರ್‌ಸಿ, ಡಿಎಂಎಫ್‌ನಿಂದ ಅನುದಾನ: ತಾರನಾಥ್‌ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಅಗತ್ಯ ಬೋಧಕ, ಬೋಧಕೇತರ ಸಿಬ್ಬಂದಿ ಲಭ್ಯವಿದ್ದಾರೆ. ಅದರ ಅಧಾರದ ಮೇಲೆಯೇ ಮೂರು ಸ್ನಾತಕೋತ್ತರ ಕೋರ್ಸ್‌ ಮತ್ತು ಸ್ನಾತಕ ಪದವಿಯಲ್ಲಿ 20 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಅನುಮತಿ ದೊರೆತಿದೆ. ಕಾಲೇಜನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಗಣಿಗಾರಿಕೆಯಿಂದ ಸಂಗ್ರಹಗೊಂಡಿದ್ದ ಕೆಎಂಆರ್‌ಇಸಿಯಿಂದ 45 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. 

ಜಿಲ್ಲಾ ಖನಿಜ ನಿಗೂ ಪ್ರಸ್ತಾವನೆ ನೀಡುವಂತೆ ಸ್ಥಳೀಯ ಶಾಸಕರು ಸಲಹೆ ನೀಡಿದ್ದಾರೆ. ಅದರಂತೆ ಅನುದಾನ ದೊರೆತಲ್ಲಿ, ಸಿಬ್ಬಂದಿಗೆ ವಸತಿ, ರೋಗಿಗಳ ಸಂಬಂಧಿಗಳಿಗಾಗಿ ಬೃಹತ್‌ ಕಟ್ಟಡ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದು ಪ್ರಭಾರ ಪ್ರಾಚಾರ್ಯ ರಾಜಶೇಖರ್‌ ಗಾಣಿಗೇರ್‌ ಅವರ ವಿಶ್ವಾಸದ ನುಡಿಗಳಾಗಿವೆ. 

ನಗರದ ತಾರಾನಾಥ್‌ ಸರ್ಕಾರಿ ಆಯುರ್ವೇದ ಕಾಲೇಜು ಕಳೆದ ಐದಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಸ್ನಾತಕ ಪದವಿ ಕೋರ್ಸ್‌ನಲ್ಲಿ ಕೇವಲ 40 ವಿದ್ಯಾರ್ಥಿಗಳಿಗಷ್ಟೇ ಪ್ರವೇಶವಿದ್ದು, ಅದನ್ನು ಇದೀಗ 60ಕ್ಕೆ ಏರಿಸಲಾಗಿದೆ. ಈಗಾಗಲೇ ಇರುವ ರಸಶಾಸ್ತ್ರ ಸ್ನಾತಕೋತ್ತರ ಕೋರ್ಸ್‌ ಜತೆಗೆ ಕಾಯ ಚಿಕಿತ್ಸೆ, ಪಂಚಕರ್ಮ, ಶಲ್ಯತಂತ್ರ ಸ್ನಾತಕೋತ್ತರ ಕೋರ್ಸ್‌ಗಳಿಗೂ ಅನುಮತಿ ದೊರೆತಿದ್ದು, ಈಚೆಗೆ ನಡೆದ ಪ್ರವೇಶ ಪರೀಕ್ಷೆಯಿಂದಾಗಿ 18 ವಿದ್ಯಾರ್ಥಿಗಳನ್ನೂ ಹಂಚಿಕೆ ಮಾಡಲಾಗಿದೆ. ಕಾಲೇಜಿನಲ್ಲಿ ಈಗಾಗಲೇ ಅಗತ್ಯ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದ ಪರಿಣಾಮ ಹೆಚ್ಚುವರಿ ಕೋರ್ಸ್‌ಗಳಿಗೆ ಅನುಮತಿ ದೊರೆಯಲು ಕಾರಣವಾಗಿದೆ. 
 ಡಾ| ರಾಜಶೇಖರ್‌ ಗಾಣಿಗೇರ್‌, ಪ್ರಭಾರ ಪ್ರಾಚಾರ್ಯರು, ಸರ್ಕಾರಿ ತಾರಾನಾಥ್‌ ಆಯುರ್ವೇದ ಕಾಲೇಜು, ಬಳ್ಳಾರಿ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next