Advertisement
ಕರ್ವೇಲು- ಶಾಂತಿನಗರ ರಸ್ತೆಯು ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದು, ಸುಮಾರು 20 ವರ್ಷಗಳ ಹಿಂದೆ ಇದರಡಾಮರು ಕಾಮಗಾರಿ ನಡೆದಿತ್ತು. ಬಳಿಕ ಒಮ್ಮೆ ತೇಪೆ ಹಾಕಿ ದಶಕಗಳೇ ಸಂದು ಹೋಗಿವೆ. ಈಗ ಈ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿ ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿ ಹೋಗಿತ್ತಲ್ಲದೆ, ನಡೆದಾಡಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಚಾಲಕರ ಪಾಡಂತೂ ಕೇಳುವುದೇ ಬೇಡ. ಇಲ್ಲಿನ ರಸ್ತೆ ದುರಸ್ತಿಗೆ ಹಲವು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ರಸ್ತೆಯು ಸುಮಾರು ಒಂದೂವರೆ ಕಿ.ಮೀ. ನಷ್ಟು ಉದ್ದವಿದ್ದು, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಪಡೆಯುವ ಈ ರಸ್ತೆಯು ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯ ಶಾಂತಿನಗರ ಎಂಬಲ್ಲಿ ಕೂಡುತ್ತದೆ. ಈ ರಸ್ತೆಯಲ್ಲಿ ಶಾಲೆ, ಶ್ರೀ ಮಹಾವಿಷ್ಣು ದೇವಸ್ಥಾನ, ಮಸೀದಿ, ಭಜನ ಮಂದಿರವೂ ಇದೆ. ಅಲ್ಲದೆ, ಇದು ಮಠಂತಬೆಟ್ಟು, ಕಿನ್ನಿತಪಳಿಕೆ, ಎಸ್ಸಿಎಸ್ಟಿ ಕಾಲನಿ, ಜನತಾ ಕಾಲನಿಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಸುಮಾರು 75 ಕುಟುಂಬಗಳು ಈ ರಸ್ತೆಯನ್ನೇ ನೆಚ್ಚಿಕೊಂಡಿವೆ. ಇಚ್ಛಾಶಕ್ತಿಯ ಕೊರತೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಏನಾದರೂ ಸಂಚಾರಕ್ಕೆ ತಡೆಯಾದರೆ ಕರ್ವೇಲಿನಿಂದ ಶಾಂತಿ ನಗರದ ಮೂಲಕ ಉಪ್ಪಿನಂಗಡಿಗೆ ಬರಲು, ಪುತ್ತೂರು ಮೂಲಕ ಮಾಣಿ ರಾಷ್ಟ್ರೀಯ ಹೆದ್ದಾರಿಯನ್ನು ಕೂಡಿಕೊಳ್ಳಲು ಇದು ಅನುಕೂಲವಾಗುತ್ತಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ರಸ್ತೆ ಸಂಪೂರ್ಣ ನನೆಗುದಿಗೆ
ಬಿದ್ದು, ಸಂಚಾರಕ್ಕೆ ಅಸಾಧ್ಯವಾಗಿತ್ತು. ಈ ರಸ್ತೆಯ ದುರಸ್ತಿಗಾಗಿ ಊರವರು ನೆಕ್ಕಿಲಾಡಿ ಗ್ರಾಮ ಪಂಚಾಯತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರಿಗೆ ಮನವಿಗಳನ್ನು ನೀಡಿದ್ದರು. ಹೋರಾಟಕ್ಕೂ ಅಣಿಯಾಗಿದ್ದರು.
Related Articles
ಆದರೆ ಇದೀಗ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಯತ್ನದಿಂದ ಈ ರಸ್ತೆಯ ಡಾಮರು ಕಾಮಗಾರಿಗೆ ನಬಾರ್ಡ್‌ನಡಿ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ
ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಇನ್ನಷ್ಟೇ ನಡೆಯ ಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನೆಲ್ಲ ಆದಷ್ಟು ಬೇಗ ಮುಗಿಸಿ ಈ ರಸ್ತೆಗೆ ಶೀಘ್ರವೇ ಡಾಮರು ಭಾಗ್ಯ ಕಲ್ಪಿಸ ಬೇಕೆಂಬುದು ಗ್ರಾಮಸ್ಥರ ಆಗ್ರಹ.
Advertisement
‘ಡಿಸೆಂಬರ್‌ನಲ್ಲಿ ಕಾಮಗಾರಿ’ನಬಾರ್ಡ್ ಯೋಜನೆಯಡಿ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಅದರಲ್ಲಿ 50 ಲಕ್ಷ ರೂಪಾಯಿಯನ್ನು ಕರ್ವೇಲು – ಶಾಂತಿನಗರ ರಸ್ತೆಗೆ, 50 ಲಕ್ಷ ರೂಪಾಯಿಯನ್ನು ದೇವಸ್ಯ- ಚೆಲ್ಲ್ಯಡ್ಕ ರಸ್ತೆಗೆ ಇಡಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಾಗಿದ್ದು, ಕರ್ವೇಲು – ಶಾಂತಿನಗರ ರಸ್ತೆಯ ಕಾಮಗಾರಿಯನ್ನು ಡಿಸೆಂಬರ್‌ನಲ್ಲಿ ಆರಂಭಿಸಿ, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವ ಇರಾದೆ ಇದೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಕಾಮಗಾರಿಗೆ ಚಾಲನೆ ನೀಡಲಾಗುವುದು.
– ಶಕುಂತಳಾ ಟಿ. ಶೆಟ್ಟಿ, ಶಾಸಕಿ