Advertisement

ಕಾಂತಮಂಗಲ-ಅಜ್ಜಾವರ ರಸ್ತೆಗೆ ಕೊನೆಗೂ ಗುದ್ದಲಿ ಪೂಜೆ

05:35 AM Feb 23, 2019 | Team Udayavani |

ಜಾಲ್ಸೂರು: ರಾಜಕೀಯ ಸಮರಕ್ಕೆ ವೇದಿಕೆಯಾಗಿದ್ದ ಕಾಂತ ಮಂಗಲ- ಅಜ್ಜಾವರ ರಸ್ತೆ ದುರಸ್ತಿಗೆ ಕೊನೆಗೂ ಗುದ್ದಲಿ ಪೂಜೆ ನೆರವೇರಿದೆ. ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸಿಆರ್‌ಎಫ್‌ ಯೋಜನೆಯಡಿ 6 ಕೋ. ರೂ. ವೆಚ್ಚದಲ್ಲಿ ಕಾಂತಮಂಗಲ ವೃತ್ತದಿಂದ ಅಜ್ಜಾವರ ಗ್ರಾಮದ ಅಡ್ಪಂಗಾಯ ತನಕ ಆರು ಕಿ.ಮಿ. ರಸ್ತೆಗೆ ಡಾಮರು ಕಾಮಗಾರಿ ಆರಂಭಗೊಳ್ಳಲಿದೆ. ಸಿದ್ಧತೆಗಳು ಪ್ರಗತಿಯಲ್ಲಿದೆ.

Advertisement

ಮಾರ್ಚ್‌ ಒಳಗೆ ಪೂರ್ಣ?
ಮುಂದಿನ ಮಾರ್ಚ್‌ನೊಳಗೆ ರಸ್ತೆ ಪೂರ್ಣಗೊಳ್ಳಲಿದೆ ಎನ್ನುವುದು ಇಲಾಖೆ ಮಾಹಿತಿ. ಅಲ್ಲಿಯ ತನಕ ಕಾಲಾವಕಾಶ ಇದೆ. ಮೊದಲ ಹಂತದಲ್ಲಿ ಮಳೆಗಾಲಕ್ಕಿಂತ ಮೊದಲು 2 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅನಂತರದ ನಾಲ್ಕು ಕಿ.ಮೀ. ರಸ್ತೆ ವಿಸ್ತರಣೆ, ಸಮತಟ್ಟು ಕಾಮಗಾರಿ ನಡೆಯಲಿದೆ. ಮಳೆಗಾಲ ಕಳೆದ ಬಳಿಕ ಅದರ ಡಾಮರು ಕೆಲಸ ನಡೆಯುತ್ತದೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ರಸ್ತೆ 3 ಮೀ. ಅಗಲವಿದ್ದು, ಅದು 5.5 ಮೀಟರ್‌ ಅಗಲಗೊಳ್ಳಲಿದೆ. ತಿರುವು ರಸ್ತೆ ಸುಧಾರಣೆ, ಖಾಸಗಿ ಜಾಗದಲ್ಲಿ ರಸ್ತೆ ಅಗಲ ಕಾಮಗಾರಿ ಇತ್ಯಾದಿ ಕೆಲಸಗಳು ಸೇರಿವೆ. ಒಟ್ಟು 9 ಮೀಟರ್‌ ಅಗಲದಲ್ಲಿ 5.5 ಮೀಟರ್‌ನಷ್ಟು ಡಾಮರು ರಸ್ತೆ, ಉಳಿದದ್ದು ಚರಂಡಿ ಪಾದಚಾರಿ ನಡಿಗೆಗೆ ಬಳಕೆಯಾಗಲಿದೆ.

ಹಲವು ವರ್ಷದ ವ್ಯಥೆ
ಕಾಂತಮಂಗಲದಿಂದ ಅಜ್ಜಾವರ ಸಂಪರ್ಕದ 6 ಕಿ.ಮೀ. ರಸ್ತೆ ಹೊಂಡ ತುಂಬಿ ಸಂಚಾರಕ್ಕೆ ಅಯೋಗ್ಯವಾಗಿತ್ತು. ಕೇರಳ- ಕರ್ನಾಟಕ ಗಡಿಭಾಗ ಮಂಡೆಕೋಲು ಸಂಪರ್ಕದ ರಸ್ತೆ ಇದಾಗಿದ್ದು, ಹಲವು ವರ್ಷಗಳಿಂದ ಈ ಭಾಗದ ಜನರು ರಸ್ತೆ ದುರಸ್ತಿಗೆ ಆಗ್ರಹಿಸುತ್ತಿದ್ದರು. 2 ವರ್ಷಗಳ ಹಿಂದೆ ಶಾಸಕ ಎಸ್‌. ಅಂಗಾರ ಅವರು ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಸರ್ವೆ ಪೂರ್ಣಗೊಂಡಿತ್ತು. ಇದೇ ವೇಳೆ ಈ ರಸ್ತೆಗೆ ಸಿಆರ್‌ಎಫ್‌ (ಕೇಂದ್ರ) ನಿಧಿಯಿಂದ 6 ಕೋಟಿ ರೂ. ಮಂಜೂರಾತಿಗೊಂಡಿತ್ತು. ಹಾಗಾಗಿ ನಮ್ಮ ಗ್ರಾಮ- ನಮ್ಮ ರಸ್ತೆ ಯೋಜನೆಯಡಿ ಮಂಜೂರಾತಿಗೊಂಡ 4 ಕೋಟಿ ರೂ. ಅನುದಾನವನ್ನು ಬೇರೆ ರಸ್ತೆಗೆ ವರ್ಗಾಯಿಸಿ, ಸಿಆರ್‌ಎಫ್‌ ನಿಧಿಯಿಂದ ಬಿಡುಗಡೆಗೊಂಡ ಅನುದಾನ ಬಳಸಲು ನಿರ್ಧರಿಸಲಾಗಿತ್ತು.

ಟೆಂಡರ್‌ ಹಂತದಲ್ಲಿ ಪೆಂಡಿಂಗ್‌
ಸಿಆರ್‌ಎಫ್‌ ಅನುದಾನ ಟೆಂಡರ್‌ ಹಂತದಲ್ಲಿ ಬಾಕಿ ಆಗಿತ್ತು. ಕೇಂದ್ರ ಸರಕಾರ ಹಣ ನೀಡಿಲ್ಲ. ಹಾಗಾಗಿ ಸಿಆರ್‌ಎಫ್‌ ಅನುದಾನದಡಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ದೂರಿದರೆ, ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಅನುದಾನ ನೀಡದೆ ಕಾಮಗಾರಿಗೆ ತಡೆ ಒಡ್ಡಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿತ್ತು. ವಿಧಾನಸಭಾ ಚುನಾವಣೆ ಸಂದರ್ಭ ಎರಡು ರಾಜಕೀಯ ಪಕ್ಷಗಳ ರಸ್ತೆ ವಿಚಾರದಲ್ಲಿ ಪರಸ್ಪರ ಆರೋಪ – ಪ್ರತ್ಯಾರೋಪಗಳಿಗೆ ಇದು ವೇದಿಕೆ ಆಗಿ ಮಾರ್ಪಾಟ್ಟಿತ್ತು. ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಲಾ°ಡಿಗೆ ಜಾಥಾ, ಅಜ್ಜಾವರ ನಾಗರಿಕ ಹಿತರಕ್ಷಣ ವೇದಿಕೆ, ರಸ್ತೆ ಹೋರಾಟ ಸಮಿತಿ ವತಿಯಿಂದ ಪ್ರತ್ಯೇಕ ಪ್ರತಿಭಟನೆ, ಅಧಿಕಾರಿಗೆ ದಿಗ್ಬಂಧನ ಹಾಕಿ ರಸ್ತೆ ತಡೆ, ಎಂಜಿನಿಯರ್‌ ಅವರು ಸಿಆರ್‌ಎಫ್‌ ಅನುದಾನದ ಕುರಿತಂತೆ ನಡೆಸಿದ ದೂರವಾಣಿ ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿದ್ಯಾಮಾನಗಳು ಕೂಡ ನಡೆದಿತ್ತು.

Advertisement

ರಸ್ತೆ ಕಾಮಗಾರಿಗೆ ಚಾಲನೆ
ಕಾಂತಮಂಗಲದಿಂದ ಅಜ್ಜಾವರ ಗ್ರಾಮದ ಅಡ್ಪಂಗಾಯ ತನಕ ಆರು ಕಿ.ಮಿ. ರಸ್ತೆ ಅಭಿವೃದ್ಧಿಗೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ. ಸದಸ್ಯ ರಾದ ಹರೀಶ್‌ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ, ಡೆಕೋಲು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಪ್ರಕಾಶ್‌ ಪೆರಾಜೆ, ಪ್ರಮುಖರಾದ ನವೀನ್‌ ಕುಮಾರ್‌ ಮೇನಾಲ, ಸುರೇಶ್‌ ಕಣೆಮರಡ್ಕ, ಸುಬೋದ್‌ ಶೆಟ್ಟಿ ಮೇನಾಲ, ಶಿವಪ್ರಸಾದ್‌ ಉಗ್ರಾಣಿಮನೆ, ವೆಂಕಟ್ರಮಣ ಮುಳ್ಯ, ಮಹೇಶ್‌ ಕುಮಾರ್‌ ಮೇನಾಲ, ಪ್ರಬೋದ್‌ ಶೆಟ್ಟಿ ಮೇನಾಲ, ಆನಂದ ರಾವ್‌ ಕಾಂತ ಮಂಗಲ, ಅಬ್ದುಲ್‌ ಕುಂಞಿ ನೇಲ್ಯಡ್ಕ, ಹರೀಶ್‌ ರೈ ಉಬರಡ್ಕ, ಉದಯ ಆಚಾರ್‌, ಜನಾರ್ದನ ಬರೆಮೇಲು, ಬಯಂಬು ಭಾಸ್ಕರ ರೈ, ಸಂತೋಷ್‌ ರೈ, ಕಮಲಾಕ್ಷ ರೈ, ಸುನಿಲ್‌ ರೈ ಕಿಟ್ಟಣ್ಣ ರೈ, ವಿನುತಾ ಪಾತಿಕಲ್ಲು, ರಾಂಪ್ರಸಾದ್‌, ಎಂಜಿನಿಯರ್‌ ನಾಗರಾಜ್‌ ಉಪಸ್ಥಿತರಿದ್ದರು.

ಮಳೆಗಾಲದ ಮುನ್ನ ಪೂರ್ಣ 
ಒಟ್ಟು 6 ಕಿ.ಮೀ. ರಸ್ತೆಯಲ್ಲಿ ಮಳೆಗಾಲದ ಮೊದಲು 2 ಕಿ.ಮೀ. ರಸ್ತೆ ಡಾಮರು ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದ 4 ಕಿ.ಮೀ. ರಸ್ತೆಯನ್ನು ಡಾಮರು ಕಾಮಗಾರಿಗೆ ಸಿದ್ಧಗೊಳಿಸಿ ಮಳೆಗಾಲ ಕಳೆದ ಅನಂತರ ಡಾಮರು ಹಾಕಲಾಗುವುದು. ಈಗಿನ ರಸ್ತೆಗಿಂತ 2.5 ಮೀ.ಅಗಲ ಹೆಚ್ಚಳವಾಗುವ ಕಾರಣ ವಿಸ್ತರಣೆ ಕಾಮಗಾರಿಯು ಆಗಬೇಕಿದೆ.
ನಾಗರಾಜ್‌,
ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ವಿಭಾಗ

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next