Advertisement

ತನಿಖೆ ಎದುರಿಸಲು ಸಿದ್ಧ: WHO ಸಮ್ಮೇಳನದಲ್ಲಿ ಚೀನ ಅಧ್ಯಕ್ಷರ ಘೋಷಣೆ

02:46 AM May 19, 2020 | Hari Prasad |

ಜಿನಿವಾ: ಕೋವಿಡ್ ಉಗಮ ಹೇಗೆ ಆಯಿತು ಎಂಬುದರ ಬಗ್ಗೆ ತನಿಖೆಗೆ ಚೀನಾ ಒಪ್ಪಿಕೊಂಡಿದೆ.

Advertisement

ಹೀಗಾಗಿ, ಈ ಬಗ್ಗೆ ತನಿಖೆಯಾಗಲೇಬೇಕು ಎಂದು ಒತ್ತಾಯಿಸುತ್ತಿದ್ದ ಅಮೆರಿಕ ಮತ್ತು ಈ ಬಗ್ಗೆ ನಿರ್ಣಯಕ್ಕೆ ಸಹಿ ಹಾಕಿರುವ 100ಕ್ಕೂ ಹೆಚ್ಚು ರಾಷ್ಟ್ರಗಳ ಒತ್ತಾಯಕ್ಕೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದ ಸಮ್ಮತಿ ಸೂಚಿಸಿದ್ದಾರೆ.

ಸೋಮವಾರ ಜಿನೀವಾದಲ್ಲಿ ಆರಂಭವಾದ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ವೇಳೆ ಚೀನ ಅಧ್ಯಕ್ಷರು ಜಗತ್ತಿನ ಆಗ್ರಹಕ್ಕೆ ಮಣಿದಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಬೀಜಿಂಗ್‌ನಿಂದ ಮಾತನಾಡಿದ ಕ್ಸಿ ಜಿನ್‌ಪಿಂಗ್‌ ಸೋಂಕಿನ ಬಗ್ಗೆ ತಮ್ಮ ರಾಷ್ಟ್ರ ಯಾವುದೇ ಅಂಶವನ್ನು ಮುಚ್ಚಿಟ್ಟಿಲ್ಲ. ಪಾರದರ್ಶಕವಾಗಿಯೇ ಎಲ್ಲಾ ಮಾಹಿತಿಗಳನ್ನು ಜಗತ್ತಿಗೆ ನೀಡಿದೆ ಎಂಬ ಸಮರ್ಥನೆಯನ್ನೂ ನೀಡಿದ್ದಾರೆ.

ಕೋವಿಡ್ ನಿಂದ ನಲುಗಿರುವ ವಿಶ್ವ ಸಮುದಾಯದ ಚೇತರಿಕೆಗಾಗಿ ಒಟ್ಟು ಆರು ಕೊಡುಗೆಗಳನ್ನು ಪ್ರಕಟಿಸಿದರು.
‘ಸೋಂಕಿನ ಸಮಸ್ಯೆಗೆ ಜಗತ್ತು ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎಂಬುದರ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದರ ಬಗ್ಗೆ ನಾವು ಬೆಂಬಲಿಸುತ್ತೇವೆ. ಗಂಭೀರ ಪರಿಸ್ಥಿತಿಯ ಈ ಸಮಯದಲ್ಲಿ ಜಗತ್ತಿನ ರಾಷ್ಟ್ರಗಳ ಭಾವನೆ ಗೌವಿಸುತ್ತೇವೆ’ ಎಂದರು.

ಇದರ ಜತೆಗೆ ಸೋಂಕಿನಿಂದ ತೀವ್ರವಾಗಿ ನೊಂದಿರುವ ರಾಷ್ಟ್ರಗಳಿಗೆ 2 ಬಿಲಿಯನ್‌ ಡಾಲರ್‌ ಮೊತ್ತದ ನೆರವು ನೀಡುವುದಾಗಿಯೂ ಚೀನ ಅಧ್ಯಕ್ಷರು ಘೋಷಿಸಿದ್ದಾರೆ. ಚೀನ ಅಧ್ಯಕ್ಷರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆರ್ಡೋಸ್‌ ಅಧನೋಮ್‌ ಪರಿಸ್ಥಿತಿಯನ್ನು ಶ್ಲಾಘನೀಯ ರೀತಿಯಲ್ಲಿ ನಿರ್ವಹಿಸಿದ್ದಾರೆ ಎಂದು ಹೇಳಲು ಮರೆಯಲಿಲ್ಲ.

Advertisement

ಇಂದು ಚರ್ಚೆ: ಆಸ್ಟ್ರೇಲಿಯಾ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸೇರಿದಂತೆ 194 ರಾಷ್ಟ್ರಗಳು ಬೆಂಬಲ ನೀಡಿರುವ ವೈರಸ್‌ ಉಗಮವಾಗಬೇಕು ಎಂಬ ಒತ್ತಾಯದ ಬಗ್ಗೆ ಮಂಗಳವಾರ ಚರ್ಚೆ ನಡೆಯಲಿದೆ.

ಶೀಘ್ರವೇ ತನಿಖೆ: ಜಗತ್ತಿನ ರಾಷ್ಟ್ರಗಳ ಒತ್ತಡಕ್ಕೆ ಮಣಿದಿರುವ ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆರ್ಡೋಸ್‌ ಪ್ರತಿಕ್ರಿಯೆ ನೀಡಿ ‘ವೈರಸ್‌ ಉಗಮದ ಬಗ್ಗೆ ತನಿಖೆ ನಡೆಯಲಿದೆ. ಹೀಗಾಗಿ, ಅದರ ವರದಿಯೂ ಕೈ ಸೇರಲಿದೆ. ಈ ಪರಿಸ್ಥಿತಿ ನಮಗೆ ಹಲವು ಪಾಠಗಳನ್ನು ಕಲಿಸಿದೆ’ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕೂಡಲೇ ತನಿಖೆ ನಡೆದು ವರದಿ ಬರಲಿದೆ ಎಂದು ಹೇಳಿರುವುದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತೂಂದು ಬೆಳವಣಿಗೆಯಲ್ಲಿ ವಿಶ್ವಸಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹಾಲಿ ಸ್ಥಿತಿಯನ್ನು ನಿಭಾಯಿಸಿದ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿಯುತವಾಗಿ ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿಭಾಯಿಸಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪೂರಕವಾಗಿ ಸಂಸ್ಥೆ ವರ್ತಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಈ ನಡುವೆ ಅಮೆರಿಕದ ಕಂಪನಿಯೊಂದು ಸೋಂಕಿನ ಬಗ್ಗೆ ಲಸಿಕೆಯೊಂದು ಸಿದ್ಧವಾಗುತ್ತಿದೆ. ಅದರ ಪ್ರಾಥಮಿಕ ಪರೀಕ್ಷಾ ಮಾಹಿತಿ ತೃಪ್ತಿಕರವಾಗಿದೆ ಎಂದು ಹೇಳಿಕೊಂಡಿದೆ.

ಬಿಗಿಪಟ್ಟಿನ ನಡುವೆಯೇ ಶುರುವಾದ ಸಮ್ಮೇಳನ
ಕೋವಿಡ್ ವೈರಸ್‌ ನಿರ್ಮೂಲನೆಗಾಗಿ ಜಾಗತಿಕ ರೂಪುರೇಷೆಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಆರಂಭವಾದ ವಿಶ್ವ ಆರೋಗ್ಯ ಸಂಸ್ಥೆಯ (WHO) ಸಮ್ಮೇಳನ, ಅಮೆರಿಕ – ಚೀನ ನಡುವಿನ ಸಂಘರ್ಷದ ಭೀತಿಯಲ್ಲೇ ಉದ್ಘಾಟನೆಗೊಂಡಿದೆ. ಕೋವಿಡ್ ಉಗಮದ ಬಗ್ಗೆ WHO ನಿಂದಲೇ ಸೂಕ್ತ ತನಿಖೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಆಗ್ರಹಕ್ಕೆ ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳೂ ಕೈ ಜೋಡಿಸಿವೆ.

ರವಿವಾರದ ಹೊತ್ತಿಗೆ ಸುಮಾರು 62 ದೇಶಗಳು ಈ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಸೋಮವಾರದಂದು, ಸಮ್ಮೇಳನದಲ್ಲಿ ತನಿಖೆ ಕುರಿತ ಪ್ರಸ್ತಾವ‌ ಚರ್ಚೆಗೊಳಗಾಗಲೇಬೇಕು ಎಂದು ಆಗ್ರ ಹಿಸಿ ಸಲ್ಲಿಸಲಾಗಿದ್ದ ಮನವಿ ಪತ್ರಕ್ಕೆ ಭಾರತ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳು ಸಹಿ ಹಾಕಿದ್ದವು. ಮತ್ತೂಂದೆಡೆ, ಯೂರೋಪ್‌ ಒಕ್ಕೂಟವೂ ಇದಕ್ಕೆ ಬೆಂಬಲ ಸೂಚಿಸಿದ್ದರಿಂದ ಆಗ್ರಹಕ್ಕೆ ಮತ್ತಷ್ಟು ಶಕ್ತಿ ಬಂದಿತ್ತು.

ಹಾಗಾಗಿ, ಸಮ್ಮೇಳನದ ಮೊದಲ ದಿನವೇ ಸಭೆಯಲ್ಲಿ ಚೀನ ಪರ – ವಿರೋಧಿ ರಾಷ್ಟ್ರಗಳ ನಡುವೆ ಬಿಸಿ ವಾತಾವರಣ ಸೃಷ್ಟಿಯಾಗುತ್ತದೆ ಎಂಬ ಭೀತಿಯೂ ಆವರಿಸಿತ್ತು. ಆದರೆ, ಅದೆಲ್ಲದಕ್ಕೂ ಮೊದಲೇ ಚೀನದ ಅಧ್ಯಕ್ಷ
ಕ್ಸಿ ಜಿನ್‌ ಪಿಂಗ್‌ ಅವರು ಭಾಷಣ ಮಾಡಿ, ಕೋವಿಡ್ ಸಮರಕ್ಕೆ ಕೆಲವಾರು ಕೊಡುಗೆಗಳನ್ನು ಘೋಷಿಸುವ ಮೂಲಕ ಈ ಬೇಗೆಯನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next