ಕಲಬುರಗಿ: ನಗರದ ರಿಂಗ್ ರಸ್ತೆಯ ಟಿಪ್ಪು ಸುಲ್ತಾನ್ ಕಾಲೇಜಿನ ಬಳಿ ಮೇ 15ರಂದು ನಡೆದ ರಸ್ತೆ ಅಪಘಾತ ಪ್ರಕರಣ ತಿರುವು ಪಡೆದಿದೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ ವಿಷಯ ಬಯಲಿಗೆ ಬಂದಿದೆ.
ಸ್ಕೂಟರ್ ನಲ್ಲಿ ಹೊರಟಿದ್ದ ಅಬ್ದುಲ್ ರಹೀಂ (63) ಎಂಬುವವರು ಬೊಲೆರೊ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಇದನ್ನು ಪೊಲೀಸರು ರಸ್ತೆ ಅಪಘಾತವೆಂದೇ ಭಾವಿಸಿದ್ದರು. ಈ ಬಗ್ಗೆ ಸಂಚಾರಿ ಠಾಣೆ-2ರಲ್ಲಿ ಪ್ರಕರಣ ಸಹ ದಾಖಲಾಗಿತ್ತು.
ಆದರೆ, ರವಿವಾರ ಸಂಚಾರ ಠಾಣೆಗೆ ಹಾಜರಾದ ಮೃತ ಅಬ್ದುಲ್ ಘನಿ ಮಗ ಅಜ್ಮೋದ್ದೀನ್ ತಮ್ಮ ತಂದೆಯದ್ದು ರಸ್ತೆ ಅಪಘಾತವಲ್ಲ. ನಮ್ಮ ಚಿಕ್ಕಪ್ಪನ ಅಳಿಯ ಮಕ್ಬೂಲ್ ಸೌದಾಗರ ಅವರು ತಂದೆಯವರ ಬಳಿ ಹಣ ಕೇಳಿದ್ದರು. ಆದರೆ, ತಂದೆ ಹಣ ಕೊಡಲು ನಿರಾಕರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು.
ಅಜ್ಮೋದ್ದೀನ್ ಈ ಹೇಳಿಕೆ ನೀಡುತ್ತಿದ್ದಂತೆ ತಕ್ಷಣವೇ ಕಾರ್ಯ ಪ್ರವೃತ್ತರಾದ ತನಿಖಾಧಿಕಾರಿ, ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಿನಾಥ ಅವರು ಆರೋಪಿ ಮಕ್ಬೂಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ತಾನೇ ಬೊಲೆರೊ ವಾಹನದಿಂದ ಗುದ್ದಿ ಕೊಲೆಗೈದಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಸತೀಶಕುಮಾರ ತಿಳಿಸಿದ್ದಾರೆ.
ಕೊಲೆ ಪ್ರಕರಣವಾದ್ದರಿಂದ ಇದೀಗ ಈ ಪ್ರಕರಣವನ್ನು ಸಂಚಾರಿ ಠಾಣೆ-2ರಿಂದ ರೋಜಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.