Advertisement

ದಾಖಲೆ ಬರೆದ ಸಹಿಷ್ಣು

12:30 AM Feb 08, 2019 | |

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ದಾಖಲೆ ಬರೆದ ಚಿತ್ರಗಳಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ ಕನ್ನಡದ “ಸಹಿಷ್ಣು’ ಚಿತ್ರ ಹೊಸದೊಂದು ದಾಖಲೆ ಬರೆದಿದೆ. ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಐ -ಫೋನ್‌ನಲ್ಲಿ 2.18 ಗಂಟೆ ಅವಧಿಯಲ್ಲಿ ಸಿಂಗಲ್‌ ಶಾಟ್‌ನಲ್ಲೇ ಚಿತ್ರೀಕರಣಗೊಂಡಿರುವ “ಸಹಿಷ್ಣು’ ಚಿತ್ರ “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ಗೆ ಪಾತ್ರವಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಡಾ.ಸಂಪತ್‌ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣದ ಜೊತೆಗೆ ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. ವಿಶೇಷವೆಂದರೆ, ಡಾ.ಸಂಪತ್‌ ಅವರ ಪ್ರಯತ್ನಕ್ಕೆ “ಇಂಡಿಯಾ ಬುಕ್‌ ಆಫ್ ರೆಕಾರ್ಡ್‌’ ದಾಖಲಾಗಿದ್ದಷ್ಟೇ ಅಲ್ಲ, “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ನಲ್ಲೂ ದಾಖಲಾಗಿ ವಿಶ್ವದಾಖಲೆ ಬರೆದಿದೆ. ಅಂದಹಾಗೆ, ವಿದೇಶಕ್ಕೆ ಹೋಗಿ “ಗೋಲ್ಡನ್‌ ಬುಕ್‌ ಆಫ್ ವಲ್ಡ್‌ ರೆಕಾರ್ಡ್‌’ ದಾಖಲೆಯ ಪ್ರಮಾಣ ಪತ್ರ ಪಡೆಯಲು ಲಕ್ಷಾಂತರ ರುಪಾಯಿ ಖರ್ಚು ಆಗುತ್ತೆ ಎಂಬುದನ್ನು ಮನಗಂಡ ನಿರ್ದೇಶಕರು, ವಿದೇಶದಿಂದಲೇ ತಮ್ಮ ವಿಳಾಸಕ್ಕೆ ಬಂದಂತಹ ದಾಖಲೆ ಪ್ರಮಾಣ ಪತ್ರವನ್ನು ಖ್ಯಾತ ನಟ ರಜನಿಕಾಂತ್‌ ಮೂಲಕ ಪಡೆಯಬೇಕು ಎಂಬ ನಿರ್ಧಾರ ಮಾಡಿ, ಅವರನ್ನು ಭೇಟಿ ಮಾಡಿ ಕೊನೆಗೂ ಪ್ರಮಾಣ ಪತ್ರವನ್ನು ಅವರಿಂದ ಪಡೆದು ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.

Advertisement

ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ಡಾ.ಸಂಪತ್‌, “ಚಿತ್ರದ ಪ್ರಯತ್ನ ಮೆಚ್ಚಿಕೊಂಡು ಅದಕ್ಕೆ ಅರ್ಹತೆ ಇದೆ ಎಂಬ ಕಾರಣಕ್ಕೆ ವಿಶ್ವದಾಖಲೆ ಪಟ್ಟ ದೊರೆತಿದೆ. ಆದರೆ, ಅಲ್ಲಿಗೆ ಹೋಗಿ ಪಡೆಯಲು ಸಾಧ್ಯವಾಗದಿದ್ದರಿಂದ, ವಿಳಾಸಕ್ಕೆ ಬಂದ ಪ್ರಮಾಣ ಪತ್ರವನ್ನು ರಜನಿಕಾಂತ್‌ ಅವರ ಮೂಲಕ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ಅವರ ಭೇಟಿ ಸುಲಭವಲ್ಲ. ವರ್ಷಕ್ಕೊಮ್ಮೆ ಅವರು ಮನ:ಶಾಂತಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ ಎಂಬ ಮಾಹಿತಿ ತಿಳಿದು,  ಡೆಹರಾಡೂನ್‌ಗೆ ಹೋಗಿ, ಅಲ್ಲಿಂದ ಹೃಷಿಕೇಶ್‌ ತಲುಪಿದಾಗ ರಜನಿಕಾಂತ್‌ ಅವರು, ಮಿಲಿಟರಿ ಕ್ಯಾಂಪಸ್‌ ಕೇಂದ್ರಸ್ಥಾನವಾದ ರಾಣಿಕೇತು ಎಂಬ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದಾರೆಂದು ತಿಳಿದುಕೊಂಡೆ. ಹೇಗೋ, ಅವರ ಸ್ಥಳ ಪತ್ತೆ ಮಾಡಿ, ದೂರದ ಬೆಂಗಳೂರಿನಿಂದ ಭೇಟಿ ಮಾಡಲು ಬಂದಿದ್ದೇವೆ ಎಂದು ಅವರ ಆಪ್ತರಿಗೆ ವಿಷಯ ತಲುಪಿಸಿದಾಗ, ಕೊನೆಗೆ ರಜನಿಕಾಂತ್‌ ಅವರೇ, ಆತ್ಮೀಯವಾಗಿ ಬರಮಾಡಿಕೊಂಡು ಬಂದ ವಿಷಯವನ್ನೆಲ್ಲಾ ಕೇಳಿ, ಖುಷಿಗೊಂಡರು. ನಂತರ ಐದು ನಿಮಿಷಗಳ ಕಾಲ ಚಿತ್ರದ ತುಣುಕು ವೀಕ್ಷಿಸಿ, ವಿದೇಶದಿಂದ ಬಂದ ಕವರ್‌ ಅನ್ನು ಅವರೇ ತೆಗೆದು, ಅದರಲ್ಲಿದ್ದ ವಿಶ್ವದಾಖಲೆಯ ಪ್ರಮಾಣಪತ್ರವನ್ನು ನನಗೆ ನೀಡಿ, ಫ‌ಲಕವನ್ನು ಕೊರಳಿಗೆ ಹಾಕಿ ಸ್ವತಃ ಅವರ ಸಹಾಯಕನಿಗೆ ಚೆನ್ನಾಗಿ ಫೋಟೋ ತೆಗೆಯುವಂತೆ ಹೇಳಿದ್ದಲ್ಲದೇ, ಬಾಗಿಲುವರೆಗೂ ನಮ್ಮನ್ನು ಬೀಳ್ಕೊಟ್ಟು, ಇನ್ನೇನಾದರೂ ಬೇಕಿತ್ತಾ ಎಂಬ ಪ್ರೀತಿಯ ಅಭಿಮಾನ ತೋರಿಸಿದರು’ ಎಂದು ಸಂಪತ್‌ ಹೇಳಿಕೊಂಡರು.

ಅಂದಹಾಗೆ, ಪ್ರಸ್ತುತ ದೇಶದಲ್ಲಿ ನಡೆಯುವ ಸೂಕ್ಷ್ಮ ವಿದ್ಯಮಾನ ಕುರಿತ ಅಂಶಗಳು ಚಿತ್ರದ ಹೈಲೈಟ್‌. ಒಂದೇ ಟೇಕ್‌ನಲ್ಲಿ ಚಿತ್ರಿಸಿರುವ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು’ ಪ್ರಮಾಣ ಪತ್ರ ನೀಡಿದೆ. ಚಿತ್ರೀಕರಣಕ್ಕೂ ಮುನ್ನ, ಸಾಕಷ್ಟು ರಿಹರ್ಸಲ್‌ ಕೂಡ ಮಾಡಿದೆ ಚಿತ್ರತಂಡ.

ಅಂದಹಾಗೆ, ನಿರ್ದೇಶಕರು ಈ ನಡುವೆಯೇ “ಸಹಿಷ್ಣು’ ಚಿತ್ರವನ್ನು ಐ-ಫೋನ್‌ನಲ್ಲಿ ಚಿತ್ರೀಕರಿಸಿದ ಕುರಿತು ಮಂಡಿಸಿದ ಪ್ರಬಂಧಕ್ಕೆ ವಲ್ಡ್‌ ರೆಕಾರ್ಡ್‌ ಯೂನಿರ್ವಸಿಟಿ ಪ್ರಬಂಧ ಪರಿಗಣಿಸಿ, ಗೋಲ್ಡ್‌ಮೆಡಲ್‌ನೊಂದಿಗೆ ಪಿಎಚ್‌ಡಿ ಪದವಿಯನ್ನು ವಿಯಟ್ನಾಂ ದೇಶದ ಹೋಚಿಮನ್‌ ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗಿದೆ. ಕನ್ನಡ ನಿರ್ದೇಶಕನೊಬ್ಬ ವಿಶ್ವದಲ್ಲಿ ಸಿನಿಮಾ ಕುರಿತು ಪ್ರಬಂಧ ಮಂಡಿಸಿ, ಗೋಲ್ಡ್‌ಮೆಡಲ್‌ ಹಾಗು ಪಿಎಚ್‌ಡಿ ಪದವಿ ಪಡೆದದ್ದು ಮೊದಲು. ಇಷ್ಟರಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ನಿರ್ದೇಶಕರು ತಯಾರಿ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next